janadhvani

Kannada Online News Paper

ಬಿಜೆಪಿಗೆ ಮುಖಭಂಗ: ಲೋಕಸಭೆ,ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ಸಾಧ್ಯವಿಲ್ಲ-ಆಯೋಗ

ನವದೆಹಲಿ, ಆ.14- ಲೋಕಸಭೆ ಹಾಗೂ 11 ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯವಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆಯೋಗದ ಈ ತೀರ್ಮಾನದಿಂದಾಗಿ ಒಂದೇ ರಾಷ್ಟ್ರ, ಒಂದೇ ಮತ ಎಂಬ ಪರಿಕಲ್ಪನೆಯನ್ನು ಜಾರಿ ಮಾಡಲು ಮುಂದಾಗಿದ್ದ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

ನಿನ್ನೆಯಷ್ಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಆಯೋಗ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಒ.ಪಿ.ರಾವತ್ ಅವರು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸಲು ಸಾಧ್ಯವಿಲ್ಲ. ಇದು ಅತ್ಯಂತ ಕಠಿಣ ಕೆಲಸವೆಂದು ಹೇಳಿದ್ದಾರೆ.

ಹಾಗೊಂದು ವೇಳೆ ಒಂದೇ ಹಂತದಲ್ಲಿ ಚುನಾವಣೆ ನಡೆಸಬೇಕೆಂದರೆ ಈಗಿರುವ ಕಾಯ್ದೆಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು. ನಿಯಮಾವಳಿ ಪ್ರಕಾರ, ಚುನಾವಣೆ ನಡೆಸಲು ಅವಕಾಶವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆಗೆ ಪ್ರತ್ಯೇಕವಾದ ವಿದ್ಯುನ್ಮಾನ ಮತಯಂತ್ರ ಹಾಗೂ ಮತದಾನವನ್ನು ಖಾತರಿಪಡಿಸಿಕೊಳ್ಳುವ ವಿವಿ ಪ್ಯಾಟ್ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಿದರೆ ಇದಕ್ಕೆ ಹಲವು ತಿಂಗಳು ಮುಂಚಿತವಾಗಿಯೇ ಪೂರ್ವಸಿದ್ಧತೆಗಳನ್ನು ಕೈಗೊಳ್ಳಬೇಕು. ಏಕಾಏಕಿ ಚುನಾವಣೆ ನಡೆಸುವುದು ಕಷ್ಟಸಾಧ್ಯ ಎನ್ನುವ ಮೂಲಕ ಬಿಜೆಪಿ ಪ್ರಸ್ತಾವನೆಯನ್ನು ಪರೋಕ್ಷವಾಗಿ ತಿರಸ್ಕರಿಸಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದಾರೆ. ಇಂತಹ ಗೊಂದಲದ ಸಂದರ್ಭದಲ್ಲೇ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಆಗುವುದಿಲ್ಲ. ಈಗಾಗಲೇ ಲೋಕಸಭೆ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಆಯಾ ಕಾಲಕ್ಕೆ ತಕ್ಕಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದರು.

ಒಂದೇ ರಾಷ್ಟ್ರ, ಒಂದೇ ಚುನಾವಣೆ ನಡೆಸಬೇಕಾದರೆ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಬೇಕು. ಸರ್ವ ಪಕ್ಷಗಳ ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಕ್ರೋಢೀಕರಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕಾನೂನು ಆಯೋಗವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವಾಗ ಚುನಾವಣಾ ಆಯೋಗ ಏನು ಮಾಡಲು ಸಾಧ್ಯ ಎಂದು ರಾವತ್ ಪ್ರಶ್ನಿಸಿದರು.
ಒಂದೇ ಹಂತದ ಚುನಾವಣೆಗೆ ಒತ್ತಾಯ: ನಿನ್ನೆ ಚುನಾವಣಾ ಆಯೋಗ ಮತ್ತು ಕಾನೂನು ಆಯೋಗಕ್ಕೆ ಪ್ರತ್ಯೇಕ ಪತ್ರ ಬರೆದಿದ್ದ ಅಮಿತ್ ಷಾ 2019ರ ಲೋಕಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಬೇಕೆಂದು ಪತ್ರ ಬರೆದಿದ್ದರು.

ಈ ವರ್ಷದ ಅಂತ್ಯಕ್ಕೆ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ, ಜನವರಿಯಲ್ಲಿ ಮಿಜೋರಾಂ. 2019ರ ಅಂತ್ಯಕ್ಕೆ ಮಹಾರಾಷ್ಟ್ರ, ಹರಿಯಾಣ, ಜಾಖರ್ಂಂಡ್, 2020ರಲ್ಲಿ ಬಿಹಾರ ಸೇರಿದಂತೆ ಒಟ್ಟು 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಬೇಕು. ಚುನಾವಣಾ ವೆಚ್ಚ ಹಾಗೂ ಆರ್ಥಿಕ ಹೊರೆ ತಗ್ಗಿಸಲು ಬಿಜೆಪಿ ಒಂದೇ ರಾಷ್ಟ್ರ- ಒಂದೇ ಚುನಾವಣೆ ನಡೆಸಬೇಕೆಂಬ ಬೇಡಿಕೆಯನ್ನು ದೇಶದ ಜನತೆಯ ಮುಂದಿಟ್ಟಿದೆ. ಇದಕ್ಕೆ ಕೆಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದರೆ, ಕೆಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

error: Content is protected !! Not allowed copy content from janadhvani.com