janadhvani

Kannada Online News Paper

ಉಜಿರೆ ಎಸ್ .ಡಿ .ಎಮ್.ಕಾಲೇಜು ರಸಾಯನ ಶಾಸ್ತ್ರ ಸಂಶೋಧನೆಗೆ ವಿಶ್ವ ಮನ್ನಣೆ

ಪ್ರಾಧ್ಯಾಪಕರಾದ ಡಾ. ನಫೀಸತ್ ಚಾರ್ಮಾಡಿ ಮತ್ತು ಡಾ.ಶಶಿಪ್ರಭಾ ಅವರಿಗೆ ಪ್ರತಿಷ್ಠಿತ ಅಮೇರಿಕನ್ ಪೇಟೆಂಟ್

ಉಜಿರೆ ಮಾರ್ಚ್ 20 : ಉಜಿರೆ ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನಫೀಸತ್ ಪಿ. ಚಾರ್ಮಾಡಿ, ಸಹಾಯಕ ಪ್ರಾಧ್ಯಾಪಕಿ ಡಾ. ಶಶಿಪ್ರಭಾ ಅವರ ಸಂಶೋಧನೆಗೆ ಪ್ರತಿಷ್ಠಿತ ಅಮೇರಿಕನ್ ಪೇಟೆಂಟ್ ಲಭಿಸಿದೆ. ಪ್ರಪ್ರಥಮ ಬಾರಿಗೆ ಎಸ್. ಡಿ ಎಮ್. ಕಾಲೇಜು ಅಮೇರಿಕನ್ ಪೇಟೆಂಟ್ ಮನ್ನಣೆ ಪಡೆದ ಹೆಗ್ಗಳಿಕೆಗೆ ಭಾಜನವಾಗಿದೆ.

ಈ ಹಿಂದೆ ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ. ನಾರಾಯಣ ಹೆಬ್ಬಾರ್ ಅವರ ಸಂಶೋಧನೆಗೆ ಆಸ್ಟ್ರೇಲಿಯಾದ ಪೇಟೆಂಟ್ ಲಭಿಸಿತ್ತು. ಇದೀಗ ಈ ವಿಭಾಗದ ಇನ್ನಿಬ್ಬರು ಪ್ರಾಧ್ಯಾಪಕರು ನಡೆಸಿದ ಸಂಶೋಧನೆಯು ಅಮೇರಿಕನ್ ಪೇಟೆಂಟ್ ಪಡೆಯುವುದರ ಮೂಲಕ ಮತ್ತೊಂದು ವಿಶ್ವ ಮನ್ನಣೆ ಪಡೆದಂತಾಗಿದೆ. ಉಳಿದೆಲ್ಲ ದೇಶಗಳ ಪೇಟೆಂಟ್ ಗಿಂತ ಅಮೇರಿಕನ್ ಪೇಟೆಂಟ್ ಗೆ ವಿಶ್ವ ಮಾನ್ಯತೆ ಇದೆ. ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರದ ಪ್ರಯೋಗಾಲಯ ದಲ್ಲಿಯೇ ಈ ಇಬ್ಬರು ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.

“ಬೆಂಝಿಲಿಡೀನ್ ಡಿರೈವಿಟೀಸ್ ಆಫ್ ಫಿನೋಬಾಮ್ ಆಸ್ ಆಂಟಿ-ಇನ್‌ಪ್ಲ‌ಮೇಟರಿ ಏಜೆಂಟ್ ” ಎಂಬ ವಿಷಯದ ಮೇಲೆ ಈ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು. ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಜನಗಳನ್ನು ವಿಸ್ತರಿಸುವುದಕ್ಕೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ಮಹತ್ವವಿದೆ. ವೈದ್ಯಕೀಯ ರಂಗದ ಚಿಕಿತ್ಸೆಯ ವಿಧಾನಗಳನ್ನು ಮರು ರೂಪಿಸುವುದಕ್ಕೆ ಪ್ರಸಕ್ತ ಸಂಶೋಧನೆಯ ಫಲಿತಗಳು ಪ್ರಯೋಜನ ಕಾರಿಯಾಗಲಿದೆ. ಇದನ್ನು ಪರಿಗಣಿಸಿ ಅಮೆರಿಕದ ಪ್ರತಿಷ್ಟಿತ ಪೇಟೆಂಟ್‌ನ ಮನ್ನಣೆ ನೀಡಲಾಗಿದೆ.

ಸೌದಿ ಅರೇಬಿಯಾದ ಕಿಂಗ್ ಫೈಸಲ್ ವಿಶ್ವ ವಿದ್ಯಾಲಯದ ಸಹ ಭಾಗಿತ್ವ ದೊಂದಿಗೆ ಕೈಗೊಳ್ಳಲಾಗಿದ್ದ ಈ ಸಂಶೋಧನೆಗೆ ಲಭಿಸಿದ ಅಮೇರಿಕನ್ ಪೇಟೆಂಟ್‌ನ ರಕ್ಷಣೆಯು 20 ವರ್ಷಗಳ ಸುದೀರ್ಘಾವಧಿಯಾಗಿದ್ದಾಗಿದೆ. ಈ ನಿರ್ದಿಷ್ಟ ಸಂಶೋಧನಾ ಫಲಿತಗಳ ಆಧಾರದ ಅವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕು ಸ್ವಾಮ್ಯವು ಕಾಲೇಜಿನ ಈ ಇಬ್ಬರು ಪ್ರಾಧ್ಯಾಪಕರದ್ದಾಗಿದೆ. ಈ ಫಲಿತಗಳನ್ನು ಅನ್ವಯಿಸಿ ಉತ್ಪನ್ನ ತಯಾರಿಕೆ, ಬಳಕೆ ಮತ್ತು ಮಾರಾಟದಿಂದ ಇತರರನ್ನು ಅಮೇರಿಕನ್ ಪೇಟೆಂಟ್ ನಿರ್ಬಂಧಿಸುತ್ತದೆ.

ಡಾ.ನಫೀಸತ್ ಮತ್ತು ಡಾ.ಶಶಿಪ್ರಭಾ ಅವರು ವಿಭಾಗದ ಪ್ರಯೋಗಾಲಯದಲ್ಲಿಯೇ ಸಂಶೋಧನೆ ಕೈಗೊಂಡು ಅಮೇರಿಕನ್ ಪೇಟೆಂಟ್ ವಿಶ್ವ ಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯ.
ಪ್ರತಿಷ್ಠಿತ ಅಮೇರಿಕನ್ ಪೇಟೆಂಟ್‌ನ ಮನ್ನಣೆಯಿಂದ ಭವಿಷ್ಯದ ವಿನೂತನ ಸಂಶೋಧನಾ ಹೆಜ್ಜೆ ಗಳಿಗೆ ಹೊಸದೊಂದು ಮಾದರಿ ಸೃಷ್ಟಿಯಾದಂತಾಗಿದೆ ಎಂದು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ , ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ. ಎ. ಕುಮಾರ ಹೆಗ್ಡೆ ಅವರು ಪ್ರಾಧ್ಯಾಪಕರ ಸಂಶೋಧನಾ ಸಾಧನೆ ಪ್ರಶಂಸನೀಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

error: Content is protected !! Not allowed copy content from janadhvani.com