janadhvani

Kannada Online News Paper

ಧರ್ಮಗಳ ಮೌಲ್ಯಗಳನ್ನರಿತು ಜೀವಿಸಿದ್ದಲ್ಲಿ ಸದೃಢ ಸಮಾಜ ಕಟ್ಟಲು ಸಾಧ್ಯ- ಶಾಫಿ ಸಅದಿ

ಬೆಂಗಳೂರು, ಜೂನ್ 13 :(ಜನಧ್ವನಿ ವಾರ್ತೆ) ಹೈಕೋರ್ಟ್ ವಕೀಲರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಬೃಹತ್ ಇಫ್ತಾರ್ ಕೂಟವು ಬೆಂಗಳೂರಿನ ಕನ್ನಿಂಗಾಮ್ ರಸ್ತೆಯಲ್ಲಿರುವ ಫಿರೋಝ್ ಎಸ್ಟೇಟ್ ಸಭಾಂಗಣದಲ್ಲಿ ಜರುಗಿತು.

ಇಫ್ತಾರ್ ಕಾರ್ಯಕ್ರಮದ ಮುಂಚಿತವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದ ಇಹ್ಸಾನ್ ರಾಜ್ಯಾಧ್ಯಕ್ಷರಾದ ಮೌಲಾನ ಎನ್.ಕೆ.ಎಂ ಶಾಫಿ ಸ ಅದಿಯವರು ಪ್ರತಿಯೊಂದು ಧರ್ಮವು ಇಲ್ಲಿ ಶಾಂತಿ, ಸೌಹಾರ್ದತೆಯನ್ನು ಬೋಧಿಸುವಾಗ ಧರ್ಮದ ಹೆಸರಿನಲ್ಲಿ ನಡೆಯುವ ಅನೈಕ್ಯತೆ, ಅನಾಚಾರಗಳು ಖಂಡನೀಯವಾಗಿದೆ, ಧರ್ಮಗಳ ಮೌಲ್ಯವನ್ನು ಅರಿತು ಜೀವಿಸಿದರೆ ಶಾಂತಿಯುತ, ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಪ್ರವಾದಿ ಸ. ಅರವರು ಜಗತ್ತಿಗೆ ಶಾಂತಿಯ ಸಂದೇಶವನ್ನು ಬೋಧಿಸಿ, ಜನರನ್ನು ಕೆಡುಕಿನಿಂದ ಒಳಿತಿನೆಡೆಗೆ ಪ್ರೇರೇಪಿಸುವಂತಹ ಸಂದೇಶವನ್ನು ನೀಡಿದ್ದಾರೆ. ರಂಝಾನ್ ತಿಂಗಳು ಕೇವಲ ಉಪವಾಸದಿಂದ ಇರಲು ಮಾತ್ರ ಸೀಮಿತವಾಗಿರುವಂತದಲ್ಲ, ಬದಲಾಗಿ ಒಬ್ಬ ಸತ್ಯ ವಿಶ್ವಾಸಿಯು ತನ್ನ ಮನಸ್ಸುಗಳನ್ನು ಕೆಡುಕಿನಿಂದ ನಿಯಂತ್ರಿಸಲ್ಪಡಲು ಇರುವಂತಹ ತಿಂಗಳಾಗಿದೆ ಎಂದು ಹೇಳಿದ ಅವರು , ಇಸ್ಲಾಂ ಪ್ರತಿಪಾದಿಸಿದ ತತ್ವಗಳನ್ನು ಮನವರಿಕೆ ಮಾಡಿಸಿಕೊಟ್ಟರು.

ಇಫ್ತಾರ್ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ರಾಗಿ ಆಯ್ಕೆಯಾದ ನವಾಝ್ ಮೊಹಮ್ಮದ್ , ಅಡ್ವಕೇಟ್ ಜನರಲ್ ಅಸಿಸ್ಟೆಂಟ್ ಪೊಣ್ಣನ್ನ, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾದ ರಂಗನಾಥ್, ಹಿರಿಯ ವಕೀಲರಾದ ಬಿ.ವಿ ಆಚಾರ್ಯ, ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜ್ ಗೋಪಾಲಗೌಡ, ನಿವೃತ್ತ ಜಡ್ಜ್ ಗಂಗಾಧರಯ್ಯ , ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಾಜಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ರಿಯಾಝ್ ಖಾನ್ ಸಹಿತ ಇನ್ನಿತರ ಅನೇಕರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com