✍️ಮುನೀರ್ ಕಾಟಿಪಳ್ಳ
ನರೇಂದ್ರ ಮೋದಿಯವರ ಮಂಗಳೂರು “ರೋಡ್ ಶೋ” ಲೇಡಿಹಿಲ್ ವೃತ್ತದಿಂದ ನಾರಾಯಣ ಗುರುಗಳ ಮೂರ್ತಿಗೆ ಹಾರ ಹಾಕುವ ಮೂಲಕ ಆರಂಭ ಆಗುತ್ತದಂತೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಕೇರಳ ಸರಕಾರದ ನಾರಾಯಣ ಗುರುಗಳ ಟ್ಯಾಬ್ಲೊವನ್ನು ನಿರ್ದಯವಾಗಿ ತಿರಸ್ಕರಿಸಿದ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ನಡೆಯನ್ನು ನಾರಾಯಣ ಗುರುಗಳನ್ನು ಗೌರವಿಸುವ, ಅನುಸರಿಸುವ ಯಾರೂ ಮರೆಯಲು ಸಾಧ್ಯವಿಲ್ಲ. ಅಂದು ಅಷ್ಟು ಪ್ರತಿಭಟನೆ ನಡೆದಿದ್ದರೂ ಮೋದಿ ಹಾಗೂ ಅವರ ಪರಿವಾರವಾದ ಬಿಜೆಪಿಯ ಕಿವಿಗೆ ಅದು ತಲುಪಿರಲಿಲ್ಲ. ಈಗ ಮೋದಿ ಸಾಹೇಬರಿಗೆ ದಿಢೀರ್ ಆಗಿ ಗುರುಗಳ ಮೇಲೆ ಪ್ರೀತಿ ಉಕ್ಕಿದ್ದರೆ ಅದಕ್ಕೆ ಕಾರಣ ಏನೂ ನಿಗೂಢ ಅಲ್ಲ.
ಕರಾವಳಿಯಲ್ಲಿ ನಾರಾಯಣ ಗುರುಗಳ ಬಿಲ್ಲವ ಸಮುದಾಯ ಈ ಚುನಾವಣೆಯಲ್ಲಿ ಬಿಜೆಪಿ ವಿರುಧ್ದ ಮತ ಚಲಾಯಿಸುವ ದೃಢ ತೀರ್ಮಾನಕ್ಕೆ ಬಂದಂತಿದೆ. ಆ ತೀರ್ಮಾನ ದಿನೇ ದಿನೆ ಬಲವಾಗುತ್ತಾ ಸಾಗುತ್ತಿದೆ. ಇದರಿಂದ ವಿಚಲಿತ ಗೊಂಡಿರುವ ಬಿಜೆಪಿಯು ನಾರಾಯಣ ಗುರುಗಳ ಕೊರಳಿಗೆ ಮೋದಿ ಕೈಯಲ್ಲಿ ಹಾರ ಹಾಕಿಸಿ ಬಿಲ್ಲವರನ್ನು ಸಮಾಧಾನ (ಮಂಗ ಮಾಡುವ) ಗೊಳಿಸುವ ಗಿಮಿಕ್ ಗೆ ಮುಂದಾಗಿದೆ. ಇದೆಲ್ಲಾ ಗುರುಗಳ ಅನುಯಾಯಿಗಳಿಗೆ ಅರ್ಥ ಆಗದ ಸಂಗತಿ ಏನಲ್ಲ.
ಅಷ್ಟಕ್ಕೂ ನಾರಾಯಣ ಗುರುಗಳದ್ದು ಜಾತ್ಯಾತೀತ, ಮಾನವೀಯ ಚಿಂತನೆಗಳು. ಅವರು ಯಾವತ್ತು ಪರಧರ್ಮಗಳನ್ನು ದ್ವೇಷಿಸಲಿಲ್ಲ. ಧರ್ಮದಲ್ಲಿ ಮಾನವೀಯ ಸುಧಾರಣೆಗಳಿಗೆ ಒತ್ತುಕೊಟ್ಟರು. ದ್ವೇಷ, ವ್ಯಂಗ್ಯ, ಬಡವರ ಬಗ್ಗೆ ತಾತ್ಸಾರ, ಧಾರ್ಮಿಕ ಅಸಹಿಷ್ಟುತೆಯೇ ಬಂಡವಾಳ ಆಗಿರುವವರು ಮಾನವೀಯತೆಯ ಸಾಕಾರಮೂರ್ತಿಯಾದ ಗುರುಗಳಿಗೆ ಚುನಾವಣಾ ರ‌್ಯಾಲಿಯ ಸಂದರ್ಭ ಹಾರ ಹಾಕುವುದು ಅರ್ಥ ಆಗದ ಸಂಗತಿ ಏನಲ್ಲ.
ಲೇಡಿಹಿಲ್ ದಾಟಿ ರೋಡ್ ಶೋ ಮುಂದುವರಿಯುವ ಲಾಲ್ ಭಾಗ್ ವೃತ್ತದಲ್ಲಿ ಮಹಾತ್ಮಾ ಗಾಂಧಿಯವರ ಮೂರ್ತಿಯೂ ಇದೆ. ವಿದೇಶಕ್ಕೆ ಹೋದಾಗ ಗಾಂಧಿ ಪುತ್ಥಳಿಗೆ ಹಾರ ಹಾಕುವ ಮೋದಿ ಸಾಹೇಬರು ಮಂಗಳೂರಿನಲ್ಲಿ ನಾರಾಯಣ ಗುರುಗಳ ಮೂರ್ತಿಗೆ ಹಾರ ಹಾಕಿ ಮುಂದಕ್ಕೆ ಸಾಗುವಾಗ ಕೈಯಳತೆಯಲ್ಲಿ ಸಿಗುವ ಮಹಾತ್ಮರ ಮೂರ್ತಿಗೂ ಹಾರ ಹಾಕುತ್ತಾರಾ, ಎಂದು ನೋಡಬೇಕು.
“ಚುನಾವಣಾ ನಿಮಿತ್ತಂ ಬಹುಕೃತ ವೇಷಂ”