janadhvani

Kannada Online News Paper

ಅಮಾಯಕರನ್ನು ವಿದೇಶಕ್ಕೆ ಕರೆದೊಯ್ದು ಕಿಡ್ನಿ ಮಾರಾಟ- ಗ್ಯಾಂಗ್‌ ನಾಯಕನ ಬಂಧನ

ಈ ಗ್ಯಾಂಗ್ ಸಂತ್ರಸ್ತರನ್ನು ನಂಬಿಸಿ ಮೋಸ ಮಾಡಿ ವಿದೇಶಕ್ಕೆ ಕಳ್ಳಸಾಗಣೆ ಮಾಡಿ ಕಿಡ್ನಿ ವ್ಯಾಪಾರ ಮಾಡುತ್ತಿತ್ತು.

ಕೊಚ್ಚಿ | ಮಲಯಾಳಿಗಳು ಸಹಿತವಿರುವವರನ್ನು ವಿದೇಶಕ್ಕೆ ಕರೆದೊಯ್ದು ಕಿಡ್ನಿ ಮಾರಾಟ ಮಾಫಿಯಾಗೆ ಒಪ್ಪಿಸುವ ಗ್ಯಾಂಗ್‌ನ ನಾಯಕನನ್ನು ಬಂಧಿಸಲಾಗಿದೆ. ತ್ರಿಶೂರ್ ವಲಪಾಡ್ ಮೂಲದ ಸಾಬಿತ್ ನಾಸರ್‌ ನನ್ನು ಕೇರಳದ ನೆಡುಂಬಾಸ್ಸೇರಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಈತ ಅಂತಾರಾಷ್ಟ್ರೀಯ ಮಾಫಿಯಾದ ಭಾಗವಾಗಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಹಿಂದೆ ಆತನ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿತ್ತು. ಕೇಂದ್ರ ಗುಪ್ತಚರ ವರದಿಯ ಪ್ರಕಾರ ಅವನನ್ನು ಬಂಧಿಸಲಾಗಿದೆ.

ಈ ಗ್ಯಾಂಗ್ ಸಂತ್ರಸ್ತರನ್ನು ನಂಬಿಸಿ ಮೋಸ ಮಾಡಿ ವಿದೇಶಕ್ಕೆ ಕಳ್ಳಸಾಗಣೆ ಮಾಡಿ ಕಿಡ್ನಿ ವ್ಯಾಪಾರ ಮಾಡುತ್ತಿತ್ತು. ಕಿಡ್ನಿ ನೀಡಿದಾತನಿಗೆ ಅಲ್ಪ ಮೊತ್ತವನ್ನು ಪಾವತಿಸಿದ ನಂತರ ಹೆಚ್ಚಿನ ಬೆಲೆಗೆ ಮೂತ್ರಪಿಂಡಗಳನ್ನು ಮಾರಾಟ ಮಾಡುವುದಾಗಿದೆ ರೂಢಿ. ಈತ ಕಿಡ್ನಿ ದಂಧೆಗಾಗಿ ಹಲವು ಮಂದಿಯನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಿರುವುದಾಗಿ ವರದಿಯಾಗಿದೆ.

ಮೊದಲು ನೆಡುಂಬಸ್ಸೆರಿಯಿಂದ ಕುವೈತ್‌ಗೆ ಮತ್ತು ಅಲ್ಲಿಂದ ಇರಾನ್‌ಗೆ ಜನರನ್ನು ಕರೆದೊಯ್ಯಲಾಗುತ್ತಿತ್ತು. ಈ ರೀತಿ ಜನರನ್ನು ಕರೆದೊಯ್ದು ವಾಪಸಾಗುತ್ತಿದ್ದ ವೇಳೆ ಸಾಬಿತ್ ನಾಸರ್ ಎಂಬಾತನನ್ನು ಬಂದಿಸಲಾಗಿದೆ. ಈತನ ವಿರುದ್ಧ ಅಂಗಾಂಗ ಸಾಗಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಂಗಾಂಗ ಸಾಗಣೆ ಮಾಫಿಯಾದೊಂದಿಗೆ ಇನ್ನಷ್ಟು ಮಂದಿ ಸಂಪರ್ಕ ಹೊಂದಿದ್ದಾರೆಂದು ಈತನ ವಿಚಾರಣೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಸಿಕ್ಕಿಬೀಳಲಿದ್ದಾರೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಗೂ ತನಿಖೆ ವಿಸ್ತರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ಸಿದ್ಧವಾಗಿಲ್ಲ.

error: Content is protected !! Not allowed copy content from janadhvani.com