janadhvani

Kannada Online News Paper

ಹೆಲಿಕಾಪ್ಟರ್ ಪತನ- ಇರಾನ್ ಅಧ್ಯಕ್ಷ ಇಬ್ರಾಹಿಂ ರಈಸಿ ಮೃತ್ಯು

ಅಪಘಾತವಾದ ಸ್ಥಳದಲ್ಲಿ ಯಾರೂ ಬದುಕಿ ಉಳಿದಿರುವ ಕುರುಹು ಕಂಡುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟೆಹ್ರಾನ್ : ಇರಾನ್ ಅಧ್ಯಕ್ಷ ಇಬ್ರಾಹಿಂ ರಈಸಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಪಘಾತಕ್ಕೀಡಾಗಿ ನಿಧನ ಹೊಂದಿದ್ದಾರೆ ಎಂದು ಇರಾನ್ ಸರ್ಕಾರ ಘೋಷಿಸಿದೆ.

ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಈ ವರದಿ ಮಾಡಿದ್ದು, ಹೆಲಿಕಾಪ್ಟರ್ ಅಪಘಾತ ಭಾನುವಾರ ಸಂಭವಿಸಿತ್ತು. 12 ಗಂಟೆಗಳ ನಂತರ ರಕ್ಷಕರು ಸೋಮವಾರ ಬೆಳಿಗ್ಗೆ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆಹಚ್ಚಿಸಿದರು. ಅಪಘಾತವಾದ ಸ್ಥಳದಲ್ಲಿ ಯಾರೂ ಬದುಕಿ ಉಳಿದಿರುವ ಕುರುಹು ಕಂಡುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಹೆಲಿಕಾಪ್ಟರ್ ದಟ್ಟ ಮಂಜಿನಿಂದಾವೃತವಾದ ಪರ್ವತ ಪ್ರದೇಶವೊಂದರ ಮೇಲೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಪೂರ್ವ ಅಜೆರ್ಬೈಜಾನ್‌ ಪ್ರಾಂತ್ಯದ ಗವರ್ನರ್‌ ಮಾಲೆಕ್‌ ರಹಮತಿ, ತಬ್ರಿಜ್‌‍ನ ಇಮಾಮ್‌ ಮೊಹಮದ್‌ ಅಲಿ ಅಲೆಹಶೆಮ್‌‍, ಪೈಲಟ್‌‍, ಕೋ ಪೈಲಟ್‌‍, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್‌‍ಮ್ಯಾನ್‌‍ಗಳು ಮೃತಪಟ್ಟಿದ್ದಾರೆ.

ಪರ್ವತ ಪ್ರದೇಶದ ದುರ್ಗಮ ಸ್ಥಳಗಳು ಹಾಗೂ ಪ್ರತಿಕೂಲ ವಾತಾವರಣದ ನಡುವೆ ಗಂಟೆಗಟ್ಟಲೆ ಶೋಧ ಕಾರ್ಯ ನಡೆಸಿದ ಬಳಿಕ ರಕ್ಷಣಾ ತಂಡಗಳು ಪತನಗೊಂಡ ಹೆಲಿಕಾಪ್ಟರ್‌ ಅನ್ನು ಪತ್ತೆ ಮಾಡಿವೆ. ಅದು ಬಹುತೇಕ ಸಂಪೂರ್ಣ ಛಿದ್ರಗೊಂಡಿದೆ. ಅಧ್ಯಕ್ಷ ರಈಸಿ ಅವರ ಹೆಲಿಕಾಪ್ಟರ್‌ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ವರದಿಯಾಗಿದೆ.

ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಇರಾನ್‌ನ ತಬೀಝ್ ನಗರದಲ್ಲಿ ಆಝರ್‌ಬೈಜಾನ್ ನ ಅಧ್ಯಕ್ಷ ಇಸ್ಲಾಮ್ ಅಲಿಯೆವ್ ಜೊತೆಗೂಡಿ ಖಿಝ್ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ.

ಹೆಲಿಕಾಪ್ಟ‌ರ್ ಪತನಗೊಂಡ ಸ್ಥಳದ ವೀಡಿಯೋ ಫುಟೇಜ್ ಕೂಡ ಲಭ್ಯವಾಗಿದೆ. ಹೆಲಿಕಾಪ್ಟರ್ ನಲ್ಲಿ ಅಧ್ಯಕ್ಷ ರಯೀಸಿ, ವಿದೇಶ ಸಚಿವ ಹುಸೇನ್ ಅಮೀರ್‌ ಅಬ್ದುಲ್ಲಾಹಿ ಮತ್ತು ಇತರ ಅಧಿಕಾರಿಗಳಿದ್ದರು. ಹಾರಾಟ ಆರಂಭಿಸಿದ ಸುಮಾರು 30 ನಿಮಿಷಗಳಲ್ಲಿ ಹೆಲಿಕಾಪ್ಟ‌ರ್ ಸಂಪರ್ಕ ಕಳೆದುಕೊಂಡಿತ್ತು.

ಆರಂಭಿಕ ವರದಿಗಳ ಪ್ರಕಾರ ಇದೊಂದು ಅಪಘಾತವೆಂದು ಇರಾನ್ ಸ್ಟೇಟ್ ಮಾದ್ಯಮ ವರದಿ ಮಾಡಿದೆ. ಅಧ್ಯಕ್ಷರ ತಂಡದಲ್ಲಿದ್ದ ಇಬ್ಬರು ರಕ್ಷಣಾ ತಂಡವನ್ನು ಸಂಪರ್ಕಿಸಿದ್ದರು ಎಂದ ಎಕ್ಸಿಕ್ಯುಟಿವ್‌ ಅಫೇರ್ಸ್‌ ಉಪಾಧ್ಯಕ್ಷ ಮುಪ್ಪಿನ್ ಮನ್ಸೂರಿ ಹೇಳಿದ್ದಾರೆ. ಇಸ್ರೇಲ್‌ ಜತೆಗಿನ ಇರಾನ್‌ ಸಂಘರ್ಷದ ನಡುವೆ ಈ ಅಪಘಾತ ಸಂಭವಿಸಿದೆ. ಹೀಗಾಗಿ ಘಟನೆಯಲ್ಲಿ ಇಸ್ರೇಲ್‌ ಪಾತ್ರ ಇರುವ ಆರೋಪಗಳು ಕೇಳಿಬಂದಿವೆ. ಆದರೆ ಇರಾನ್‌ನ ಬಹುತೇಕ ಮಾಧ್ಯಮಗಳು ಇದನ್ನು ಅಪಘಾತ ಎಂದೇ ತಿಳಿಸಿವೆ.

ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂಬ ಸುದ್ದಿಗಳ ಬೆನ್ನಲ್ಲಿ 60ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು.

ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಎನ್ ಎ ಅಧ್ಯಕ್ಷರ ಪತನಗೊಂಡ ಹೆಲಿಕಾಪ್ಟ‌ರ್ ಫುಟೇಜ್ ಬಿಡುಗಡೆಗೊಳಿಸಿದೆ.

ಕಠಿಣ ನಿಲುವಿನ 63 ವರ್ಷದ ರಈಸಿ, ಈ ಮೊದಲು ದೇಶದ ನ್ಯಾಯಾಂಗದ ಮುಖ್ಯಸ್ಥರಾಗಿದ್ದರು. ಇರಾನ್‌ನ ಪರಮೋಚ್ಛ ನಾಯಕ ಅಯಾತ್‌ ಉಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿ ಎಂದೇ ಇವರನ್ನು ಗುರುತಿಸಲಾಗುತ್ತಿದೆ.

ಇರಾನ್‌ ಇತಿಹಾಸದಲ್ಲೇ ಮತಪ್ರಮಾಣ ಕಡಿಮೆ ಆಗಿದ್ದ 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಈಸಿ ಆಯ್ಕೆಯಾಗಿದ್ದರು. 1988ರಲ್ಲಿ ಸಾವಿರಾರು ರಾಜಕೀಯ ಕೈದಿಗಳ ಮರಣದಂಡನೆ ಹಿನ್ನೆಲೆಯಲ್ಲಿ ಅಮೆರಿಕ ಇವರ ಮೇಲೆ ನಿರ್ಬಂಧ ಹೇರಿದೆ.

error: Content is protected !! Not allowed copy content from janadhvani.com