ಮಂಗಳೂರಿನ ಕಂಕನಾಡಿಯ ಒಳ ರಸ್ತೆಯಲ್ಲಿ ಶುಕ್ರವಾರ ದಿನ ನಮಾಝಿಗೆ ಬೆರಳೆಣಿಕೆ ಜನ ರಸ್ತೆಯಲ್ಲಿ ನಮಾಝ್ ಮಾಡಿದ್ದಾರೆಂದು ದೊಡ್ಡ ರಾದ್ಧಾಂತ ಮಾಡಿ ರಾಜಕೀಯ ಮಾಡುವುದು ನೋಡಿ ಅಚ್ಚರಿಯಾಗಿದೆ ಎಂದು ಎನ್ ಕೆ ಎಮ್ ಶಾಫಿ ಸಅದಿ (ಮಾಜಿ ವಕ್ಫ್ ಅಧ್ಯಕ್ಷರು) ತಮ್ಮ ಫೇಸ್ಬುಕ್ ಖಾತೆ ಮೂಲಕ ವ್ಯಕ್ತ ಪಡಿಸಿದ್ದಾರೆ.
ಸಾಮಾನ್ಯವಾಗಿ ಒಂದೈದು ನಿಮಿಷ ಮಸೀದಿಯ ಸ್ಥಳಾವಕಾಶ ಕೊರತೆಯಿಂದ ಹೊರಗಡೆ ಶುಕ್ರವಾರದ ನಮಾಝ್ ಮಾಡಿರುವುದು ಕಂಡು ಬಂದಿದೆ. ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಮುಸ್ಲಿಮರಿಗೆ ಸಂಬಂಧಿಸಿದಂತೆ ವಿಶೇಷ ಮಹತ್ವ ಉಳ್ಳದ್ದಾಗಿದೆ. ಸ್ಥಳಾವಕಾಶದ ಕೊರತೆಯ ಕಾರಣ ರಸ್ತೆ ಬದಿಯಲ್ಲಿ ಕೆಲವರು ನಮಾಝ್ ಮಾಡಿದ್ದಾರೆ. ಆದರೆ ಯಾವುದೇ ಸಾರ್ವಜನಿಕ ತೊಂದರೆ ಅದರಿಂದ ಕಂಡು ಬಂದಿಲ್ಲ.
ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಗೆ ಸಾಮಾನ್ಯವಾಗಿ ಮುಸ್ಲಿಂ ಸಮುದಾಯವೇ ಪ್ರೋತ್ಸಾಹ ನೀಡುವುದಿಲ್ಲ. ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯ ಯಾವುದೇ ಚಟುವಟಿಕೆಗಳಿಗೆ ಇಸ್ಲಾಂ ಧರ್ಮವೇ ಅನುಮತಿಸುದಿಲ್ಲ. ಅನಿವಾರ್ಯವಾಗಿ ಕೆಲವರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದನ್ನು ದೊಡ್ಡ ರಾದ್ಧಾಂತ ಮಾಡುವ ಮಾಧ್ಯಮಗಳು ಹಾಗೂ ವ್ಯಕ್ತಿಗಳ ಬಗ್ಗೆ ನಮ್ಮ ಆಕ್ರೋಶವಿದೆ. ಒಂದು ತಿಳುವಳಿಕೆ ನೀಡಿ ಜಾಗೃತಿ ಮೂಡಿಸಬೇಕಾದ ಒಂದು ವಿಷಯದಲ್ಲಿ ಸರ್ಕಾರ ಕೇಸ್ ದಾಖಲಿಸಿರುವುದು ಅಚ್ಚರಿ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವಿವಿಧ ದೇವಸ್ಥಾನ, ಮಂದಿರ ,ಮಸೀದಿ, ಚರ್ಚ್ ಇರುವಲ್ಲಿ ಕೆಲವೊಂದು ಅನಿವಾರ್ಯ ಸಂದರ್ಭ ಪರಸ್ಪರ ವಿಶ್ವಾಸದಿಂದ ಇಲ್ಲಿ ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲೇ ಧಾರ್ಮಿಕ ಚಟುವಟಿಕೆಗಳು ಮುಕ್ತವಾಗಿ ನಡೆಯುತ್ತಾ ಇರುವುದು ಇಲ್ಲಿನ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಜಿಲ್ಲೆಯಲ್ಲಿ ಸೌಹಾರ್ದ ಕೆಡಿಸುವ ಯತ್ನಗಳು ಸಧ್ಯ ನಡೆಯುತ್ತಿರುವಂತೆ ಕಾಣುತ್ತಿದೆ. ಪೋಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡಬೇಕೆಂದು ಅಪೇಕ್ಷಿಸುತ್ತೇನೆ.
ಈ ಘಟನಾವಳಿಗಳನ್ನು ತಕ್ಷಣ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳ, ಸಚಿವರುಗಳ ಗಮನಕ್ಕೆ ತರುತ್ತೇನೆ ಎಂದು ಅವರು ತಿಳಿಸಿದ್ದಾರೆ.