janadhvani

Kannada Online News Paper

ಪ್ಲಾಸ್ಟಿಕ್ ಧ್ವಜಗಳನ್ನು ಬಳಸದಂತೆ ಕೇಂದ್ರ ಸರಕಾರ ಎಚ್ಚರಿಕೆ

ನವದೆಹಲಿ: 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡದಂತೆ ರಾಜ್ಯ ಸರ್ಕಾರಗಳಿಗೆ ಕಠಿಣ ಸಂದೇಶ ರವಾನಿಸಿದೆ.
ಪ್ಲಾಸ್ಟಿಕ್ ಧ್ವಜಗಳ ಮಾರಾಟ, ಧ್ವಜಗಳ ಸಂಗ್ರಹ 2002ರ ಭಾರತದ ಧ್ವಜ ನೀತಿಗೆ ವಿರುದ್ಧವಾಗಿದೆ. ಈ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ಬಳಕೆ ಮಾಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕಾರುಗಳ ಮೇಲೆ ಹಾಗೂ ಬೀದಿಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಧ್ವಜಗಳು ಹಾರಾಡದಂತೆ ಆಯಾ ರಾಜ್ಯಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಾಷ್ಟ್ರಧ್ವಜ ಜನತೆಯ ಭರವಸೆ ಹಾಗೂ ಆಕಾಂಕ್ಷೆಯ ಪ್ರತೀಕ. ಅದಕ್ಕೆ ಸೂಕ್ತ ಗೌರವ ನೀಡಬೇಕು. ಪ್ಲಾಸ್ಟಿಕ್ ಧ್ವಜಗಳು ಜೈವಿಕವಾಗಿ ವಿಫಟಿತವಾಗುವುದಿಲ್ಲ. ಸ್ವಾತಂತ್ರ್ಯ ದಿನದಂದು ಇದನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿದರೆ ಅದರ ಗೌರವಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ.
ರಾಷ್ಟ್ರಧ್ವಜ ಪ್ರದರ್ಶನ ಕುರಿತಂತೆ ಇರುವ ಕಾನೂನು, ನೀತಿಗಳ ಬಗ್ಗೆ ಜನರಿಗೆ, ಸಂಘಟನೆಗಳಿಗೆ ಹಾಗೂ ಸಂಸ್ಥೆಗಳಿಗೆ ಅರಿವು ಮೂಡಿಸಬೇಕಿದೆ. ಈ ಕುರಿತು ರಾಜ್ಯ ಸರ್ಕಾರಗಳು ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

error: Content is protected !! Not allowed copy content from janadhvani.com