janadhvani

Kannada Online News Paper

ಪ್ರಧಾನಿ ಮೋದಿಗೆ ‘ಫಿಲಿಪ್ ಕೊಟ್ಲರ್ ಪ್ರಶಸ್ತಿ’ ಹೆಚ್ಚಿದ ನಿಗೂಢತೆ

ಹೊಸದಿಲ್ಲಿ: ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದಾನಿಸಲಾದ ‘ಫಿಲಿಪ್ ಕೊಟ್ಲರ್ ಪ್ರಶಸ್ತಿ’ಯ ಯುಕ್ತತೆ ಕುರಿತು ಪ್ರಶ್ನೆಗಳು ಹೆಚ್ಚತೊಡಗಿದ್ದು, ಇದರೊಂದಿಗೆ ಈ ಪ್ರಶಸ್ತಿಯ ನಿಗೂಢತೆ ಇನ್ನಷ್ಟು ದಟ್ಟಗೊಳ್ಳುತ್ತಿದೆ.

‘ಪ್ರಪ್ರಥಮ ’ಫಿಲಿಪ್ ಕೋಟ್ಲೆರ್ ಅಧ್ಯಕ್ಷೀಯ ಪ್ರಶಸ್ತಿಯನ್ನು ಸ್ವೀಕರಿಸಿದ್ದಕ್ಕಾಗಿ ಪ್ರಧಾನಿಯವರ ಸಂಪುಟ ಸಚಿವರು ಮತ್ತು ಹಲವಾರು ಬಿಜೆಪಿ ಮುಖ್ಯಮಂತ್ರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ thewire.in ಸುದ್ದಿ ಜಾಲತಾಣವು ಸೋಮವಾರ ತನ್ನ ವರದಿಯಲ್ಲಿ ಹೇಳಿದ್ದಂತೆ ಈವರೆಗೆ ಹೆಸರೇ ಕೇಳದಿದ್ದ ಅಲಿಬಾಗ್‌ನ ಸಸ್ಲೆನ್ಸ್ ರೀಸರ್ಚ್ ಇಂಟರ್‌ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಪ್ರಾಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಲ್ಡ್ ಮಾರ್ಕೆಟಿಂಗ್ ಸಮಿಟ್(ಡಬ್ಲುಎಂಎಸ್) ಇಂಡಿಯಾ ಈ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿತ್ತು ಎನ್ನುವುದು ಈಗ ಸ್ಪಷ್ಟವಾಗಿದೆ. ಅಲ್ಲದೆ ಪ್ರಶಸ್ತಿ ಆಯ್ಕೆಗೆ ನಿರ್ಣಾಯಕರು ಮತ್ತು ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಬಹಿರಂಗಗೊಳಿಸಿಲ್ಲ ಎನ್ನುವುದನ್ನೂ ಸುದ್ದಿ ಜಾಲತಾಣವು ತನ್ನ ತನಿಖಾ ವರದಿಯಲ್ಲಿ ಬಯಲಿಗೆಳೆದಿದೆ.

ಡಬ್ಲ್ಯುಎಂಎಸ್ ಮತ್ತು ಸಸ್ಲೆನ್ಸ್ ಇವೆರಡೂ ಸಂಸ್ಥೆಗಳನ್ನು ಹುಟ್ಟುಹಾಕಿದ್ದು ತೌಸೀಫ್ ಝಿಯಾ ಸಿದ್ದಿಕಿ ಎನ್ನುವವರ ನೇತೃತ್ವದ ಸೌದಿ ಅರೇಬಿಯಾದ ತಂಡ ಎನ್ನುವುದನ್ನು ತನಿಖೆಯು ಬಹಿರಂಗಗೊಳಿಸಿದೆ. ಸಿದ್ದಿಕಿಯವರ ಆನ್‌ ಲೈನ್ ಪ್ರೊಫೈಲ್ ಬಣ್ಣಿಸಿರುವಂತೆ ಅವರು ಸೌದಿ ಅರೇಬಿಯಾ ಸರಕಾರದ ಒಡೆತನದ ಪೆಟ್ರೋಕೆಮಿಕಲ್ ಕಂಪನಿ ಎಸ್‌ಎಬಿಐಸಿಯ ಉದ್ಯೋಗಿಯಾಗಿದ್ದಾರೆ ಮತ್ತು ಈ ಕಂಪನಿಯು ಭಾರತದ ಶಕ್ತಿ ಕ್ಷೇತ್ರದಲ್ಲಿ ಹೆಚ್ಚಿನ ಪಾತ್ರವನ್ನು ಪಡೆದುಕೊಳ್ಳಲು ಆಸಕ್ತವಾಗಿದೆ. ಸೋಮವಾರ ‘thewire.in’ನಲ್ಲಿ ವರದಿ ಪ್ರಕಟಗೊಂಡ ಬಳಿಕ ಡಬ್ಲ್ಯುಎಂಎಸ್ ಮತ್ತು ಸಸ್ಲೆನ್ಸ್ ಇವೆರಡೂ ಸಂಸ್ಥೆಗಳ ವೆಬ್‌ಸೈಟ್‌ ಗಳನ್ನು ಮುಚ್ಚಲಾಗಿದೆ.

ಡಬ್ಲ್ಯುಎಂಎಸ್ ಪ್ರಶಸ್ತಿಗೆ ತನ್ನ ಹೆಸರನ್ನು ಬಳಸಿಕೊಳ್ಳಲು ಅನುಮತಿಸಿದ್ದ ಅಮೆರಿಕದ ಮ್ಯಾನೇಜ್‌ ಮೆಂಟ್ ಗುರು ಫಿಲಿಪ್ ಕೊಟ್ಲೆರ್ ಅವರು ಕೊನೆಗೂ ಮಂಗಳವಾರ ತಡರಾತ್ರಿ ಮೋದಿಯವರಿಗೆ ತನ್ನ ಶುಭಾಶಯಗಳನ್ನು ಟ್ವೀಟಿಸಿದ್ದರಾದರೂ ಆಗಿನಿಂದ ಪ್ರಧಾನಿಯ ‘ಪ್ರತಿಷ್ಠಿತ ಪ್ರಶಸ್ತಿ’ಯ ಕುರಿತು ಸುದ್ದಿಯನ್ನು ಮೊದಲ ಬಾರಿಗೆ ಪ್ರಕಟಿಸಿದ್ದ ವರ್ಲ್ಡ್ ಮಾರ್ಕೆಟಿಂಗ್ ಸಮಿಟ್ ಇಂಡಿಯಾದ ಟ್ವಿಟರ್ ಹ್ಯಾಂಡಲನ್ನು ಅಳಿಸಲಾಗಿದೆ. ಇದು ಮೋದಿಯವರಿಗೆ ನೀಡಲಾಗಿರುವ ಪ್ರಶಸ್ತಿಯ ಸ್ವರೂಪದ ಕುರಿತು ಇನ್ನಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.

ಡಬ್ಲ್ಯುಎಂಎಸ್ ಮತ್ತು ಸಸ್ಲೆನ್ಸ್ ಸಂಸ್ಥೆಗಳ ಸಂಸ್ಥಾಪಕ ಸಿದ್ದಿಕಿಯವರ ಲಿಂಕ್ಡ್‌ ಇನ್ ಪ್ರೊಫೈಲ್‌ ನಂತೆ ಅವರು ಜ.2014ರಿಂದ ಎಸ್‌ಎಬಿಐಸಿ ಉದ್ಯೋಗಿಯಾಗಿದ್ದಾರೆ ಮತ್ತು ಅವರ ಹುದ್ದೆಯನ್ನು ‘ಸಸ್ಟೇನಬಿಲಿಟಿ ಸ್ಪೆಷಲಿಸ್ಟ್’ ಎಂದು ಬಣ್ಣಿಸಲಾಗಿದ್ದು,ಅವರು ಸೌದಿಯ ದಮಾಮ್ ನಿವಾಸಿಯಾಗಿದ್ದಾರೆ.

ಸಿದ್ದಿಕಿ 2017ರಲ್ಲಿ ಡಬ್ಲ್ಯುಎಂಎಸ್ ಗ್ರೂಪ್‌ನ ಫ್ರಾಂಚೈಸಿಯಾಗಿ ಸಸ್ಲೆನ್ಸ್ ಅನ್ನು ಸ್ಥಾಪಿಸಿದ್ದರು. ಅದು ಅಲಿಘಡದ ನೋಂದಾಯಿತ ವಿಳಾಸವನ್ನು ಹೊಂದಿದೆಯಾದರೂ ಸದ್ರಿ ವಿಳಾಸವನ್ನು ಪತ್ತೆ ಹಚ್ಚಲು ತನಗೆ ಸಾಧ್ಯವಾಗಿಲ್ಲ ಎಂದು ಸುದ್ದಿ ವಾಹಿನಿಯೊಂದು ಮಂಗಳವಾರ ವರದಿ ಮಾಡಿತ್ತು.

ಸಿದ್ದಿಕಿಯವರ ಪತ್ನಿ ಅನ್ನಾ ಖಾನ್, ಫೈಝಲ್ ಝಿಯಾವುದ್ದೀನ್ ಮತ್ತು ಝುಬೈರ್ ಅಹ್ಮದ್ ಖಾನ್ ಅವರು ಸಸ್ಲೆನ್ಸ್‌ ನ ನಿರ್ದೇಶಕರಾಗಿದ್ದಾರೆ. ದಮಾಮ್‌ ನ ಇಮಾಂ ಅಬ್ದುರ್ರಹ್ಮಾನ್ ಬಿನ್ ಫೈಝಲ್ ವಿವಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಅನ್ನಾ ಖಾನ್ ಕೊಟ್ಲರ್ ಪ್ರಶಸ್ತಿಯನ್ನು ಮೋದಿಯವರಿಗೆ ಪ್ರದಾನ ಮಾಡುವಾಗ ಸಿದ್ದಿಕಿ ಜೊತೆ ಉಪಸ್ಥಿತರಿದ್ದುದನ್ನು ಅಧಿಕೃತ ಚಿತ್ರಗಳು ತೋರಿಸಿವೆ.

ಡಬ್ಲ್ಯುಎಂಎಸ್ ಇಂಡಿಯಾ ವೆಬ್‌ಸೈಟ್ ಮೋದಿಯವರಿಗೆ ನೀಡಲಾದ ಅಧ್ಯಕ್ಷೀಯ ಪ್ರಶಸ್ತಿಯಿಂದ ಪ್ರತ್ಯೇಕವಾದ ಕೊಟ್ಲರ್ ಮಾರ್ಕೆಟಿಂಗ್ ಎಕ್ಸ್‌ಲೆನ್ಸ್ ಪ್ರಶಸ್ತಿಗಳನ್ನು ನಿರ್ಧರಿಸಿದ್ದ ‘ಆಯ್ಕೆ ಸಮಿತಿ’ಯನ್ನೂ ಹೆಸರಿಸಿದೆ. ಹೆಚ್ಚಿನ ಈ ಪ್ರಶಸ್ತಿಗಳು ಗೇಲ್, ಬಾಬಾ ರಾಮದೇವ್ ರ ಪತಂಜಲಿ, ಬಿಸಿನೆಸ್ ವರ್ಲ್ಡ್ ಮತ್ತು ವೈರಲ್ ವೆಬ್‌ಸೈಟ್ ವಿಟ್ಟಿಫೀಡ್‌ ನಂತಹ ಡಬ್ಲುಎಂಎಸ್ ಕಾರ್ಯಕ್ರಮದ ಪ್ರಾಯೋಜಕರು ಮತ್ತು ಪಾಲುದಾರರಿಗೇ ಸಂದಿವೆ.

ತಮ್ಮನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿತ್ತಾದರೂ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನೆಂದೂ ಸೇರಿಸಿಕೊಂಡಿರಲಿಲ್ಲ ಎಂದು ಇನ್‌ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ ಮೆಂಟ್ ಕನ್ಸಲ್ಟಂಟ್ಸ್‌ನ ಫೆಲೊ ವಾಲ್ಟರ್ ವೀರಾ ಮತ್ತು ಕಸ್ಟಮರ್ ವ್ಯಾಲ್ಯೂ ಫೌಂಡೇಷನ್ ಇಂಡಿಯಾದ ಅಧ್ಯಕ್ಷ ಗೌತಮ ಮಹಾಜನ್ ಅವರು ಹೇಳಿರುವುದು ಮಾರ್ಕೆಟಿಂಗ್ ಪ್ರಶಸ್ತಿಗಳ, ಜೊತೆಗೆ ಮೋದಿಯವರ ಪ್ರಶಸ್ತಿಯ ವಿರ್ಶಾಸಾರ್ಹತೆಯ ಕುರಿತು ಶಂಕೆಗಳನ್ನು ಸೃಷ್ಟಿಸಿದೆ.

(ಆಧಾರ: www.thewire.inನಲ್ಲಿ ಪ್ರಕಟವಾದ ಅರುಣಾ ಚಂದ್ರಶೇಖರ್ ಮತ್ತು ರಘು ಕಾರ್ನಾಡ್ ಅವರ ಬರೆದ ಲೇಖನ)

ಕೃಪೆ:ವಾರ್ತಾಭಾರತಿ

error: Content is protected !! Not allowed copy content from janadhvani.com