ಡಿಜೆ ಹಳ್ಳಿ ,ಕೆಜೆ ಹಳ್ಳಿ ಪ್ರಕರಣವಾಗಲಿ, ಈದ್ಗಾ ಇಶ್ಯೂ ಆಗಲಿ , ಕರ್ನಾಟಕದ ಯಾವ ಮೂಲೆಯಲ್ಲೇ ಆಗಲಿ ಸಮುದಾಯಕ್ಕೊಂದು ಸಣ್ಣ ನೋವಾದರೂ ಮುಂಚೂಣಿ ನಿಂತು ತಕ್ಷಣ ಭೇಟಿ ನೀಡಿ ಪರಿಣಾಮಕಾರಿ ಹೆಜ್ಜೆಯಿಡುವವರು ಬಿಝಡ್ ಜಮೀರ್ ಅಹಮದ್.
ಚಾಮಾರಾಜನಗರ ಈದ್ಗಾ ಇಶ್ಯೂನಲ್ಲಿ 4ದಿನ ದೆಹಲಿಯಲ್ಲಿ ನಿಂತು ಸುಪ್ರೀಂ ಕೋರ್ಟ್ ಹೋರಾಟದಲ್ಲಿ ಗೆದ್ದು ಬಂದಿದ್ದರು. ಅದೇ ಜಮೀರ್ ಅಹಮದ್ ಕರ್ನಾಟಕದ ಕರಾವಳಿಯ ಈ ಪರಿಸ್ಥಿತಿಯಲ್ಲಿ ಖುದ್ದು ತಕ್ಷಣ ಭೇಟಿಯಾಗಲೇ ಬೇಕಾದ ಜವಾಬ್ದಾರಿಯಲ್ಲಿ ಇರುವವರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು.
ಕರಾವಳಿಯಲ್ಲಿ ಒಬ್ಬರಿಗೊಬ್ಬರು ಕೊಲೆ ನಡೆಸುವುದು ಸಾಮಾನ್ಯ ಸ್ಥಿತಿ ಅಂತ ಸರ್ಕಾರ ಪ್ರಾರಂಭ ಹಂತದಲ್ಲಿ ನಿಷ್ಕ್ರಿಯವಾಗಿ ಕಂಡಾಗ, ಮಾನ್ಯ ಮುಖ್ಯಮಂತ್ರಿಗಳ ಸಹಿತ ಸರ್ಕಾರಕ್ಕೆ ಪ್ರಕರಣದ ಗಂಭೀರತೆ ಮತ್ತು ಕರಾವಳಿಯ ಪರಿಸ್ಥಿತಿಯನ್ನು ತಿಳಿಸಿಕೊಟ್ಟು ಗಂಭೀರ ಹೆಜ್ಜೆಗೆ ಮುಂದಡಿಯಿಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ಅವರು. ಇವತ್ತು ಬೆಳ್ಳಂಬೆಳಿಗ್ಗೆ ಕರಾವಳಿಯ ನೈಜ ಚಿತ್ರಣ ಬಲ್ಲ ಹರಿಪ್ರಸಾದ್ ರವರ ಮನೆಗೆ ಖುದ್ದು ಮುಖ್ಯಮಂತ್ರಿಯನ್ನು ಕರೆದುಕೊಂಡು ಹೋದಲ್ಲಿಯೂ ಸಚಿವರು ಸಕ್ರಿಯವಾಗಿ ಕಾಣುತ್ತಿದ್ದಾರೆ.
ಆದರೆ ಜಿಲ್ಲೆಗೆ ಕ್ಷಣ ಮಾತ್ರದಲ್ಲಿ ತಲುಪಬೇಕಿದ್ದ ಅವರು ಬರದಿರಲು ಕಾರಣವೇನು!? ಅವರನ್ನು ತಡೆದವರು ಯಾರು ಎಂಬ ಯಕ್ಷ ಪ್ರಶ್ನೆ ಕರಾವಳಿಯಲ್ಲಿ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಈ ಜವಾಬ್ದಾರಿಯಿಂದ ದೂರ ನಿಲ್ಲಲು ಸರ್ಕಾರವೇನಾದರೂ ಮಾರ್ಗದರ್ಶನ ನೀಡಿತೇ ಎಂಬ ಯಕ್ಷ ಪ್ರಶ್ನೆ ಕರಾವಳಿಗರದ್ದು!