ಪ್ರಯಾಗ್ ರಾಜ್: ಜನವರಿ 28ರಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಅಮೃತ ಸ್ನಾನ ಮಾಡುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಮುಸ್ಲಿಮರು ತಮ್ಮ ಮಸೀದಿಗಳ ಬಾಗಿಲನ್ನು ತೆರೆದು, ಅವರಿಗೆ ಆಶ್ರಯ, ಆಹಾರ ಹಾಗೂ ಕಂಬಳಿಗಳನ್ನು ಒದಗಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿರುವ ಬಗ್ಗೆ ವರದಿಯಾಗಿದೆ.
ಗಂಗಾ ನದಿಯ ಸಂಗಮದಲ್ಲಿ ಜರುಗಿದ ಕಾಲ್ತುಳಿತದಲ್ಲಿ ಸುಮಾರು 40 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಭಯಾನಕ ಘಟನೆಯ ನಂತರ, ಹಲವರು ತಮ್ಮ ಪ್ರೀತಿಪಾತ್ರರಿಗಾಗಿ ಹತಾಶೆಯಿಂದ ಹುಡುಕಾಟ ನಡೆಸುತ್ತಿದ್ದರು. ಈ ಗದ್ದಲದಲ್ಲಿ ತಮ್ಮ ಸಂಬಂಧಿಕರ ಮೃತದೇಹಗಳು ಕಳೆದು ಹೋಗಿರಬಹುದು ಎಂದು ಗದ್ಗದಿತರಾಗಿದ್ದ ಜನರು, ಕೈಮುಗಿದು ಪ್ರಾರ್ಥಿಸುತ್ತಿದ್ದರು. ಆಸ್ಪತ್ರೆಗಳು ರಕ್ತಸಿಕ್ತ ಮೃತದೇಹ ಹಾಗೂ ಗಾಯಾಳುಗಳಿಂದ ತುಂಬಿ ತುಳುಕುತ್ತಿದ್ದವು. ಮಹಾ ಕುಂಭಮೇಳಕ್ಕಾಗಿ ಮಾಡಲಾಗಿದ್ದ ವ್ಯವಸ್ಥೆಗಳು ನೆಲಕಚ್ಚಿದ್ದರಿಂದ, ಪ್ರಾಧಿಕಾರಗಳು ಆ ಪ್ರದೇಶದಲ್ಲಿ ಪ್ರವೇಶಕ್ಕೆ ತಡೆ ಹೇರಿದವು. ಇದರಿಂದ ಯಾತ್ರಾರ್ಥಿಗಳು ತಾವು ಎಲ್ಲಿಗೆ ತಲುಪಿದ್ದರೋ, ಅಲ್ಲಿಯೇ ಸಿಲುಕಿಕೊಂಡು ಒದ್ದಾಡತೊಡಗಿದರು.
ಜನವರಿ 29ರಂದು ಪ್ರಯಾಗ್ ರಾಜ್ ನಲ್ಲಿನ ಹತ್ತು ಪ್ರದೇಶಗಳಲ್ಲಿ ತಮ್ಮ ಮಸೀದಿಗಳು, ದರ್ಗಾಗಳು, ಇಮಾಂಬರಗಳು ಹಾಗೂ ತಮ್ಮ ನಿವಾಸಗಳ ಬಾಗಿಲನ್ನು ತೆರೆದ ಮುಸ್ಲಿಮರು, ಸುಮಾರು 25,000ದಿಂದ 26,000 ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಿದರು. ಅಗತ್ಯವಿದ್ದವರಿಗೆ ಆಹಾರ, ಬೆಚ್ಚನೆಯ ಹಾಸಿಗೆ ಹಾಗೂ ವೈದ್ಯಕೀಯ ನೆರವನ್ನು ಒದಗಿಸಿದರು.
ಕಾಲ್ತುಳಿತ ಘಟನೆಯಿಂದ ಹೈವೇಗಳಲ್ಲಿ ಸಂಚಾರ ದಟ್ಟಣೆಯುಂಟಾಗಿ, ಸಾವಿರಾರು ಮಂದಿ ತಾವಿದ್ದಲ್ಲಿಯೇ ಸಿಲುಕಿಕೊಂಡರು. ಬಸ್ ಗಳು ದಾರಿ ಮಧ್ಯದಲ್ಲೇ ನಿಂತು ಹೋಗಿದ್ದರಿಂದ, ಅವರೆಲ್ಲ ಬೀದಿಗಳಲ್ಲಿ ತಮ್ಮ ರಾತ್ರಿಯನ್ನು ಕಳೆಯುವಂತಾಯಿತು. ಈ ರಾತ್ರಿಯ ನಂತರ, ಜನವರಿ 29ರಂದು, ಖುಲ್ದಾಬಾದ್, ನಖ್ಯಸ್ ಕೊಡ್ತಾ, ರೋಶನ್ ಬಾಫ್, ಹಿಮ್ಮತ್ ಗಂಜ್, ರಾಣಿ ಮಂಡಿ ಹಾಗೂ ಶಾಗಂಜ್ ನಿವಾಸಿಗಳು ಯಾತ್ರಾರ್ಥಿಗಳನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದರು.
ಖುಲ್ಲಾಬಾದ್ ಸಬ್ಬಿಮಂಡಿ ಮಸೀದಿ, ಬಡಾ ತಾಝಿಯ ಇಮಾಂಬರ, ಹಿಮ್ಮತ್ ಗಂಜ್ ದರ್ಗಾ ಹಾಗೂ ಚೌಕ್ ಮಸೀದಿಯಂತಹ ಮಸೀದಿಗಳನ್ನು ತಾತ್ಕಾಲಿಕ ಸೂರಾಗಿ ಮಾರ್ಪಡಿಸಲಾಯಿತು. ಮುಸ್ಲಿಂ ಸಮುದಾಯದ ಸದಸ್ಯರು ಯಾತ್ರಾರ್ಥಿಗಳಿಗೆ ಟೀ, ಉಪಾಹಾರ ಹಾಗೂ ಊಟವನ್ನು ಪೂರೈಸಿದರು. ಸ್ಥಳೀಯರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದ ಭಕ್ತಾದಿಗಳಿಗೆ ಹಲ್ವಾಪೂರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಯೋಜಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಬಹದ್ದೂರ್ ಗಂಜ್ (ಡೈರಾ) ನಿವಾಸಿ ಮುಹಮ್ಮದ್ ಇರ್ಶಾದ್, “ಅವರು ನಮ್ಮ ಅತಿಥಿಗಳು” ಎಂದು ಹೇಳಿದ್ದಾರೆ. “ಎಲ್ಲರೂ ತಮ್ಮ ಕೈಲಾದಷ್ಟು ಕೆಲಸ ಮಾಡಿದರು. ಮಹಿಳೆಯರು ಅಡುಗೆ ಮಾಡಲು ಪ್ರಾರಂಭಿಸಿದರು. ಪುರುಷರು ವಿತರಣಾ ಕೇಂದ್ರಗಳನ್ನು ಸಿದ್ಧಪಡಿಸಿದರು. ಯುವಕರು ಭಕ್ತರನ್ನು ಸುರಕ್ಷಿತವಾಗಿ ಆಶ್ರಯಕ್ಕೆ ಕರೆತಂದರು. ನಾವು ಮಾಡಿದ್ದು ನಮ್ಮ ಸಹ ನಾಗರಿಕರ ಕಷ್ಟವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರೊಂದಿಗೆ ನಿಲ್ಲುವುದು” ಎಂದು ರಾಝಾ ಅಬ್ಬಾಸ್ ಝೈದಿ ಹೇಳಿದರು.
“ಕಾಲ್ತುಳಿತ ಘಟನೆಯ ನಂತರ, ಸಾವಿರಾರು ಮಂದಿ ಕೊರೆಯುವ ಚಳಿಯಲ್ಲಿ ಒದ್ದಾಡುತ್ತಿರುವುದನ್ನು ನಾವು ಕಂಡೆವು. ನಾವು ತಕ್ಷಣವೇ ಮಸೀದಿಗಳು ಹಾಗೂ ದರ್ಗಾಗಳನ್ನು ತೆರೆದು, ಎಷ್ಟು ಸಾಧ್ಯವೊ ಅಷ್ಟು ಜನರನ್ನು ನಮ್ಮ ಮನೆಗಳಿಗೆ ಸ್ವಾಗತಿಸಿದೆವು. ಅವರ ಊಟ ಹಾಗೂ ವಾಸ್ತವ್ಯವನ್ನು ನಾವು ಖಾತರಿ ಪಡಿಸಿದೆವು. ಅವರು ಪ್ರಯಾಗ್ ರಾಜ್ ಗೆ ಅತಿಥಿಗಳಾಗಿದ್ದು, ನಾವು ಅವರನ್ನು ನಮ್ಮ ಕೈಲಾದಷ್ಟು ಆರೈಕೆ ಮಾಡಿದೆವು” ಎಂದು ಅವರು ತಿಳಿಸಿದ್ದಾರೆ.
“ಹಿಂದೂಗಳು ತಮ್ಮ ಧಾರ್ಮಿಕ ಪದ್ಧತಿಯನ್ನು ನೆರವೇರಿಸುತ್ತಿದ್ದು, ಮುಸ್ಲಿಮರಾಗಿ ನಾವು ಮಾನವೀಯ ಸೇವೆಯ ಕರ್ತವ್ಯವನ್ನು ಪೂರೈಸಿದ್ದೇವೆ. ಯಾರೂ ಕೂಡಾ ಆಹಾರ ಅಥವಾ ಸೂರಿನ ಕೊರತೆಯಿಂದ ನರಳದಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ. ವಯೋವೃದ್ಧ ಯಾತ್ರಾರ್ಥಿಗಳು ತಮ್ಮ ಗಮ್ಯವನ್ನು ತಲುಪಲು ನಾವು ನೆರವು ನೀಡಿದೆವು. ಇಲ್ಲಿಗೆ ಬಂದವರು ಮಾನವೀಯತೆಯ ಸಂದೇಶದೊಂದಿಗೆ ಮರಳಬೇಕೆನ್ನುವುದೇ ನಮ್ಮ ಬಯಕೆಯಾಗಿದೆ” ಎಂದು ಚೌಕ್ ಪ್ರದೇಶದ ಶಿಕ್ಷಕರಾದ ಮಸೂದ್ ಅಹ್ಮದ್ ಹೇಳಿದ್ದಾರೆ.
“ಮಹಾ ಕುಂಭಮೇಳದಲ್ಲಿ ಮುಸ್ಲಿಮರಿಗೆ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಈ ಮುನ್ನ ಪ್ರಕಟಿಸಿದರೂ, ಹಣೆಬರಹ ಈ ಕಾರ್ಯಕ್ರಮವನ್ನು ನಮ್ಮ ನೆರೆಹೊರೆಗೇ ತಂದಿತು. ನಾವು ಸಹಾಯ ಮಾಡುವುದು ಸಹಜವಾಗಿದೆ” ಎಂದು ಖುಲ್ದಾಬಾದ್ ನಿವಾಸಿ ಅಫರ್ ಮಹಮೂದ್ ಅಭಿಪ್ರಾಯ ಪಟ್ಟಿದ್ದಾರೆ.
ಚೌಕ್ ಪ್ರದೇಶದ ಮೊಹಿನುದ್ದೀನ್ ಕೂಡಾ ಇದೇ ಬಗೆಯ ಅನಿಸಿಕೆ ವ್ಯಕ್ತಪಡಿಸಿದ್ದು, “ಯಾರೂ ಕೂಡಾ ತೆರೆದ ಆಕಾಶದಡಿ ತಮ್ಮ ರಾತ್ರಿಯನ್ನು ಕಳೆಯುವುದು ನಮಗೆ ಬೇಡವಾಗಿತ್ತು. ಹೀಗಾಗಿ ನಾವು ನಮ್ಮ ಬಾಗಿಲುಗಳನ್ನು ತೆರೆದೆವು” ಎಂದು ಹೇಳಿದ್ದಾರೆ.
ಚಳಿಯಿಂದ ನಡುಗುತ್ತಿದ್ದವರಿಗೆ ಸ್ಥಳೀಯ ನಿವಾಸಿಗಳು ಹೇಗೆ ಕ್ಷಿಪ್ರವಾಗಿ ಕಂಬಳಿ ಹಾಗೂ ಹೊದಿಕೆಗಳನ್ನು ವ್ಯವಸ್ಥೆಗೊಳಿಸಿದರು ಎಂದು ನಾಗರಿಕ ಸೇವಾ ಕಾರ್ಯಕರ್ತ ಮುಹಮ್ಮದ್ ಅಝಂ ಸ್ಮರಿಸುತ್ತಾರೆ.”ರಾತ್ರಿ ವೇಳೆ ಜನರು ಒದ್ದಾಡದಿರುವುದನ್ನು ಖಾತರಿ ಪಡಿಸಲು ನಮ್ಮಿಂದ ಏನು ಸಾಧ್ಯವಿತ್ತೊ ಅದನ್ನೆಲ್ಲ ಮಾಡಿದೆವು. ಆಹಾರವನ್ನು ತಕ್ಷಣವೇ ವ್ಯವಸ್ಥೆಗೊಳಿಸಲಾಯಿತು” ಎಂದು ಅವರು ತಿಳಿಸಿದ್ದಾರೆ.
ಯಾದಗರ್ ಹುಸೇನಿ ಇಂಟರ್ ಕಾಲೇಜಿನ ವ್ಯವಸ್ಥಾಪಕ ಮುಹಮ್ಮದ್ ಮೆಹಂದಿ ಜೌಹರ್ ಖಾಸಿಮಿ ಅವರು ತಮ್ಮ ಸಂಸ್ಥೆಯನ್ನು ಪರಿಹಾರ ಶಿಬಿರವನ್ನಾಗಿ ಮಾಡಿದರು.” ಇದು ಎಂದಿಗೂ ಯೋಜಿಸಿರಲಿಲ್ಲ. ತಮ್ಮ ಅತಿಥಿಗಳು ಕಷ್ಟಪಡುತ್ತಿರುವುದನ್ನು ಕಂಡಾಗ ಸಹಾಯಕ್ಕೆ ಬಂದರು. ತರಗತಿಗಳು, ಸಭಾಂಗಣಗಳು ಮತ್ತು ಆಟದ ಮೈದಾನಗಳಲ್ಲಿ ಸಾವಿರಾರು ಜನರು ವಿಶ್ರಾಂತಿ ಪಡೆದರು. ಅವರಿಗೆ ನಿರಂತರವಾಗಿ ಆಹಾರವನ್ನು ಬೇಯಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನದ ನಂತರ ಜನರು ತೆರಳುವವರೆಗೆ ವಿತರಣೆ ಮಾಡಲಾಯಿತು ಎಂದು ಖಾಸಿಮಿ ಹೇಳಿದರು.
ಐತಿಹಾಸಿಕವಾಗಿ, ಕುಂಭಮೇಳಗಳು ಹಿಂದೂ-ಮುಸ್ಲಿಂ ಸೌಹಾರ್ದದ ವೇದಿಕೆಗಳಾಗಿವೆ. ಕುಂಭಮೇಳಕ್ಕೆ ಮುಸ್ಲಿಂ ದೋಣಿ ನಡೆಸುವವರು ಮತ್ತು ಕರಕುಶಲ ಮಾರಾಟಗಾರರು ಬರುತ್ತಿದ್ದರು. ಆದರೆ ಈ ಬಾರಿ ಎಲ್ಲವೂ ವಿಭಿನ್ನವಾಗಿತ್ತು. ಕುಂಭಮೇಳದಲ್ಲಿ ಮುಸ್ಲಿಂ ಮಾರಾಟಗಾರರನ್ನು ಬಹಿಷ್ಕರಿಸುವಂತೆ ಆಮೂಲಾಗ್ರ ಹಿಂದುತ್ವ ಸಂಘಟನೆಗಳು ಕರೆ ನೀಡಿವೆ. ಅನೇಕ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ವ್ಯಾಪಾರಕ್ಕೆ ಯತ್ನಿಸಿದವರ ಮೇಲೆ ದೌರ್ಜನ್ಯ ನಡೆಸಿದ ಘಟನೆಗಳೂ ನಡೆದಿವೆ.
“ಈ ಬಾರಿ ನಮ್ಮನ್ನು ಕುಂಭಮೇಳಕ್ಕೆ ಆಹ್ವಾನಿಸಲಾಗಿಲ್ಲ. ಆದರೆ ಬಿಕ್ಕಟ್ಟು ಬಂದಾಗ ನಾವು ಹೆಜ್ಜೆ ಹಾಕಿದೆವು. ನಮ್ಮ ಸುತ್ತಮುತ್ತಲಿನವರ ಕಷ್ಟವನ್ನು ನಾವು ನೋಡದೆ ಇರಲು ಸಾಧ್ಯವಾಗಲಿಲ್ಲ. ಸಹಾಯ ಮಾಡುವುದು ನಮ್ಮ ಕರ್ತವ್ಯ” ಎಂದು ಉದ್ಯಮಿ ಮಹ್ಮದ್ ಝಾಹಿದ್ ಹೇಳಿದರು.
ಸಂಕಷ್ಟದ ಸಮಯದಲ್ಲಿ ತೋರಿರುವ ಈ ಕೋಮು ಸೌಹಾರ್ದತೆ ಹಾಗೂ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಯಾಗ್ ರಾಜ್ ಜನತೆ ಎಲ್ಲ ವಿಭಾಗಗಳಲ್ಲೂ ಮಾನವೀಯ ನೆರವು ನೀಡುವ ಮೂಲಕ ಹೇಗೆ ಮಾನವೀಯತೆಗೆ ನಿದರ್ಶನವಾದರು ಎಂಬುದರ ಮೇಲೆ ಈ ವರದಿಯು ಬೆಳಕು ಚೆಲ್ಲಿದೆ.


















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ