janadhvani

Kannada Online News Paper

ಕಂಝುಲ್ ಉಲಮಾ ಶೈಖುನಾ ಚಿತ್ತಾರಿ ಉಸ್ತಾದ್ ವಫಾತ್

ಸಮಸ್ತದ ಆ ದೀಪ ಕೂಡಾ ನಂದಿತು

✍🏻mkm ಕಾಮಿಲ್ ಸಖಾಫಿ ಕೊಡಂಗಾಯಿ

ಕಣ್ಣೂರು : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿಯೂ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿಯೂ ಪ್ರಮುಖ ವಿದ್ವಾಂಸರೂ ಆದ ಕಂಝುಲ್ ಉಲಮಾ ಶೈಖುನಾ ಕೆಪಿ ಹಂಝ ಮುಸ್ಲಿಯಾರ್ ವಫಾತಾದರು. ಅವರಿಗೆ 79 ವರುಷ ಪ್ರಾಯವಾಗಿತ್ತು.

ಅವರ ಮರಣವು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ್ ವಸತಿಯಲ್ಲಿ ಇವತ್ತು ಮುಂಜಾನೆಯಾಗಿತ್ತು. ದಫನ ಕಾರ್ಯವು ಇಂದು ಸಂಜೆ 4 ಗಂಟೆಗೆ ತಳಿಪರಂಬ್ ಸಮೀಪದ ನಾಡುಕಾಣಿ ಅಲ್ ಮಖರ್ ಕ್ಯಾಂಪಸ್ಸಿನಲ್ಲಿ ನಡೆಯಲಿರುವುದು.
ಅಹ್ಮದ್ ಕುಟ್ಟಿ ಮತ್ತು ನಫೀಸಾ ದಂಪತಿಗಳ ಮಗನಾಗಿ 1939ರಲ್ಲಿ ಪಟ್ಟುವಂ ಎಂಬ ಸ್ಥಳದಲ್ಲಿ ಜನಿಸಿದ ಅವರ ಪ್ರಾಥಮಿಕ ವಿದ್ಯಾಭ್ಯಾಸವು ಪಟ್ಟುವಂ ಪಾಠಶಾಲೆಯಲಾಗಿತ್ತು. ಪಟ್ಟುವಂ ಎಲ್.ಪಿ ಸ್ಕೂಲಿನಲ್ಲೂ ಪಝಯಂಗಾಡಿ ಮಾಪಿಳ ಸ್ಕೂಲಿನಲ್ಲೂ ಆಗಿ ಎಂಟನೇ ತರಗತಿ ತನಕ ಲೌಕಿಕ ವಿದ್ಯಾಭ್ಯಾಸವನ್ನು ಪಡೆದರು.
ಮದರಸ ಅಧ್ಯಯನದ ಬಳಿಕ ಮುಂದಿನ ಕಲಿಕೆಯು ಊರಿನ ದರ್ಸಿನಲ್ಲಾಗಿತ್ತು.

ಸೂಫೀವರ್ಯರಾದ ಅಬ್ಬಾಸ್ ಮುಸ್ಲಿಯಾರ್ ಪ್ರಧಾನ ಗುರುವರ್ಯರಾಗಿದ್ದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಕಾಪಾಡ್ ಕುಂಞಹ್ಮದ್ ಮುಸ್ಲಿಯಾರ್ (ಪಡನ್ನ ದರ್ಸ್), ಕೂಟಿಲಂಗಾಡಿ ಬಾಪು ಮುಸ್ಲಿಯಾರ್ (ತಳಿಪ್ಪರಂಬ್ ಖುವ್ವತುಲ್ ಇಸ್ಲಾಂ), ಪಿ ಎ ಅಬ್ದುಲ್ಲಾ ಮುಸ್ಲಿಯಾರ್ (ಕಡವತ್ತೂರು ದರ್ಸ್), ಕಣ್ಣಿಯತ್ ಕುಂಞಹ್ಮದ್ ಮುಸ್ಲಿಯಾರ್ (ವಾಝಕಾಡ್ ದಾರುಲ್ ಉಲೂಂ ಅರಬಿಕ್ ಕಾಲೇಜು) ಮುಂತಾದವರ ಬಳಿ ತೆರಳಿದ್ದರು. ದಯೂಬಂದ್ ದಾರುಲ್ ಉಲೂಮಿನಲ್ಲಿ ಎಂ.ಎ ಪದವಿ ಪಡೆದರು.
ಅಧಿಕೃತವಾಗಿ ದರ್ಸ್ ಜೀವನವನ್ನು ಆರಂಭಿಸಿದ್ದು 1965ರಲ್ಲಿ ಕಣ್ಣೂರಿನ ಮಾಟೂಲಿನಲ್ಲಾಗಿತ್ತು. ಎಂಟು ವರ್ಷ ಅಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಬಳಿಕ, 1972ರಲ್ಲಿ ಚಿತ್ತಾರಿ ದರ್ಸಿಗೆ ಸೇರಿದರು. ಅಲ್ಲಿ ಹತ್ತು ವರ್ಷಗಳ ಕಾಲ ಸೇವೆಗೈದರು. ಚಿತ್ತಾರಿ ಉಸ್ತಾದ್ ಎಂಬ ಹೆಸರು ಲಭಿಸಿದ್ದು ಈ ಸಂದರ್ಭದಲ್ಲಾಗಿತ್ತು.
1982ರಲ್ಲಿ ಕಾಸರಗೋಡು ಜಿಲ್ಲೆಯ ನದಿ ತೀರದ ತುರುತ್ತಿಯಲ್ಲಿ ಮುದರ್ರಿಸರಾದರು. ಮುಂದಿನ ವರ್ಷ ಜಾಮಿಅ ಸಅದಿಯ್ಯದಲ್ಲಿ ಸೇರಿದರು. ಸಾವಿರದ ಒಂಬೈನೂರ ಎಂಬತ್ತೆಂಟರ ತನಕ ಅಲ್ಲೇ ಮುಂದುವರಿದರು. 1989ರಲ್ಲಿ ತಳಿಪರಂಬ್ ಅಲ್ ಮಖರ್ ಪ್ರಾರಂಭಿಸಿದಂದಿನಿಂದ ಅಲ್ಲಿನ ಪ್ರಿನ್ಸಿಪಾಲ್ ಆದರು.
ಸಯ್ಯಿದ್ ತುರಾಬ್ ಅಸ್ಸಖಾಫಿ, ಎಂ ಅಬ್ದುಲ್ಲತೀಫ್ ಸಅದಿ ಪಝಶ್ಶಿ, ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಆಲಿಕುಂಞಿ ಅಮಾನಿ ಮಯ್ಯಿಲ್ ಮೊದಲಾದವರು ಪ್ರಧಾನ ಶಿಷ್ಯರಾಗಿದ್ದಾರೆ.
ಸಮಸ್ತ ಮತ್ತು ಅದರ ಕೆಲಘಟಕಗಳ ಬೆಳವಣಿಗೆಯಲ್ಲಿ ಚಿತ್ತಾರಿ ಉಸ್ತಾದ್ ರವರ ಪಾತ್ರವು ಅವರ್ಣನೀಯವಾಗಿದೆ. ಚಿತ್ತಾರಿಯ ಸೇವಾ ಕಾಲದಲ್ಲೇ ಸಮಸ್ತದೊಂದಿಗೆ ಸಂಪರ್ಕದಲ್ಲಿ ಏರ್ಪಟ್ಟಿದ್ದರು. 1972ರಲ್ಲಿ ಸಮಸ್ತ ಅವಿಭಜಿತ ಕಣ್ಣೂರು ಜಿಲ್ಲೆಯ ಪ್ರಥಮ ಮುಶಾವರದಲ್ಲಿ ಸಹ ಕಾರ್ಯದರ್ಶಿಯಾಗಿ ಸಾರಥಿ ಸ್ಥಾನಕ್ಕೆ ಆಯ್ಕೆಯಾದರು.
ಸಾವಿರದೊಂಬೈನೂರ ಎಪ್ಪತ್ತ ಮೂರು ಏಪ್ರಿಲ್ 14,15 ದಿನಾಂಕಗಳಲ್ಲಿ ಕಾಂಞಂಗಾಡಿನಲ್ಲಿ ನಡೆದ ಸಮಸ್ತ ಪ್ರಥಮ ಸಮ್ಮೇಳನದ ಸ್ವಾಗತ ಸಮಿತಿಯ ಕನ್ವೀನರ್ ಆಗಿದ್ದರು. ಕಣ್ಣೂರ್, ಕಾಸರಗೋಡು ಜಿಲ್ಲೆಗಳಾಗಿ 1983ರಲ್ಲಿ ವಿಭಜಿಸಲ್ಪಟ್ಟಾಗ ಕಣ್ಣೂರು ಜಿಲ್ಲಾ ಮುಶಾವರದ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮುಂದುವರಿದು ಸಮಸ್ತ ಕೇಂದ್ರ ಮುಶಾವರ ಸಮಿತಿಯಲ್ಲಿ ಸೇರಿದರು.
ಸಮಸ್ತದ ಅಧೀನದಲ್ಲಿರುವ ತಳಿಪರಂಬ್ ಜೂನಿಯರ್ ಕಾಲೇಜು, ಕಾಸರಗೋಡು ಜಾಮಿಅ ಸಅದಿಯ್ಯ, ತಳಿಪರಂಬ್ ಅಲ್ ಮಖರ್ ಸಂಸ್ಥೆಗಳಲ್ಲಿ ಅವರು ಕಾರ್ಯಾಚರಿಸಿದ್ದಾರೆ.
ಸಾವಿರದ ಒಂಬೈನೂರ ತೊಂಬತ್ತೈದರ ತನಕ ಸಅದಿಯ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ರೂಪೀಕರಣಗೊಂಡಾಗ ಸುನ್ನೀ ಯೂತ್ ಆರ್ಗನೈಸೇಷನ್ ಇದರ ಅಖಿಲ ಭಾರತ ಸಮಿತಿಯ ಅಧ್ಯಕ್ಷರಾಗಿದ್ದರು.
ಪತ್ನಿ ಕೈಯ್ಯಂ ಸ್ವದೇಶಿ ಝೈನಬಾ ಹಜ್ಜುಮ್ಮ. 5 ಗಂಡು ಮತ್ತು 6 ಹೆಣ್ಣು ಮಕ್ಕಳಿದ್ದಾರೆ. ಪ್ರಮುಖ ವಿದ್ವಾಂಸರೂ ಸಮಸ್ತ ಕಣ್ಣೂರು ಜಿಲ್ಲಾ ಅಧ್ಯಕ್ಷರೂ ಆಗಿದ್ದ ಮರ್ಹೂಂ ಪಿ ಎ ಅಬ್ದುಲ್ಲಾ ಮುಸ್ಲಿಯಾರ್ ರವರ ಮಗನಾದ ಡಾಕ್ಟರ್ ಪಿ ಎ ಅಹ್ಮದ್ ಸಈದ್ ರವರು ಚಿತ್ತಾರಿ ಉಸ್ತಾದರ ಅಳಿಯರಾಗಿದ್ದಾರೆ.

error: Content is protected !! Not allowed copy content from janadhvani.com