ರಿಯಾದ್: ಸೌದಿ ಅರೇಬಿಯಾ ಪ್ರಥಮ ಬಾರಿಗೆ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ ಎಂಬ ವರದಿ ಸುಳ್ಳು. ಇಂತಹ ವರದಿಗಳು ತಪ್ಪುದಾರಿಗೆಳೆಯುವಂತಿದ್ದು ಸೌದಿ ಅರೇಬಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ವಿಶ್ವ ಸುಂದರಿ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೌದಿ ಅರೇಬಿಯಾ ಪ್ರಥಮ ಬಾರಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿತ್ತು. ಸೌದಿ ಮಾಡೆಲ್ ರೂಮಿ ಅಲ್ಕಹ್ತಾನಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಅನುಸರಿಸಿ ಈ ಸುದ್ದಿ ಬಂದಿದೆ.
ಈ ವರ್ಷದ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಭಾಗವಹಿಸುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕುತ್ತಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ಸೌದಿ ಅರೇಬಿಯಾದಿಂದ ಸ್ಪರ್ಧಿ ಭಾಗವಹಿಸಲು ಯಾವುದೇ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ.
ಇದಕ್ಕೆ ವಿರುದ್ಧವಾದ ವರದಿಗಳು ತಪ್ಪುದಾರಿಗೆಳೆಯುವಂತಿವೆ. ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ದೇಶಗಳನ್ನು ಪ್ರತಿನಿಧಿಸುವ ಆಯ್ಕೆ ಪ್ರಕ್ರಿಯೆಯು ಕಟ್ಟುನಿಟ್ಟಾಗಿದೆ ಮತ್ತು ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಸಾರವಾಗಿದೆ. ನಿಯಮಗಳು ಮತ್ತು ಮಾನದಂಡಗಳಿಗೆ ಒಳಪಟ್ಟು ಆಯ್ಕೆಯನ್ನು ಪಾರದರ್ಶಕವಾಗಿ ಮಾಡಲಾಗುತ್ತದೆ.
ಮುಂಬರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವ 100 ಕ್ಕೂ ಹೆಚ್ಚು ದೇಶಗಳಲ್ಲಿ ಸೌದಿ ಅರೇಬಿಯಾ ಇಲ್ಲ. ವಿಶ್ವ ಸುಂದರಿ ಸಂಘಟಕರು ತಮ್ಮ ಅನುಮೋದನೆ ಸಮಿತಿಯು ಸೌಂದರ್ಯ ಸ್ಪರ್ಧೆಗಾಗಿ ಆಯ್ಕೆ ಪ್ರಯೋಗವನ್ನು ಯಾವ ದೇಶಗಳು ನಡೆಸಬೇಕೆಂದು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.