janadhvani

Kannada Online News Paper

ಲೋಕಸಭೆ ‌ಚುಣಾವಣೆ ಸಂದರ್ಭದಲ್ಲಿ ಉಮ್ರಾ ಯಾತ್ರೆ ಕೈಗೊಂಡಿದ್ದರೆ ಮುಂದೂಡಲು ದ.ಕ. ವಕ್ಫ್ ಜಿಲ್ಲಾಧ್ಯಕ್ಷರ ಸೂಚನೆ

ಮಂಗಳೂರು : ಬಹಳ ಪ್ರಾಮುಖ್ಯತೆ ಹೊಂದಿರುವ ಲೋಕಸಭೆ ಚುಣಾವಣೆ ಸಂದರ್ಭದಲ್ಲಿ ಏಪ್ರಿಲ್ 26‌ಕ್ಕಿಂತ ಮುಂಚೆ ನಿಗದಿಯಾಗಿರುವ ಮತದಾನಕ್ಕೆ ಅನಾನುಕೂಲವಾಗುವಂತೆ ನಿಗದಿ ಪಡಿಸಿದ ಎಲ್ಲಾ ಉಮ್ರಾ ಯಾತ್ರೆಗಳನ್ನು ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ ಏಪ್ರಿಲ್ 26ರಂದು ನಡೆಯಲಿದೆ. ಆದರೆ ಈ ಸಂದರ್ಭದಲ್ಲಿ ಹಲವು ಉಮ್ರಾ ಟೂರಿಸ್ಟ್ ಸಂಸ್ಥೆಗಳು ಉಮ್ರಾ ಯಾತ್ರೆ ಹಾಗೂ ಇನ್ನಿತರ ಟೂರ್ ನಿಗದಿಪಡಿಸಿರುವ ಕಾರಣ ಹಲವು ಮತದಾರರು ಮತದಾನದಿಂದ ವಂಚಿತರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ಮನವಿ/ದೂರುಗಳು ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ಚಿಂತಕರು, ಸಮಾಜ ಸೇವಕರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚುನಾವಣಾ ಆಯೋಗವು ಹೆಚ್ಚಿನ ಮತದಾನ ನಡೆಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡಸುತ್ತಿದ್ದು, ಅತ್ಯಧಿಕ ಮತದಾನ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕಿದೆ. ಮತದಾನವು ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಅತ್ಯುನ್ನತ ಕರ್ತವ್ಯವಾಗಿದ್ದು, ದೇಶಕ್ಕೆ ಸುಭದ್ರ ಸರಕಾರ ಮತ್ತು ಉತ್ತಮ ಆಡಳಿತ ಸಿಗಲು ಪ್ರತಿಯೊಬ್ಬರು ಮತದಾನ ಮಾಡಬೇಕಿದೆ.

ಈ ನಿಟ್ಟಿನಲ್ಲಿ ಎಲ್ಲ ಉಮ್ರಾ ಸಂಸ್ಥೆಗಳು, ಏಜೆಂಟರು ಏಪ್ರಿಲ್ 26ಕ್ಕಿಂತ ಮುಂಚೆ ನಿಗದಿಪಡಿಸಿರುವ ಎಲ್ಲಾ ಉಮ್ರಾ ಯಾತ್ರೆಗಳನ್ನು ರದ್ದುಪಡಿಸಿ, ಏಪ್ರಿಲ್ 27ರ ನಂತರ ತೆರಳಬೇಕು. ಈಗಾಗಲೇ ವಿಮಾನ ಟಿಕೇಟ್ ಬುಕ್ ಮಾಡಿದ್ದರೆ, ಅದನ್ನು ಮುಂದೂಡಬೇಕು.
ಯಾತ್ರಿಗಳು ಯಾವುದೇ ಕಾರಣಕ್ಕೂ ಮತದಾನ ಮಾಡದೆ ಉಮ್ರಾ ತೆರಳಬಾರದು. ಈ ಬಗ್ಗೆ ಎಲ್ಲರೂ ಸಹಕರಿಸಬೇಕು. ಆಯಾ ಜಾಮಾಅತ್ ಕಮಿಟಿಗಳು ಪ್ರತೀ ಶುಕ್ರವಾರ ದಿವಸ ಜುಮಾ ನಂತರ ಇಮಾಮರಲ್ಲಿ ಹೇಳಿ ಜನರಿಗೆ ಸಂದೆಡಶ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಸೂಚಿಸಿದ್ದನ್ನು ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಕಿನಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com