janadhvani

Kannada Online News Paper

ಇದು ರಿಯಲ್ “ಕೇರಳ ಸ್ಟೋರಿ” ಧನ್ಯವಾದಗಳು ಮಲಯಾಳಿಗರೇ… – ರಹೀಂ ನಿಧಿ ಸಂಗ್ರಹ ಯಶಸ್ವಿ

ಹಣ ಸಂಗ್ರಹಣೆ ಸ್ಥಗಿತಗೊಂಡಿದ್ದು, ಇನ್ನು ಮುಂದೆ ಯಾರೂ ಹಣ ಕಳುಹಿಸಬಾರದು ಎಂದು ಸಮಿತಿಯ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಕೋಝಿಕ್ಕೋಡ್ | ಮಾನವೀಯತೆಯ ಮುಂದೆ ಕೋಟಿ ಸೋತು ಹೋಯಿತು.. ಇದು “ದ ರಿಯಲ್ ಕೇರಳ ಸ್ಟೋರಿ” ಧನ್ಯವಾದಗಳು ಮಲಯಾಳಿಗರೇ… ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಬ್ದು‌ರ್ ರಹೀಮ್ ರನ್ನು ರಕ್ಷಿಸಲು ಮಲಯಾಳಿಗಳ ಸಾಮೂಹಿಕ ಪ್ರಯತ್ನ ಕೊನೆಗೂ ತನ್ನ ಗುರಿಯನ್ನು ಸಾಧಿಸಿದೆ.

ಆನ್ಲೈನ್ ನಲ್ಲಿ ಪುಟ್ಟ ರಾಜ್ಯ ಕೇರಳ ಒಂದರಲ್ಲೇ 24 ಕೋಟಿ ಸಂಗ್ರಹವಾಗಿದೆ. ಕೇರಳದೊಂದಿಗೆ ಎಲ್ಲಾ ರಾಜ್ಯಗಳು ಕೈಜೋಡಿಸಿದ್ದು,ರಹೀಮ್ ಕಾನೂನು ನೆರವು ಸಮಿತಿಯು 34 ಕೋಟಿ ರೂ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಆಫ್‌ಲೈನ್‌ನಲ್ಲಿ ಸಂಗಹಿಸಿದ ದೇಣಿಗೆ ಸಹಿತ ಒಟ್ಟು 34,45,49,223 ಕೋಟಿ ರೂ. ಸಂಗ್ರಹವಾಗಿದೆ.

ಇದು ಕೇರಳ ಹಿಂದೆಂದೂ ಕಂಡಿರದ ಅತಿ ದೊಡ್ಡ ಕ್ರೌಡ್‌ಫಂಡಿಂಗ್‌ ಆಗಿ ಕೊನೆಗೊಂಡಿತು. ಹಣ ಸಂಗ್ರಹಣೆ ಸ್ಥಗಿತಗೊಂಡಿದ್ದು, ಇನ್ನು ಮುಂದೆ ಯಾರೂ ಹಣ ಕಳುಹಿಸಬಾರದು ಎಂದು ಸಮಿತಿಯ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

34 ಕೋಟಿ ಪಾವತಿಸಲು ಕೇವಲ ಮೂರು ದಿನ ಬಾಕಿ ಇರುವಾಗ ನಿಧಿ ಸಂಗ್ರಹ ಪೂರ್ಣಗೊಂಡಿದೆ. ನಿಧಿಸಂಗ್ರಹಣೆಯನ್ನು ಪಾರದರ್ಶಕಗೊಳಿಸಲು ಆರಂಭಿಸಿದ ಆ್ಯಪ್ ಮೂಲಕ 30 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ. ಆಫ್‌ಲೈನ್‌ನಲ್ಲಿ ಸ್ವೀಕರಿಸಿದ ಮೊತ್ತವನ್ನು ಸೇರಿಸುವ ಮೂಲಕ ನಿಧಿ ಸಂಗ್ರಹಿಸುವ ಗುರಿಯನ್ನು ಸಾಧಿಸಲಾಗಿದೆ.

ರಹೀಮ್ ಬಿಡುಗಡೆಗಾಗಿ ಸೌದಿ ಕುಟುಂಬ 34 ಕೋಟಿ ದಯಾ ಧನಕ್ಕೆ ಬೇಡಿಕೆ ಇಟ್ಟಿದೆ. ನಿನ್ನೆ ರಾತ್ರಿಯೇ ನಿಧಿಗೆ ಸುಮಾರು 22 ಕೋಟಿ ರೂಪಾಯಿ ಹರಿದು ಬಂದಿದೆ. ಉಳಿದ ಮೊತ್ತವನ್ನು ಇಂದೇ ಸಂಗ್ರಹಿಸಲಾಯಿತು. ದಿಯಾ ಹಣವನ್ನು ಈ ತಿಂಗಳ 16 ರಂದು ಸೌದಿ ಕುಟುಂಬಕ್ಕೆ ಹಸ್ತಾಂತರಿಸಬೇಕು. ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ರಹೀಮ್ ಬಿಡುಗಡೆಗಾಗಿ ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ರಹೀಮ್ ಕಾನೂನು ನೆರವು ಸಮಿತಿಯ ಕಾರ್ಯಕರ್ತರು ಹಣ ವಸೂಲಿ ಮಾಡಲು ಹರಸಾಹಸ ಪಡುತ್ತಿದ್ದರು.

27ರ ರಂಜಾನ್‌ ಸಂಜೆವರೆಗೆ ಒಂದು ತಿಂಗಳಲ್ಲಿ ಸಮಿತಿ ಟ್ರಸ್ಟ್ ಖಾತೆಗೆ 4.5 ಕೋಟಿ ಬಂದಿದೆ. ಆದರೆ 28ರ ರಂಜಾನ್‌ ಸಂಜೆ ಖಾತೆಯ ಚಿತ್ರಣವೇ ಬದಲಾಯಿತು. ನಿಮಿಷಗಳಲ್ಲಿ ಕೋಟಿ ಸುರಿದಿದೆ. ರಂಜಾನ್ 28 ರಂದು 8 ಕೋಟಿ, 29 ರಂದು 13 ಕೋಟಿ ಮತ್ತು ಈದ್ ರಾತ್ರಿ 17 ಕೋಟಿ ಲಭಿಸಿತ್ತು.

ಘಟನೆಯೇನು?

ಸೌದಿ ಪ್ರಾಯೋಜಕರ ಪುತ್ರ ಅನಸ್ ಅಲ್ ಶಹ್ರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟು ಕಳೆದ 17 ವರ್ಷಗಳಿಂದ ರಿಯಾದ್ ಜೈಲಿನಲ್ಲಿರುವ ಕೋಝಿಕ್ಕೋಡ್ ಫರೂಕ್ ನಿವಾಸಿ ಅಬ್ದುರ್ ರಹೀಮ್ ಅವರ ಸಂಬಂಧಿಕರಿಗೆ ಮೃತ ಬಾಲಕನ ಸಂಬಂಧಿಕರ ನಿರ್ಧಾರವನ್ನು ಭಾರತೀಯ ರಾಯಭಾರ ತಿಳಿಸಿದ್ದು, 1.5 ಕೋಟಿ ರಿಯಾಲ್ (33 ಕೋಟಿ ರೂ.ಗಿಂತ ಹೆಚ್ಚು) ಪಾವತಿಸಿದರೆ ಕ್ಷಮಾದಾನ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ ಸೌದಿ ವಿದೇಶಾಂಗ ಸಚಿವಾಲಯ ಹಾಗೂ ಸೌದಿ ಕುಟುಂಬದ ವಕೀಲರಿಂದ ರಾಯಭಾರಿ ಕಚೇರಿಗೆ ಅಧಿಕೃತ ಮಾಹಿತಿ ಲಭಿಸಿದೆ. ಇದರೊಂದಿಗೆ ರಹೀಮ್ ಕಾನೂನು ನೆರವು ಸಮಿತಿ ಮತ್ತು ರಿಯಾದ್‌ನಲ್ಲಿರುವ ಅನಿವಾಸಿ ಸಮುದಾಯವು ರಹೀಮ್ ಬಿಡುಗಡೆಗೆ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ಧರಿಸಿತು.

ಮರಣದಂಡನೆ ಜಾರಿಯಾಗಬೇಕು ಎಂದು ಪಟ್ಟು ಹಿಡಿದಿದ್ದ ಸೌದಿ ಕುಟುಂಬ ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ರಹೀಮ್ ಕಾನೂನು ನೆರವು ಸಮಿತಿಯ ನಿರಂತರ ಒತ್ತಡದ ಮೇರೆಗೆ ಕ್ಷಮಾದಾನ ನೀಡಲು ಮುಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಖಾತೆ ತೆರೆಯುವ ಪ್ರಕ್ರಿಯೆಯು ದೇಶದ ಸರ್ವಪಕ್ಷ ಸಮಿತಿಯ ಮೇಲ್ವಿಚಾರಣೆಯಲ್ಲಿ ರಿಯಾದ್‌ನಲ್ಲಿ ಬ್ಯಾಂಕ್ ಖಾತೆ ತೆರೆಯಲಾಯಿತು.

ನವೆಂಬರ್ 28, 2006 ರಂದು, 26 ನೇ ವಯಸ್ಸಿನಲ್ಲಿ, ಅಬ್ದುರ್ ರಹೀಮ್ ಹೌಸ್ ಡ್ರೈವ‌ರ್ ವೀಸಾದಲ್ಲಿ ರಿಯಾದ್‌ಗೆ ಬಂದರು. ಪ್ರಾಯೋಜಕರಾದ ಫೈಝ್ ಅಬ್ದುಲ್ಲಾ ಅಬ್ದುರಹ್ಮಾನ್ ಅಲ್ಶಹರಿಯವರ ಮಗ ಅನಸ್ ಅವರ ಆರೈಕೆಯಾಗಿತ್ತು ಮುಖ್ಯ ಕೆಲಸ. ತಲೆಯ ಕೆಳಭಾಗದಿಂದ ಚಲನರಹಿತನಾಗಿದ್ದ ಅನಸ್, ಕುತ್ತಿಗೆಗೆ ಜೋಡಿಸಲಾದ ವಿಶೇಷ ಉಪಕರಣದ ಮೂಲಕ ಎಲ್ಲಾ ಆಹಾರ ಮತ್ತು ನೀರನ್ನು ನೀಡಲಾಗುತ್ತಿತ್ತು. ಸದಾ ಕೆರಳುವ ಅನಸ್ ನನ್ನು ನೋಡಿಕೊಳ್ಳುವ ಕಷ್ಟ, ಆತಂಕದ ಬಗ್ಗೆ ಕೆಲಸ ಆರಂಭಿಸುವ ವೇಳೆ ರಹೀಮ್ ಮನೆಗೆ ಕರೆ ಮಾಡಿ ತಿಳಿಸಿದ್ದರು. ಆದರೂ ರಹೀಮ್, ಅನಸ್ ನನ್ನು ತನ್ನ ಕೈಲಾದಷ್ಟು ನೋಡಿಕೊಂಡರು. ಕಾಲಕಾಲಕ್ಕೆ, ಅವನ ಗಾಲಿಕುರ್ಚಿಯನ್ನು ಹೊರಗೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತಿದ್ದರು.

ಸಂಬಂಧಿತ ಘಟನೆ ಡಿಸೆಂಬರ್ 24, 2006 ರಂದು ನಡೆಯಿತು. ರಹೀಮ್ ಮತ್ತು ಅನಸ್ ಅವರು ರಿಯಾದ್ ಶಿಫಾದಲ್ಲಿರುವ ತಮ್ಮ ಮನೆಯಿಂದ ಅಝೀಝಿಯಾದ ಪಾಂಡಾ ಹೈಪರ್‌ಮಾರ್ಕೆಟ್‌ಗೆ ಜಿಎಂಸಿ ವ್ಯಾನ್‌ನಲ್ಲಿ ಚಾಲನೆ ಮಾಡುತ್ತಿದ್ದಾಗ ಸುವೈದಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಅನಸ್‌ ಅಪ್ರಚೋದಿತವಾಗಿ ಹೊಡೆದಾಡಿದ. ಟ್ರಾಫಿಕ್ ಸಿಗ್ನಲ್ ಕಟ್ ಮಾಡಿ ಹೊರಡಲು ಅನಸ್ ಗಲಾಟೆ ಮಾಡಿದ. ನಿಯಮ ಉಲ್ಲಂಘನೆ ಸಾಧ್ಯವಿಲ್ಲವೆಂದ ಅಬ್ದುರ್ ರಹೀಮ್ ವಾಹನ ಸಮೇತ ಮುಂದಿನ ಸಿಗ್ನಲ್ ತಲುಪಿದಾಗ ಅನಸ್ ಮತ್ತೆ ಗಲಾಟೆ ಮಾಡತೊಡಗಿದ. ಹಿಂದಿನ ಸೀಟಿನಲ್ಲಿದ್ದ ಮಗುವನ್ನು ಅರ್ಥಮಾಡಿಕೊಳ್ಳಲು ಹಿಂದೆ ತಿರುಗಿದಾಗ ಅನಸ್ ರಹೀಮ್ ಅವರ ಮುಖಕೆ ಹಲವಾರು ಬಾರಿ ಉಗುಳಿದ. ಇದನ್ನು ತಡೆಯಲು ಮುಂದಾದಾಗ ಅಬ್ದುರ್ ರಹೀಮ್ ನ ಕೈ ಅನಸ್ ನ ಕುತ್ತಿಗೆಗೆ ಅಳವಡಿಸಿದ್ದ ಉಪಕರಣಕ್ಕೆ ಆಕಸ್ಮಿಕವಾಗಿ ತಗುಲಿದೆ. ಆಹಾರ ಮತ್ತು ನೀರು ಒದಗಿಸಲು ಜೋಡಿಸಲಾದ ಸಾಧನದ ಮೇಲೆ ಕೈ ಮುಟ್ಟಿದ ಬಳಿಕ ಮಗು ಪ್ರಜ್ಞೆ ತಪ್ಪಿತು. ನಂತರ ರಹೀಮ್ ತನ್ನ ಪ್ರಯಾಣವನ್ನು ಮುಂದುವರೆಸಿದನು ಮತ್ತು ಅನಸ್‌ನಿಂದ ಯಾವುದೇ ಶಬ್ದ ಕೇಳದಿದ್ದಾಗ, ಅಪಾಯ ತಲೆದೋರಿತು. ಮಗುವನ್ನು ಪರಿಶೀಲಿಸಿದಾಗ ಸ್ವಲ್ಪ ಚಲನವಲನವಿದೆ ಎಂದು ಅರಿತುಕೊಂಡರು.

ಕೂಡಲೇ ತಾಯಿಯ ಸೋದರಳಿಯ ಕೋಝಿಕ್ಕೋಡ್ ನಲ್ಲಲಂ ಮೂಲದ ಮುಹಮ್ಮದ್ ನಝೀರ್ ಗೆ ಕರೆ ಮಾಡಿದ್ದಾರೆ. ಏನು ಮಾಡಬೇಕೆಂದು ತಿಳಿಯದೆ ಇಬ್ಬರೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ರಹೀಮ್ ಮತ್ತು ನಝೀರ್ ಅವರನ್ನು ವಶಕ್ಕೆ ಪಡೆದರು. ಹತ್ತು ವರ್ಷಗಳ ನಂತರ ನಝೀರ್‌ಗೆ ಜಾಮೀನು ಲಭಿಸಿತು. ರಹೀಮ್ ಅಲ್ ಹಾಯಿಲ್ ಜೈಲಿನಲ್ಲಿ ಮರಣದಂಡನೆಗಾಗಿ ಕಾಯುತ್ತಿದ್ದರು

ಸೌದಿ ಗಣ್ಯರಲ್ಲದೆ, ನೋರ್ಕಾ ಉಪಾಧ್ಯಕ್ಷ, ಪ್ರಮುಖ ಉದ್ಯಮಿ, ಲುಲು ಗ್ರೂಪ್ ಎಂಡಿ ಎಂ.ಎ. ಯೂಸುಫಲಿ ಕೂಡ ಪ್ರಕರಣದ ಇತ್ಯರ್ಥಕ್ಕೆ ಭಾಗಿಯಾಗಿದ್ದರು. ಇದೀಗ ಮರಣದಂಡನೆಗೆ ಪಟ್ಟು ಹಿಡಿದಿದ್ದ ಕುಟುಂಬ ದಯಾಧನ ರೂಪದಲ್ಲಿ ಕ್ಷಮಾದಾನ ನೀಡಲು ಮುಂದಾಗಿರುವುದು ಆಶಾಭಾವನೆ ಮೂಡಿಸಿದೆ.

error: Content is protected !! Not allowed copy content from janadhvani.com