janadhvani

Kannada Online News Paper

ಶತಮಾನಗಳು ಕಳೆದರೂ ಮರೆಯಾಗಿಲ್ಲ ಟಿಪ್ಪುವಿನ ಪೌರುಷ..!!

ಭಾರತ ದೇಶ ಕಂಡ ಅಪ್ರತಿಮ ದೇಶ ಪ್ರೇಮಿ, ಸ್ವತಂತ್ರ್ಯ ಭಾರತಕ್ಕಾಗಿ ರಣರಂಗದಲ್ಲಿ ಶಹೀದಾದ ಪ್ರಪ್ರಥಮ ದೊರೆ, ಕಾಲಾನುಸಾರವಾಗಿ ನಡೆದಂತಹ ಆಂಗ್ಲೋ -ಮೈಸೂರು ಮೂರನೇ ಯುದ್ಧದ ಸಂದರ್ಭದಲ್ಲಿ ಒಡಂಬಡಿಕೆಯ ಪ್ರಕಾರ ಯುದ್ಧದ ಖರ್ಚನ್ನು ಭರಿಸಲು ಅಸಾಧ್ಯವಾದಂತಹ ಸಂದರ್ಭದಲ್ಲಿ ತನ್ನ ಹತ್ತು ವರ್ಷದ ಅಬ್ದುಲ್ ಮಲಿಕ್ ಹಾಗೂ ಎಂಟು ವರ್ಷದ ಮೊಯ್ದೀನ್ ಅನ್ನುವ ತನ್ನಿಬ್ಬರು ಕರುಳ ಕುಡಿಗಳನ್ನು ವರ್ಷಾನುಗಟ್ಟಲೆ ಸ್ವತಂತ್ರ್ಯ ಭಾರತಕ್ಕೋಸ್ಕರ ಒತ್ತೆಯಿಟ್ಟಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಇಲ್ಲಿನ ಹಿಂದೂ,ಮುಸ್ಲಿಂ, ಕ್ರೈಸ್ತರು ಪರಸ್ಪರ ಸಹೋದರರು ಅವರ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯವೆಂದು ಸಾರಿದ ಮಹಾನ್ ಮೇಧಾವಿ, ಶೃಂಗೇರಿ ಮಠದಲ್ಲಿರುವ ಬೆಳೆಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡುವ ಉದ್ದೇಶಕ್ಕಾಗಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ, ಮರಾಠರ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿ ಶೃಂಗೇರಿ ಮಠವನ್ನು ಸಂರಕ್ಷಿಸಿದ ಮಹಾನ್ ಜಾತ್ಯಾತೀತ ನಾಯಕ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಜನ್ಮದಿನವನ್ನು ವಿವಾದದವನ್ನಾಗಿಸಲು ಕೆಲವರು ಅವಿರತವಾಗಿ ಪರಿಶ್ರಮಿಸುತ್ತಿರುವುದು ಸ್ವತಂತ್ರ್ಯ ಭಾರತದ ದುರಂತ.

ದೇಶದ ಇತಿಹಾಸವನ್ನು ತಿರುಚಿಕೊಂಡು ಟಿಪ್ಪು ಸುಲ್ತಾನ್ ರವರು ಮುಸ್ಲಿಂ ಸಮುದಾಯದ ಹೆಸರಿನಿಂದ ಗುರುತಿಸುವರು ಅನ್ನುವ ಏಕೈಕ ಕಾರಣಕ್ಕೋಸ್ಕರ ಇಂದು ಟಿಪ್ಪು ಸುಲ್ತಾನ್ ರವರನ್ನು ಮತಾಂಧ, ದೇಶದ್ರೋಹಿ ಅನ್ನುವಂತೆ ಬಿಂಬಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ಖೇದಕರ .

ತನ್ನ ಹದಿನೈದನೇ ವಯಸ್ಸಿನಲ್ಲೇ ತನ್ನ ತಂದೆಯೊಂದಿಗೆ ಪ್ರಥಮ ಮೈಸೂರು ಯುದ್ಧದಲ್ಲಿ ನಾಯಕತ್ವವನ್ನು ವಹಿಸಿಕೊಂಡು ಬ್ರಿಟಿಷರ ಮುಂದೆ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನ್ ರವರು “ಮೈಸೂರಿನ ಹುಲಿ ” ಅನ್ನುವ ಬಿರುದನ್ನು ಪಡೆದುಕೊಂಡು ಜಗತ್ಪ್ರಸಿದ್ಧರಾದರು.

“ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಮೂರು ದಿವಸ ಹುಲಿಯಾಗಿ ಜೀವಿಸು ” ಎಂದು ಜಗತ್ತಿಗೆ ತನ್ನ ವೀರಾವೇಷದಿಂದ ಕೂಡಿದ ಹೋರಾಟಗಳಿಂದ ಕಾಣಿಸಿ ಕೊಟ್ಟರು.
ಜಾತ್ಯತೀತವಾದ ಸಂವಿಧಾನವನ್ನು ನಿರ್ನಾಮಗೊಳಿಸಿ ಮನುವಾದವನ್ನು ಬೆಳೆಸಲು ಹಾತೊರೆಯುತ್ತಿರುವ ಕೆಲವು ಸ್ವಯಂಘೋಷಿತ ಧರ್ಮ ರಕ್ಷಕರೆನಿಸಿಕೊಳ್ಳುವ ಸಂಘಪರಿವಾರದವರು ಕೆ.ಎಲ್ ಬೈರಪ್ಪ, ಡಿ.ಎಚ್ ಶಂಕರಮೂರ್ತಿ ಯಂತವರು ಬರೆದಂತಹ ಕಾದಂಬರಿಗಳನ್ನು ದೇಶದ ಇತಿಹಾಸವೆಂದು ತಿಳಿದು ಟಿಪ್ಪು ಸುಲ್ತಾನ್ ರವರನ್ನು ಮತಾಂಧರನ್ನಾಗಿ ಚಿತ್ರೀಕರಿಸುತ್ತಿರುವುದು ವಿಪರ್ಯಾಸ..!!

ಬ್ರಿಟಿಷರ ಪಾಲಿಗೆ ಕಗ್ಗಂಟಾಗಿದ್ದಂತಹ ಟಿಪ್ಪು ಸುಲ್ತಾನ್ ರವರನ್ನು ರಣರಂಗದಲ್ಲಿ ಸೋಲಿಸುವುದು ಅಸಾಧ್ಯವೆಂದು ಮನಗಂಡಂತಹ ಬ್ರಿಟಿಷರು ಕುತಂತ್ರದ ಮೂಲಕ ಅವರನ್ನು ಸಾಯಿಸಿದರು. ಬ್ರಿಟಿಷರ ಗುಂಡುಗಳು ಅವರ ಎದೆಗಳನ್ನು ಸೀಳಿದಾಗಲೂ ಅವರು ತನ್ನನ್ನು ವಂಚನೆಯ ಮೂಲಕ ಆಕ್ರಮಿಸಲು ಬಂದ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿದ್ದರು. ಅವರ ಪ್ರಾಣಪಕ್ಷಿ ಹಾರಿಹೋಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡ ಬ್ರಿಟಿಷರು ಅವರ ಎದೆಯ ಮೇಲೆ ನಿಂತು “ಇಂದಿನಿಂದ ಭಾರತ ನಮ್ಮದು ” ಎಂದು ಉದ್ಘರಿಸಿದರು…!!

ಅಂದು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್
ಇಂದು ಕೋಮುವಾದಿಗಳ ಪಾಲಿಗೆ ಸಿಂಹಸ್ವಪ್ನವಾಗಿಬಿಟ್ಟಿದೆ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಆ ಧೀರತೆಯ ನೆನಪುಗಳು.

ನಾಡಿನ ಸರ್ವ ಜನತೆಗೂ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಜನುಮದಿನೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಾ, ನಮ್ಮೊಳಗಿರುವ ಮೀರ್ ಸಾದಿಕ್ ರಂತವರನ್ನು ,ಕೋಮುವಾದಿಗಳನ್ನೂ ಹಿಮ್ಮೆಟ್ಟಿಸುತ್ತಾ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ರವರು ತೋರಿಸಿಕೊಟ್ಟ ಧೈರ್ಯವು ಸ್ಪೂರ್ತಿಯಾಗಲಿ ಅಂದು ಹಾರೈಸುತ್ತಿದ್ದೇನೆ.

ಸ್ನೇಹಜೀವಿ ಅಡ್ಕ

error: Content is protected !! Not allowed copy content from janadhvani.com