janadhvani

Kannada Online News Paper

ವಿದ್ಯಾರ್ಥಿ ಬಸ್ ಪಾಸ್ ಬಗ್ಗೆ ಸರಕಾರ ಮೌನ ಮುರಿಯಲಿ: ಎಸ್ಸೆಸ್ಸೆಫ್

ಬೆಂಗಳೂರು: (ಜನಧ್ವನಿ ವಾರ್ತೆ)  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸರಕಾರ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಕಳೆದ ಸರಕಾರ ಹೇಳಿಕೊಂಡಿತ್ತು. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಈ ವರೆಗೆ ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಸರಕಾರವು ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ. ಸಂಬಂಧಪಟ್ಟ ಸಚಿವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ಕೊಡುತ್ತಿರುವುದು ಸುದ್ದಿಯಾಗುತ್ತಿದೆ. ಉಚಿತ ಬಸ್ ಪಾಸ್ ದೊರೆಯಲಿದೆ ಎಂಬ ಭರವಸೆಯಲ್ಲಿ ಹಲವು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಕೊಳ್ಳದೇ ದಿನಂಪ್ರತಿ ಟಿಕೆಟ್ ಪಡ್ಕೊಂಡು ಪ್ರಯಾಣಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಬಸ್ ಪಾಸ್ ವಿಷಯದಲ್ಲಿ ರಾಜಕೀಯ ಮಾಡುವುದು ಕೂಡ ಸರಿಯಲ್ಲ. ಶಾಲಾ ಕಾಲೇಜುಗಳನ್ನು ಬಂದ್ ಮಾಡಿಸುವುದು ಕೂಡ ಉಚಿತವಲ್ಲ‌. ಬಂದ್ ಮೂಲಕ ಶಾಲಾ ಕಾಲೇಜುಗಳಲ್ಲಿ ರಾಜಕೀಯ ಬಿತ್ತಲು ಯತ್ನಿಸುವವರ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಅಂತಹ ರಾಜಕೀಯ ದುರುದ್ದೇಶಿತ ಬಂದ್ ಗಳು ನಡೆಯುವ ಮುನ್ನ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಇಸ್ಮಾಈಲ್ ಸಖಾಫಿ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com