janadhvani

Kannada Online News Paper

“ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ” ಸರ್ವರಿಗೂ 72 ನೇ ಸ್ವಾತಂತ್ರೋತ್ಸವ ಶುಭಾಶಯಗಳು

✍🏻 ಸ್ನೇಹಜೀವಿ ಅಡ್ಕ

ಆಗಸ್ಟ್ 15 ರಂದು ಬಾನೆತ್ತರದಲ್ಲಿ ಹಾರಾಡುವ ಭಾರತದ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸುತ್ತಾ ಭವ್ಯ ಭಾರತದ ಜನತೆಯು ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸನ್ನದ್ಧರಾಗಿ ನಿಂತಿದ್ದಾರೆ.
ಬ್ರಿಟಿಷರ ಕಪಿಮುಷ್ಟಿಯಿಂದ ಭವ್ಯ ಭಾರತವು ಸ್ವತಂತ್ರ್ಯಗೊಂಡು ಏಳು ದಶಕಗಳು ಕಳೆದರೂ ಇಂದು ಸ್ವಾತಂತ್ರ್ಯ ಅನ್ನುವುದು ಆಗಸ್ಟ್ ಹದಿನೈದರಂದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಆ ಒಂದು ದಿನವನ್ನು ಮಾತ್ರ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುವಾಗ ಭವ್ಯ ಭಾರತದ ಸಾಮಾನ್ಯ ಪ್ರಜೆಯೊಬ್ಬ ಸ್ವಾತಂತ್ರ್ಯ ಆಚರಿಸುವಂತಾಗಲು ಅರ್ಹನೇ ಅನ್ನುವುದನ್ನು ಚಿಂತಿಸಬೇಕಾದಂತಹ ಪರಿಸ್ಥಿತಿಗಳನ್ನು ಇಲ್ಲಿನ ವ್ಯವಸ್ಥೆಗಳು ಸೃಷ್ಟಿ ಮಾಡಿಬಿಟ್ಟಿದೆ.

ಸ್ವಾತಂತ್ರ್ಯ ಅನ್ನುವುದು ಬಹಳ ಅಮೂಲ್ಯವಾದ ಸಂಪತ್ತು. ಅದನ್ನು ಗಳಿಸಲು ಅದೆಷ್ಟೋ ಹೋರಾಟಗಾರರು ರಕ್ತತರ್ಪಣ ಮಾಡಿದ್ದಾರೆ, ಪ್ರಶಸ್ತಿ ಪುರಸ್ಕಾರಗಳನ್ನು ಬಯಸದೆ ದೇಹದ ಹಂಗು ತೊರೆದು, ಜಾತಿ – ಧರ್ಮದ ಭೇದ ಭಾವವನ್ನೇ ಮರೆತು ಬ್ರಿಟಿಷರ ಫಿರಂಗಿಗಳ ಎದುರು ಎದೆಯನ್ನೊಡ್ಡಿ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ವಿಪರ್ಯಾಸವೆಂದರೆ ಇಂದು ಗಾಂಧಿ, ನೆಹರು ವಿನ ಹೆಸರಲ್ಲದೆ ಬಹುತೇಕರಿಗೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಗೊತ್ತಿಲ್ಲದೇ ಹೋಗಿರುವುದು ಸ್ವತಂತ್ರ್ಯ ಭಾರತದ ದುರಂತವೆನ್ನಬೇಕಷ್ಟೇ..!

ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನದಂದು ದೇಶಕ್ಕಾಗಿ ಬಲಿದಾನ ನೀಡಿದ ಅಪ್ರತಿಮ ಹೋರಾಟಗಾರರ ನೆನಪನ್ನು ಮಾಡಬೇಕಾದ ವೇದಿಕೆಗಳು ರಾಜಕಾರಣಿಗಳ ಭರವಸೆ, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ವೇದಿಕೆಗಳಾಗಿ ಬದಲಾಗಿ ಹೋಗಿದೆ.
ಒಂದು ಕಡೆ ದೇಶದೊಳಗಿನ ಆಂತರಿಕ ಕಲಹಗಳು ದೇಶದ ಸೌಹಾರ್ದತೆಗೆ ಮಾರಕವಾಗುತ್ತಿರುವಾಗ, ಭಯೋತ್ಪಾದನೆಯ ಬೆದರಿಕೆಗಳು ದೇಶದ ಪ್ರಗತಿಗೆ ಮಾರಕವಾಗುತ್ತಿರುವಂತೆಯೇ ದೇಶವನ್ನು ಆಳುವ ರಾಜಕಾರಣಿಗಳು ದೇಶವನ್ನು ಲೂಟಿ ಮಾಡುವಲ್ಲಿ ತಲ್ಲೀನರಾಗಿದ್ದಾರೆ. ಯಾವ ದಿನ *ಮಧ್ಯರಾತ್ರಿಯೊಬ್ಬಳು ನಿರ್ಭೀತಿಯಿಂದ ರಸ್ತೆಗಿಳಿದು ಹೋಗುತ್ತಾಳೋ ಅಂದೇ ಸ್ವತಂತ್ರ್ಯ ಪೂರ್ಣವಾಯಿತು ಅಂತ ಹೇಳಿದ ಮಹಾತ್ಮ ಗಾಂಧೀಜಿಯವರು ಕನಸು ಕಂಡ ಭಾರತದಲ್ಲಿ ಹಾಡುಹಗಲೇ ಹೆಣ್ಣು ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿದ್ದಾಳೆ.* ಕೆಲವೊಮ್ಮೆ ಆಕೆಯ ದೇಹಗಳು ಮರದ ಕೊಂಬೆಗಳಲ್ಲಿ ತೂಗಿ ಹಾಕಲ್ಪಡುವ ಸ್ಥಿತಿಯಲ್ಲೂ ಕಾಣಸಿಗುತ್ತದೆ. ಆದರೆ ,ಅಪರಾಧಿ ಮಾತ್ರ ಕಾನೂನಿನ ಯಾವುದೇ ಭಯಗಳಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಾ ಇದ್ದಾನೆ..!!

ಜಾತ್ಯಾತೀತ ದೇಶದ ಸುಂದರ ಸಂವಿಧಾನಕ್ಕೆ ಪೀಠಿಕೆ ಬರೆದಂತಹ ಡಾ.ಬಿ.ಆರ್ ಅಂಬೇಡ್ಕರ್ ರವರ ನೆನಪುಗಳು, ಅವರು ಬರೆದ ಸಂವಿಧಾನವನ್ನು ಅಳಿಸಿ ಹಾಕುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಒಂದು ಸಮುದಾಯದ ಆರಾಧನಾ ಕೇಂದ್ರವಾದ ಬಾಬರೀ ಮಸೀದಿಯನ್ನು ಹೊಡೆದುರುಳಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಹ ಪ್ರಯತ್ನಗಳು ಇಲ್ಲಿ ನಿರಂತರವಾಗಿ ಮರುಕಳಿಸುತ್ತಲೇ ಇದೆ.

ದೇಶದಲ್ಲಿನ ರಾಜಕೀಯ ಪಕ್ಷಗಳು ಅಧಿಕಾರದ ಆಸೆಗಾಗಿ ದೇಶವನ್ನೇ ಬಲಿ ನೀಡಲು ತಯಾರಾಗಿರುವಾಗ ಪ್ರತಿಯೊಂದು ರಾಜಕೀಯ ಪಕ್ಷದ ವಕ್ತಾರರು ಆಡಳಿತದ ರುಚಿಯನ್ನು ಅನುಭವಿಸುವುದರ ಜತೆಗೆ ಇಲ್ಲಿನ ಖಜಾನೆಯನ್ನು ಲೂಟಿ ಮಾಡಲು ಪೈಪೋಟಿ ನಡೆಸುವಂತಹ ಸನ್ನಿವೇಶಗಳು ಕಾಣಿಸಲು ಸಾಧ್ಯವಾಗುತ್ತದೆ. ದೇಶದ ಘನತೆಯನ್ನು ಕಾಪಾಡಿಕೊಂಡು ಮುನ್ನಡೆಯಬೇಕಾದ ರಾಜಕಾರಣಿಗಳಿಗಿಂದು ದೇಶಪ್ರೇಮ, ದೇಶದ ಮೇಲಿರುವ ಕಾಳಜಿಗಳು ಇಲ್ಲವಾಗಿದೆ. ಐಷಾರಾಮಿ ಜೀವನ, ಹಿಡಿತವಿಲ್ಲದ ನಾಲಗೆಗಳ ಮೂಲಕ ದೇಶದ ಅರಾಜಕತೆಗೆ ಮುನ್ನುಡಿಯಿಡುವ ರಾಜಕಾರಣಿಗಳಿಗೆ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜೀವನಶೈಲಿ, ದೇಶಪ್ರೇಮ ಮಾದರಿಯಾಗಬೇಕಿದೆ. ಜವಾಹರಲಾಲ್ ನೆಹರೂರವರು ಭಾರತದ ಪ್ರಧಾನಿಯಾಗಿದ್ದಾಗ ಲಾಲ್ ಬಹದ್ದೂರು ಶಾಸ್ತ್ರಿಯವರು ಗೃಹಮಂತ್ರಿಯಾಗಿದ್ದರು. ಅದೊಂದು ದಿನ ವಿಶ್ವದ ಗೃಹಮಂತ್ರಿಗಳೆಲ್ಲಾ ಒಂದು ವೇದಿಕೆಯಲ್ಲಿ ಪ್ರತಿನಿಧಿಸಬೇಕಾದ ಸಂದರ್ಭಗಳು ಬಂದಾಗ ಲಾಲ್ ಬಹದ್ದೂರು ಶಾಸ್ತ್ತಿಯವರು ಮಾಸಿದ ಮತ್ತು ಸ್ವಲ್ಪ ಹರಿದ ಕೋಟನ್ನು ಹಾಕಿಕೊಂಡು ಹೊರಡಲು ಸಜ್ಜಾದರು.ಶಾಸ್ತ್ರಿಯವರನ್ನು ನೋಡಿದ ನೆಹರುರವರು “ಈ ಹರಿದ ಕೋಟನ್ನು ಯಾಕೆ ಹಾಕಿಕೊಂಡು ಹೋಗುತ್ತೀರಿ ..? ,ನೀವು ನಮ್ಮ ದೇಶವನ್ನು ಪ್ರತಿನಿಧಿಸಬೇಕಾದ ವ್ಯಕ್ತಿ ಹೀಗಾಗಿ ಬೇರೆ ಹೊಸ ಕೋಟನ್ನು ಹಾಕಿಕೊಳ್ಳಿ ಎಂದು ಹೇಳಿದಾಗ ಶಾಸ್ತ್ರಿಯವರು ನನ್ನ ಬಳಿ ಇರುವ ಕೋಟು ಇದು ಮಾತ್ರವಾಗಿದೆ ಅಂತ ಹೇಳಿದರು. ಆಗ ನೆಹರುರವರು ನಾನು ನನ್ನ ಕೋಟನ್ನು ನೀಡುತ್ತೇನೆ,ಅದನ್ನು ಹಾಕಿಕೊಂಡು ಹೋಗಿ ಎಂದು ಹೇಳಿದಾಗ ಅದನ್ನು ನಿರಾಕರಿಸಿದ ಶಾಸ್ತ್ರಿಯವರು “ನಾನು ಹರಿದ ಬಟ್ಟೆಯಲ್ಲಿ ಹೋದರೆ ಭಾರತ ಬಡ ದೇಶ,ಭಾರತೀಯ ನಾಯಕನೂ ಬಡವ ಎಂದು ಭಾವಿಸುತ್ತಾರೆ.ಆದರೆ, ನಿಮ್ಮ ಕೋಟು ನನಗೆ ಉದ್ದವಾಗುತ್ತದೆ ಅದನ್ನು ನಾನು ಹಾಕಿಕೊಂಡು ಹೋದರೆ , ಭಾರತೀಯರು ಬೇರೆಯವರು ನೀಡಿದ ಬಟ್ಟೆಯನ್ನು ಹಾಕಿಕೊಳ್ಳುವ ಭಿಕ್ಷುಕರು ಅಂತ ತೋರಿಸಿದಂತಾಗುತ್ತದೆ. ಭಾರತೀಯರು ಬಡವರು ಅಂದರೂ ಪರ್ವಾಗಿಲ್ಲ. ಆದರೆ, ಭಾರತೀಯರು ಭಿಕ್ಷುಕರು ಅಂತ ಹೇಳುವುದನ್ನು ನಾನು ಸಹಿಸಿಕೊಳ್ಳುವುದಿಲ್ಲ.” ಎಂದು ಹೇಳಿದರು. ಶಾಸ್ತ್ರಿಯವರು ತೋರಿದ ದೇಶನಿಷ್ಟೆ ಇಂದಿನ ನಮ್ಮ ರಾಜಕಾರಣಿಗಳಲ್ಲಿ ಕಾಣುವಂತಾಗಲೂ ಸಾಧ್ಯವಿಲ್ಲ.

“ಸಾವಿರ ಅಪರಾಧಿಗಳು ರಕ್ಷಿಸಲ್ಪಟ್ಟರೂ ಒಬ್ಬನೇ ಒಬ್ಬ ನಿರಪರಾಧಿ ಶಿಕ್ಷಿಸಬಾರದು” ಅನ್ನುವ ಕಾನೂನನ್ನು ಹೊಂದಿದ ಭಾರತದ ಬಹುತೇಕ ಕಡೆಗಳಲ್ಲಿನ ಜೈಲಿನೊಳಗೆ ಅಮಾಯಕ ನಿರಪರಾಧಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಲೇ ಇದ್ದಾರೆ. ದನದ ಮಾಂಸ ಅನ್ನುವ ಸಂಶಯದ ಹೆಸರಿನಲ್ಲಿ ಅಖ್ಲಾಕ್ ನನ್ನು ಕೊಂದು ಸಾಯಿಸಿದ ಭಾರತದಲ್ಲಿ, ಸತ್ತ ದನದ ಚರ್ಮವನ್ನು ಸುಲಿದರು ಅನ್ನುವ ನೆಪದಲ್ಲಿ ಗುಜರಾತಿನಲ್ಲಿ ದಲಿತರನ್ನು ಅರೆಬೆತ್ತಲೆಗೊಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗುತ್ತದೆ..!!
ಟೊಪ್ಪಿ ಧರಿಸಿದ ಕಾರಣಕ್ಕೆ ರೈಲಿನಲ್ಲಿ ಜುನೈದ್ ನನ್ನು ಹೊಡೆದು ಸಾಯಿಸಲಾಗುತ್ತದೆ.
ಐಸಿಸ್ ಅನ್ನುವ ಇಸ್ರೇಲಿ ಪ್ರೇರಿತ ಸಂಘಟನೆಗಳು ನಡೆಸುವ ಅಮಾನುಷ ಕ್ರೌರ್ಯತೆಗಳನ್ನು ಇಲ್ಲಿನ ಒಂದು ಸಮುದಾಯದ ಮೇಲೆ ಹೊರಿಸಿ,ಒಂದು ಸಮುದಾಯವನ್ನೇ ಭಯೋತ್ಪಾದಕರನ್ನಾಗಿ ಚಿತ್ರೀಕರಿಸುವ ಷಡ್ಯಂತ್ರಗಳು ನಡೆಯುತ್ತಿರುವ ದೇಶದಲ್ಲಿ ಗುಜರಾತ್ ಗಲಭೆ, ಮುಝಫ್ಫರಾಬಾದ್ ಕೋಮುಗಲಭೆ, ಸಂಜೋತ ಎಕ್ಸ್ ಪ್ರೆಸ್, ಮಾಲೆಂಗಾವ್, ಮಕ್ಕಾ ಸ್ಫೋಟ ಮುಂತಾದ ಕಡೆಗಳಲ್ಲಿ ನಡೆದ ಮನುಷ್ಯ ಹತ್ಯೆಗಳ ಆರೋಪಿಗಳನ್ನು ರಕ್ಷಿಸಲ್ಪಡುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲೇ ಇದೆ.
ಎಂ.ಎಂ ಕಲ್ಬುರ್ಗಿಯನ್ನು , ಗೌರಿ ಲಂಕೇಶರನ್ನು ಕೊಂದ ನೈಜ ಆರೋಪಿಗಳನ್ನು ಇನ್ನೂ ಬಂಧಿಸಲು ಮೀನಾವೇಷ ನಡೆಸುತ್ತಿರುವಾಗಲೇ, ಉಮರ್ ಖಾಲಿದ್ ರ ಮೇಲೆಯೂ ದಾಳಿಯ ಪ್ರಯತ್ನ ನಡೆಸುತ್ತಿರುವುದು ದೇಶದಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯವನ್ನು ದಮನಿಸುತ್ತಿರುವ ಷಡ್ಯಂತ್ರವಾಗಿದೆ.

ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ ಅದನ್ನು ಒಂದು ಸಮುದಾಯದ ಮೇಲೆ ಹೊರಿಸಿ, ಮುಸ್ಲಿಂ ಸಮುದಾಯವನ್ನು ದೇಶದ್ರೋಹಿಗಳಂತೆ ಬಿಂಬಿಸಿ ಕೋಮುಗಲಭೆ ನಡೆಸುವ ಪ್ರಯತ್ನ ಒಂದು ಕಡೆಯಾದರೆ, ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮರಣವಪ್ಪಿದ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ್ರೋಹಿಗಳು, ಮತಾಂತರಿಗಳು ಅನ್ನುವಂತೆ ಬಿಂಬಿಸುವಂತಹ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆದ ಭಾರತದಲ್ಲಿ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದ ಹಿಂದೂ- ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯಗಳನ್ನು ಮೂಡಿಸಿ ದೇಶದ ಸೌಹಾರ್ದತೆಯನ್ನು ನಾಶಪಡಿಸುವುದರ ಜತೆಗೆ ದೇಶದ ಅಖಂಡತೆಗೂ ಸವಾಲೊಡ್ಡುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹಲವು ತ್ಯಾಗ, ಕಷ್ಟಗಳನ್ನು ಅನುಭವಿಸಿದ ಮುಸ್ಲಿಂ ಸ್ವಾತಂತ್ರ್ಯಾ ಸೇನಾನಿಗಳ ಚರಿತ್ರೆಗಳನ್ನು ಅಳಿಸಿ ಹಾಕುವಂತಹ ಪ್ರಯತ್ನಗಳಲ್ಲಿ ಕೆಲವರು ನಿರತರಾಗಿದ್ದಾರೆ. ದೇಶದ ಸ್ವಾತಂತ್ರ್ಯ ಸಮರದಲ್ಲಿ ತನ್ನ ಇಬ್ಬರು ಕರುಳಕುಡಿಗಳನ್ನು ಒತ್ತೆಯಿಟ್ಟು ಹೋರಾಡಿದಂತಹ ಧೀರ ದೇಶಪ್ರೇಮಿಯಾದ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅರವರ ಧೀರತೆಯು ಅದೆಷ್ಟು ಬ್ರಿಟಿಷರನ್ನು ಕಾಡಿತ್ತೆಂದರೆ ಟಿಪ್ಪು ಸುಲ್ತಾನರನ್ನು ವಂಚನೆಯ ಮೂಲಕ ಸಾಯಿಸಿದಾಗ, ಟಿಪ್ಪು ಸುಲ್ತಾನರ ಮರಣವು ಖಚಿತವಾಯಿತು ಅಂತ ಅರಿವಾದಾಗ ಅವರ ಎದೆಯ ಮೇಲೆ ನಿಂತು ಬ್ರಿಟಿಷರು “ಇಂದಿನಿಂದ ಭಾರತ ನಮ್ಮದು “ಅನ್ನುವಂತೆ ಹರ್ಷೋದ್ಘಾರ ಪ್ರಕಟಿಸಿದರು. ಅಂತಹ ದೇಶಪ್ರೇಮಿಯನ್ನು ದೇಶದ್ರೋಹಿಯಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಾ ಬಂದಿದೆ.
ಸ್ವಾತಂತ್ರ್ಯ ಸಂಗ್ರಾಮದ ಮೊದಲೇ ಬ್ರಿಟಿಷರ ಜತೆ ಸಮರ ರಂಗಕ್ಕಿಳಿದು ಜೀವಾರ್ಪಣೆಗೈದ ಕುಂಞಾಲಿ ಮರಕ್ಕಾರ್, ಬ್ರಿಟಿಷರ ಕುತಂತ್ರಗಳನ್ನು ಎಳೆಎಳೆಯಾಗಿ ಬಿಡಿಸಿ ಲೇಖನಗಳ ಮೂಲಕ ಇಲ್ಲಿನ ಜನತೆಗೆ ಸ್ವಾತಂತ್ರ್ಯದ ಬಗ್ಗೆ ಪ್ರೋತ್ಸಾಹಿಸಿದ ಪೊನ್ನಾನಿಯ ಮಕ್ದೂಂ ತಂಙಳ್. ಭವ್ಯ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೆಳಿಯಂಗೋಡ್ ಉಮರ್ ಖಾಳಿ ರ.ಅ, ಮಂಬುರಂ ಸೈದಲವಿ ತಂಙಳ್, ಅಲಿ ಮುಸ್ಲಿಯಾರ್, ಹಲವು ತ್ಯಾಗಗಳನ್ನು ಸಹಿಸಿದ ಅಶ್ಫಕುಲ್ಲಾ ಮುಂತಾದ ಅದೆಷ್ಟೋ ಮುಸ್ಲಿಂ ಹೋರಾಟಗಾರರ ದೇಶಪ್ರೇಮವು ಮರೆಯಲಸಾಧ್ಯವಾದಂತದ್ದು.

“ಒಂದಾದರೆ ಸ್ವತಂತ್ರ್ಯ ಭಾರತವನ್ನು ಬಿಟ್ಟುಕೊಡಿ,ಇಲ್ಲವೆಂದಾದಲ್ಲಿ ಗುಲಾಮಗಿರಿ ಇಲ್ಲದ ದೇಶದಲ್ಲಿ ಮಲಗಲು ಆರಡಿ ಜಾಗವನ್ನು ನೋಡಿರಿ, ದಾಸ್ಯತೆ ಇರುವ ದೇಶದಲ್ಲಿ ಸಾಯಲು ನಾನು ಇಚ್ಛಿಸುವುದಿಲ್ಲ” ಎಂದು ಬ್ರಿಟಿಷರ ಫಿರಂಗಿಗಳ ಮುಂದೆ ಎದೆಯೊಡ್ಡಿ ಈ ದೇಶಕ್ಕಾಗಿ ಹೋರಾಡಿದ ಶೌಕತ್ ಅಲಿಯವರ ದೇಶಪ್ರೇಮದ ಚರಿತ್ರೆಗಳು ಇಂದು ಪಠ್ಯಪುಸ್ತಕದ ಪುಟಗಳಿಂದ ಅಳಿದು ಹೋಗಿರುವುದು ಪ್ರಜಾಪ್ರಭುತ್ವ ದೇಶದ ದುರಂತವೇ ಸರಿ..!!

ಜಾತ್ಯಾತೀತ ದೇಶದಲ್ಲಿ ಮುಂದುವರಿಯುತ್ತಿರುವ ಅರಾಜಗತೆ, ಒಂದು ಸಮುದಾಯದ ವಿರುದ್ಧದ ಷಡ್ಯಂತ್ರ,ದಲಿತರ ಮೇಲಿನ ದಬ್ಬಾಳಿಕೆ, ಹೆಣ್ಣಿನ ಮೇಲಾಗುವ ದೌರ್ಜನ್ಯಗಳು ಮೇಲೈಸುತ್ತಿರುವುದಾದರೆ ನಿಜವಾಗಿ ಸ್ವಾತಂತ್ರ್ಯ ಬಂದಿರುವುದಾದರು ಯಾರಿಗೆ..?!
ಈ ದೇಶದ ಆಡಳಿತ ನಡೆಸುವ ರಾಜಕಾರಣಿಗಳಿಗೆ, ಉಳ್ಳವರಿಗೆ ಹಾಗೂ ಇಲ್ಲಿನ ನ್ಯಾಯ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಿ ಒಂದು ಸಮುದಾಯದ ವಿರುದ್ಧ ದ್ವೇಷಸಾಧಿಸುವವರಿಗಾಗಿದೆ ಇಲ್ಲಿ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿರುವುದು. ದೇಶವು ಸ್ವಾತಂತ್ರ್ಯಗೊಂಡು ಏಳು ದಶಕಗಳು ಕಳೆದರೂ ಇಂದಿಗೂ ಶೌಚಾಲಯಗಳಿಲ್ಲದೆ ಹಲವರು ಬಯಲುಪ್ರದೇಶಗಳತ್ತ ಹೋಗುತ್ತಿರುವುದು ದೇಶದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಜಾತ್ಯತೀತ ಭಾರತದಲ್ಲಿ ಶಾಂತಿ,ಸೌಹಾರ್ದತೆ ನೆಲೆಗೊಳ್ಳಲಿ, ದೇಶಕ್ಕೆ ಸವಾಲಾಗಿರುವ ಆಂತರಿಕ,ಬಾಹ್ಯ ಸಮಸ್ಯೆಗಳಿಗೆ ಮುಕ್ತಿ ದೊರೆಯುವಂತಾಗಿ ನಮ್ಮೊಳಗಿನ ಸುಂದರ ಭಾರತ ಜಾಗೃತಿಗೊಳ್ಳಲಿ ಎಂದು ಆಶಿಸುತ್ತಾ ಸರ್ವ ಭಾರತಿಯರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

error: Content is protected !! Not allowed copy content from janadhvani.com