janadhvani

Kannada Online News Paper

ಇಸ್ಲಾಮ್ ವಿರುದ್ದ ಟ್ವೀಟ್ – ದುಬೈ ನಲ್ಲಿ ಉದ್ಯೋಗ ಕಳಕೊಂಡ ಸೆಲೆಬ್ರಿಟಿ ಚೆಫ್

ದುಬೈ: ಸೆಲೆಬ್ರಿಟಿ ಚೆಫ್ ಅತುಲ್ ಕೋಚಾರ್ ದುಬೈನಲ್ಲಿನ ತನ್ನ ಕೆಲಸವನ್ನು ಕಳೆದು ಕೊಂಡಿದ್ದಾರೆ.ಸಾಮಾಜಿಕ ಜಾಲತಾಣದ ಮೂಲಕ ಇಸ್ಲಾಂ ಧರ್ಮದ ವಿರುದ್ಧ ಪ್ರತಿಕ್ರಿಯೆಯನ್ನು  ಬಿತ್ತರಿಸಿರುವ ಕಾರಣಕ್ಕಾಗಿ ಈ ಕ್ರಮ ಎನ್ನಲಾಗಿದೆ.

ಪಂಚತಾರಾ ಹೊಟೇಲ್ ಜೆಡಬ್ಲ್ಯೂ ಮಾರಿಯಟ್ ಮಾರ್ಕ್ವಿಸ್ ಹೊಟೇಲ್ ನ ರಂಗ್ ಮಹಲ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಕೋಚಾರ್ ನ ಹೇಳಿಕೆಗಳು ಮಾಧ್ಯಮಗಳಲ್ಲಿ ಬಲವಾದ ವಿರೋಧಕ್ಕೆ ಗುರಿಯಾದ ಕಾರಣ  ಹೊಟೇಲ್‌ನ ಅಧಿಕಾರಿಗಳು ಕೋಚಾರ್ ನೊಂದಿಗಿನ  ಒಪ್ಪಂದವನ್ನು ರದ್ದುಗೊಳಿಸಿದ್ದಾರೆ.

ಅಮೆರಿಕನ್ ಟೆಲಿವಿಷನ್ ಸರಣಿಯ ಸಂಚಿಕೆಯೊಂದರಲ್ಲಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಿಂದೂ ರಾಷ್ಟ್ರೀಯವಾದಿಗಳನ್ನು ಭಯೋತ್ಪಾದಕರು ಎಂದು ಚಿತ್ರಿಸಿರುವುದನ್ನು ಟೀಕಿಸುತ್ತಾ, ಕೋಚಾರ್ ಇಸ್ಲಾಮಿನ ವಿರುದ್ದ ಕೆಟ್ಟದಾಗಿ ಪ್ರತಿಕ್ರಯಿಸಿದ್ದರು.

“ಎರಡು ಸಾವಿರ ವರ್ಷಗಳಿಂದ ಇಸ್ಲಾಂನ ಭಯೋತ್ಪಾದನೆಗೆ ತುತ್ತಾಗುತ್ತಿರುವ ಹಿಂದೂಗಳ ಭಾವನೆಗಳನ್ನು ಪ್ರಿಯಾಂಕಾ ಯಾಕೆ ಅರ್ಥಮಾಡುವುದಿಲ್ಲ “ಎಂದು ಕೊಚಾರ್ ಟ್ವೀಟಿಸಿದ್ದರು. ಇದು  ವಿವಾದವಾಗುತ್ತಿದ್ದಂತೆ  ತಕ್ಷಣ ಟ್ವೀಟನ್ನು ಹಿಂಪಡೆದರೂ, ಆಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಅದು ಹರಡಿ ಕೊಂಡಿತ್ತು.

ನಂತರ ಕೊಚಾರ್ ಕ್ಷಮೆಯಾಚಿಸಿದ್ದರು.ನನ್ನ ಟ್ವೀಟ್ ನ್ನು ನಾನು ಸಮರ್ಥಿಸುತ್ತಿಲ್ಲ,  ಹಠಾತ್ ಭಾವನೆಯಿಂದಾಗಿ ತಪ್ಪು ಸಂಭವಿಸಿರುವುದಾಗಿಯೂ ,ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದ ಅವರು,ನನ್ನ ಮುಸ್ಲಿಂ ಸ್ನೇಹಿತರು, ಮುಸ್ಲಿಂ ಸಮುದಾಯದೊಂದಿಗೆ ನನ್ನ ಇತ್ತೀಚಿನ ಟ್ವೀಟ್ ಗಳಿಗಾಗಿ ನಾನು ಕ್ಷಮೆ ಬಯಸುತ್ತೇನೆ ಎಂದಿದ್ದರು.

ಆದರೆ ಕೊಚಾರ್ ಕ್ಷಮಾಪಣೆಯನ್ನು ಒಪ್ಪಿಕೊಳ್ಳಲು ಹಲವು ಮಂದಿ ತಯಾರಿರಲಿಲ್ಲ.ರೆಸ್ಟೊರೆಂಟ್ ಬಹಿಷ್ಕಾರಕ್ಕಾಗಿ ಕೂಗು ಕೇಳಿಬಂದಿತ್ತು. ಅಲ್ಲಿ ಕಾಯ್ದಿರಿಸಲಾಗಿದ್ದ  ಹಲವಾರು ಕಾರ್ಯಕ್ರಮಗಳನ್ನು ರದ್ದು ಪಡಿಸಲಾಯಿತು.ಇದರಿಂದ ಎಚ್ಚೆತ್ತ ಹೋಟೆಲ್ ಅಧಿಕಾರಿಗಳು ಮುಸ್ಲಿಮರ ಅತೃಪ್ತಿಯನ್ನು ತಪ್ಪಿಸಲು ಕೊಚಾರ್ ಅವರನ್ನು ವಜಾಗೊಳಿಸಿ, ವಿಷಾಧ ವ್ಯಕ್ತಪಡಿಸಿದರು.”ಚೆಫ್ ಅತುಲ್ ಕೋಚಾರ್ ಅವರ ಇತ್ತೀಚಿನ ಟ್ವೀಟ್ ನಂತರ ರಂಗ್ ಮಹಲ್ ನೊಂದಿಗೆ ನಮ್ಮ ಒಪ್ಪಂದವನ್ನು ಅಂತ್ಯಗೊಳಿಸಲು ನಾವು ನಿರ್ಧರಿಸಿದ್ದೇವೆ.ಅವರು ಇನ್ನು ಮುಂದೆ ಹೋಟೆಲ್ ಅಥವಾ ರೆಸ್ಟೊರೆಂಟ್ ನೊಂದಿಗೆ ಯಾವುದೇ ಸಂಬಂಧಗಳನ್ನು ಹೊಂದಿಲ್ಲ ಎಂದು ವಿವರಿಸಿದರು.

ಜೆಡಬ್ಕ್ಯೂ ಮಾರಿಯಟ್‌ನ ನಿರ್ಧಾರವು ದುರದೃಷ್ಟಕರವೆಂದು ಕೋಚಾರ್ ಪ್ರತಿಕ್ರಿಯಿಸಿದರು.ಆದರೂ, ನಾನು ಉಂಟುಮಾಡಿದ ಅತಿದೊಡ್ಡ ಬಿಕ್ಕಟ್ಟು ಹೋಟೆಲ್‌ಗೆ ಉಂಟು ಮಾಡಿದ ನಷ್ಟವನ್ನು ನಾನು ಅರ್ಥಮಾಡಿಕೊಂಡಿದ್ದೇನೆ.ಹೋಟೆಲ್ ಗೆ, ವಿಶೇಷವಾಗಿ ಅದರ ಉದ್ಯೋಗಿಗಳೊಂದಿಗೆ ನನಗೆ ಹೆಚ್ಚಿನ ಗೌರವವಿದೆ.ಹೋಟೆಲ್  ನ  ನಿರ್ಧಾರವು ಭವಿಷ್ಯಕ್ಕೆ ಒಳ್ಳೆಯದು ಎಂದು ಅವರು ಹೇಳಿಕೆ ನೀಡಿದರು.

error: Content is protected !! Not allowed copy content from janadhvani.com