janadhvani

Kannada Online News Paper

ರಿಯಾಝ್ ಮೌಲವಿ ಹತ್ಯೆ ಪ್ರಕರಣ: ಆರೋಪಿಗಳು ಪಾಸ್‌ಪೋರ್ಟ್‌ ನ್ನು ಒಪ್ಪಿಸಬೇಕು- ಹೈಕೋರ್ಟ್ ಆದೇಶ

ಬೇಸಿಗೆ ರಜೆಯ ಬಳಿಕ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಕೊಚ್ಚಿ | ರಿಯಾಜ್ ಮೌಲ್ವಿ ಹತ್ಯೆ ಪ್ರಕರಣದ ಆರೋಪಿಗಳ ಖುಲಾಸೆ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲು ವಿಫಲವಾಗಿದೆ ಮತ್ತು ಸಾಕ್ಷ್ಯಾಧಾರಗಳ ಬಲದಿಂದಾಗಿ ಏಳು ವರ್ಷಗಳವರೆಗೆ ಆರೋಪಿಗಳಿಗೆ ಜಾಮೀನು ನೀಡಲಾಗಿಲ್ಲ ಎಂದು ಸರ್ಕಾರವು ಹೈಕೋರ್ಟ್‌ನಲ್ಲಿ ಹೇಳಿದೆ. ಮೂವರು ಆರೋಪಿಗಳಿಗೆ ಹೈಕೋರ್ಟ್‌ ನೋಟಿಸ್ ಕಳುಹಿಸಿದೆ. ಆರೋಪಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಮತ್ತು ವಿಚಾರಣಾ ನ್ಯಾಯಾಲಯದ ಪರಿಧಿಯಿಂದ ಹೊರಗೆ ಹೋಗಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಬೇಸಿಗೆ ರಜೆಯ ಬಳಿಕ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಮದ್ರಸಾ ಶಿಕ್ಷಕ ರಿಯಾಝ್ ಮೌಲವಿಯನ್ನು ಮಸೀದಿಯಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಪ್ರಕರಣದಲ್ಲಿ ತನಿಖಾ ತಂಡ ಮತ್ತು ಪ್ರಾಸಿಕ್ಯೂಷನ್ ವೈಫಲ್ಯವನ್ನು ನ್ಯಾಯಾಲಯ ಟೀಕಿಸಿತ್ತು. ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ನಂತರ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೂರು ಆರೋಪಿಗಳಾದ ಅಜೇಶ್, ನಿತಿನ್ ಕುಮಾ‌ರ್ ಮತ್ತು ಅಖಿಲೇಶ್ ಅವರನ್ನು ಕಾಸರಗೋಡು ಪ್ರಧಾನ ಸೆಷನ್ಸ್‌ ನ್ಯಾಯಾಲಯ ಮಾರ್ಚ್ 30 ರಂದು ಖುಲಾಸೆಗೊಳಿಸಿತ್ತು.

error: Content is protected !! Not allowed copy content from janadhvani.com