janadhvani

Kannada Online News Paper

ಸೌದಿ: ತ್ವಾಯಿಫ್ ಬಳಿ ಭೀಕರ ಅಪಘಾತ – ಹಳೆಯಂಗಡಿಯ ನಾಲ್ವರು ಮೃತ್ಯು

ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ದಂಪತಿಗಳಾದ ಪಕ್ಷಿಕೆರೆ ಮುಹಮ್ಮದ್ ರಮೀಝ್ ಮತ್ತು ಹಿಬಾ ಹಾಗೂ 40 ದಿನದ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ತ್ವಾಯಿಫ್ : ಸೌದಿ ಅರೇಬಿಯಾದ ತ್ವಾಯಿಫ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಮಂಗಳೂರಿನ ಹೊರವಲಯದ ಹಳೆಯಂಗಡಿ ಪಕ್ಷಿಕೆರೆ ಮೂಲದ ನಾಲ್ವರು ಮೃತಪಟ್ಟಿದ್ದಾರೆ. ಅಫಘಾತವು ತಾಯಿಫ್ ನಿಂದ ಸುಮಾರು 160 ಕಿಲೋ ಮೀಟರ್ ದೂರಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಶಮೀಮ್ ಮತ್ತು ಝರೀನಾ ದಂಪತಿಯ ಪುತ್ರಿ ಹಿಬಾ ( 29) ಆಕೆಯ ಪತಿ ಮುಹಮ್ಮದ್ ರಮೀಝ್ (34) ಮಕ್ಕಳಾದ ಆರೂಶ್ (3) ಮತ್ತು ರಾಹ ( 3 ತಿಂಗಳು) ಎಂದು ಗುರುತಿಸಲಾಗಿದ್ದು, ಅದೇ ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ಬಮ್ ಎಂಬವರ ಮಗಳು ಫಾತಿಮಾ (19) ಗಂಭೀಯ ಗಾಯಗೊಂಡಿದ್ದು, ಆಕೆಯನ್ನು ರಿಯಾದ್ ನ ಆಸ್ಪತ್ರೆಯಲ್ಲಿ ಚಿಕಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಅಪಘಾತಕ್ಕೀಡಾಗಿದ್ದ ಕಾರಿನಲ್ಲಿದ್ದ ಹಿಬಾ ಅವರ ಇನ್ನೋರ್ವ ಸಹೋದರಿ ಲುಬ್ಬಾ ಅವರ ಮಗ ಈಸ (4) ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ಕುಟುಂಬಸ್ಥರು ಸದಸ್ಯರು ಮಾಹಿತಿ ನೀಡಿದ್ದಾರೆ

ಮೃತ ಹಿಬಾ ಅವರ ತಂದೆ ಶಮೀಮ್ ತಾಯಿ ಝರೀನ ಮತ್ತು ಮೊಮ್ಮಕ್ಕಳು ಒಂದು ಕಾರಿನಲ್ಲಿ ಮತ್ತು ಹಿಬಾ ತನ್ನ ಕುಟುಂಬದೊಂದಿಗೆ ಇನ್ನೊಂದು ಕಾರಿನಲ್ಲಿ ಮಂಗಳವಾರ ಫಜರ್ ನಮಾಝ್ ಮುಗಿಸಿಕೊಂಡು ಉಮ್ರಾ ಯಾತ್ರೆ ಆರಂಭಿಸಿದ್ದರು. ಮಂಗಳವಾರ ರಾತ್ರಿ ರಿಯಾದ್ ತಲುಪಿದ್ದ ಅವರು ಅಲ್ಲೇ ತನ್ನ ಕುಟುಂಸ್ಥರ ಮನೆಯಲ್ಲಿ ಉಳಿದುಕೊಂಡು ಬುಧವಾರ ಬೆಳಗ್ಗೆ ರಿಯಾದ್ ನಿಂದ ಮತ್ತೆ ಉಮ್ರಾ ಯಾತ್ರೆ ಆರಂಭಿಸಿದ್ದರು.

ರಮೀಝ್ ತನ್ನ ಪತ್ನಿ ಹಿಬಾ, ಮಕ್ಕಳಾದ ಆರೂಶ್, ರಾಹ ಮತ್ತು ಹಿಬಾ ಅವರ ಸಹೋದರಿಯರ ಮಕ್ಕಳಾದ ಫಾತಿಮಾ ಮತ್ತು ಈಸ ಜೊತೆ ಒಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೊಂದು ಕಾರಿನಲ್ಲಿ ಹಿಬಾ ಅವರ ತಂದೆ ಶಮೀಮ್, ತಾಯಿ ಝರೀನಾ ಮೊದಲಾದವರು ಪ್ರಯಾಣಿಸುತ್ತಿದ್ದರು. ರಮೀಝ್ ಅವರು ಚಲಾಯಿಸುತ್ತಿದ್ದ ಕಾರು ರಿಯಾದ್ ನಿಂದ ತಾಯೀಫ್ ಗೆ ಹೋಗುವ ಮಾರ್ಗ ಮಧ್ಯದ ಸುಮಾರು 250 ಕಿ.ಮೀ. ದೂರದದಲ್ಲಿರುವ ಝುಲ್ಪಾ ಎಂಬಲ್ಲಿ ಕಾರು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಿಂದ ಹಲವು ಮೀಟರ್ ಗಳಷ್ಟು ದೂರಕ್ಕೆ ಹಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಈ ಕುಟುಂಬದ ಅವಘಡ ಮರಣಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತಾರಾಷ್ಟ್ರೀಯ ಸಮಿತಿಯು ತೀವ್ರವಾಗಿ ಸಂತಾಪ ವ್ಯಕ್ತಪಡಿಸಿದೆ.ಮೃತರಿಗೆ ಅಲ್ಲಾಹು ಮಗ್ಫಿರತ್ ಮತ್ತು ಮರ್ಹಮತ್ ಕರುಣಿಸಲಿ, ಮೃತರ ಅಗಲಿಕೆಯನ್ನು ಸಹಿಸುವ ಸಹನಾ ಶಕ್ತಿಯನ್ನು ಅವರ ಕುಟುಂಬಕ್ಕೆ ಅಲ್ಲಾಹು ದಯಪಾಲಿಸಲಿ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಿ.ಪಿ. ಬೈತಾರ್ ಸಖಾಫಿಯವರು ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com