janadhvani

Kannada Online News Paper

ಶುಭ ಸೂಚನೆ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇ.6ಕ್ಕೆ ಇಳಿಕೆ

ನವದೆಹಲಿ,ಏ.25: ವಿಶ್ವಾದ್ಯಂತವಿರುವ ಜನರ ನಿದ್ದೆಗೆಡಿಸಿದ ಕೋವಿಡ್-19 ಲಕ್ಷಾಂತರ ಮಂದಿಯನ್ನು ಬಲಿ ಪಡೆದುಕೊಂಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾತ್ರವೇ ಇದನ್ನು ನಿಯಂತ್ರಿಸಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುನ್ಸೂಚನೆ ನೀಡಿದೆ.

ಇದರನ್ವಯ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಎರಡನೇ ಅವಧಿಗೆ ಜಾರಿ ಮಾಡಲಾದ ಲಾಕ್ಡೌನ್ ಪರಿಣಾಮದಿಂದ ಕಡೆಗೂ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದಿರುವ ಲಕ್ಷಣಗಳು ಕಂಡುಬಂದಿವೆ.

ಮಾರ್ಚ್ 23ರಿಂದ ಏಪ್ರಿಲ್ 23ರವರೆಗೂ ಸುಮಾರು 5 ಲಕ್ಷ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ಪರಿಣಾಮ ಒಂದು ತಿಂಗಳ ಅವಧಿಯಲ್ಲಿ ಸೋಂಕಿತರ ಪತ್ತೆ ಪ್ರಮಾಣ ಜಾಸ್ತಿ ಇತ್ತು. ಆದರೀಗ ಕೊರೋನಾ ಪರೀಕ್ಷೆ ಪ್ರಮಾಣ ಇದರ 33 ಪಟ್ಟು ಹೆಚ್ಚಿಸಲಾಗಿದೆ. ಹೀಗಿದ್ದರೂ ಕೊರೋನಾ ಹರಡುವಿಕೆ ಪ್ರಮಾಣ ಶೇ.6ರಷ್ಟು ಮಾತ್ರ ಇದೆ. ಈ ಮೂಲಕ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ.

ಪ್ರತಿದಿನ ಶೇ.100ರ ಗಡಿ ದಾಟುತ್ತಿದ್ದ ಕೊರೋನಾ ಸೋಂಕು ಈಗ ದಿಢೀರ್ ನಿನ್ನೆ ಮಾತ್ರ ಶೇ.6ಕ್ಕೆ ಇಳಿಕೆಯಾಗಿದೆ. ಇದರರ್ಥ ದೇಶದಲ್ಲಿ ಕೊರೋನಾ ವೈರಸ್‌ ಹರಡುವ ವೇಗ ಕಡಿಮೆಯಾಗಿದೆ ಎಂದು. ಇನ್ನು ಮುಂದೆಯೂ ಲಾಕ್‌ಡೌನ್‌ ಮುಗಿದ ನಂತರ ಇನ್ನಷ್ಟು ಕಡಿಮೆಯಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇನ್ನೊಂದೆಡೆ ಮಳೆಗಾಲ ಆರಂಭವಾದ ನಂತರ ಮತ್ತೆ ವೈರಸ್ಸಿನ ಎರಡನೇ ಅಲೆ ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈ ಕಾರಣಕ್ಕಾದರೂ ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಲಾಕ್ಡೌನ್ ಆದೇಶ ಕಟ್ಟುನಿಟ್ಟಿನಿಂದ ಪಾಲಿಸಬೇಕಾಗಿದೆ.

error: Content is protected !! Not allowed copy content from janadhvani.com