ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಪೌಡರ್ ನಿಂದ ಕ್ಯಾನ್ಸರ್‌: 4.7 ಬಿಲಿಯನ್‌ ಡಾಲರ್ ದಂಡ

ಸೇಂಟ್‌ ಲೂಯಿಸ್‌: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿಯ ಪ್ರಸಾಧನ ಪೌಡರ್‌ ಬಳಸಿದ ಕಾರಣಕ್ಕಾಗಿಯೇ ಕ್ಯಾನ್ಸರ್‌ ಬಂದಿದೆ ಎಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದ 22 ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಪರಿಹಾರವಾಗಿ 31,960 ಕೋಟಿ (4.7 ಬಿಲಿಯನ್‌ ಡಾಲರ್) ಪಾವತಿಸುವಂತೆ ಅಮೆರಿಕ ನ್ಯಾಯಾಲಯವು ಆದೇಶ ನೀಡಿದೆ.

ಕಂಪನಿಯ ಪೌಡರ್‌ ಬಳಕೆಯಿಂದ ಕನ್ಲಾರ್ ಧೂಳು ದೇಹ ಸೇರಿ ಗರ್ಭಾಶಯ ಕ್ಯಾನ್ಸರ್‌ಗೆ ತುತ್ತಾದೆವು ಎಂದು ಈ ಮಹಿಳೆಯರು ನ್ಯಾಯಾಲಯದಲ್ಲಿ ದೂರಿದ್ದರು. ಆರು ವಾರಗಳ ಕಾಲ ವಿಚಾರಣೆ ನಡೆಸಿದ ಸೇಂಟ್‌ ಲೂಯಿಸ್‌ ಸರ್ಕ್ಯೂಟ್‌ ನ್ಯಾಯಾಲಯವು ಅತ್ಯಂತ ಬೃಹತ್‌ ಮೊತ್ತದ ಪರಿಹಾರ (ಆತ್ಮಸಾಕ್ಷಿಗೆ ವಿರುದ್ಧ ಎಸಗಿದ ಅಪರಾಧಕ್ಕೆ ನೀಡುವ ಪರಿಹಾರ) ನೀಡುವಂತೆ ಸೂಚಿಸಿದೆ.

‘ಸಂಸ್ಥೆಯ ಯಾವುದೇ ಉತ್ಪನ್ನಗಳು ಕನ್ಲಾರ್‌ ಧೂಳು ಹೊಂದಿಲ್ಲ, ಅಲ್ಲದೇ ಗರ್ಭಾಶಯ ಕ್ಯಾನ್ಸರ್‌ಗೂ ಕಾರಣವಾಗುವುದಿಲ್ಲ’ ಎಂದು ಸಂಸ್ಥೆಯ ವಕ್ತಾರ ಕೆರೊಲ್‌ ಗುಡ್‌ರಿಚ್‌ ಅವರು ತಿಳಿಸಿದ್ದಾರೆ.

‘ಪ್ರಕರಣದ ವಿಚಾರಣೆಯೂ ಸರಿಯಾಗಿ ನಡೆದಿಲ್ಲ, ಮಿಸ್ಸಾರಿಯಲ್ಲಿ ಪ್ರಕರಣ ದಾಖಲಿಸಿರುವ ಅನೇಕ ಮಹಿಳೆಯರು ಇಲ್ಲಿ ನೆಲೆಸಿಲ್ಲ, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯರ ಗರ್ಭಾಶಯದಲ್ಲಿ ಪೌಡರ್‌ನ ಕಣಗಳು ಹಾಗೂ ಕನ್ಲಾರ್‌ ಧೂಳಿನ ಅಂಶ ಪತ್ತೆಯಾಗಿದೆ. ವೈದ್ಯಕೀಯ ತಜ್ಞರು ಕೂಡ ಇದನ್ನು ದೃಢಪಡಿಸಿದ್ದಾರೆ’ ಸಂತ್ರಸ್ತ ಮಹಿಳೆಯರ ಪರ ವಾದ ಮಂಡಿಸಿದ ಮಾರ್ಕ್‌ ಲೆನಿಯರ್‌ ತಿಳಿಸಿದ್ದಾರೆ.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಪೌಡರ್‌ ಬಳಸಿದ್ದರಿಂದ ಗರ್ಭಾಶಯ ಕ್ಯಾನ್ಸರ್‌ಗೆ ತುತ್ತಾಗಿದ್ದೇವೆ ಎಂದು ಕಂಪನಿ ವಿರುದ್ಧ 9 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ, ಆದರೆ ಕಂಪನಿ ಈ ಎಲ್ಲ ಆರೋಪಗಳನ್ನು ತಳ್ಳಿಹಾಕುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಮಾತ್ರ ಭಾರಿ ದಂಡ ತೆರುವಂತಾಗಿದೆ.

Leave a Reply

Your email address will not be published. Required fields are marked *

error: Content is protected !!