ರಾಷ್ಟ್ರದಲ್ಲಿ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಭಾವನೆಗಳ ಮೂಲಕ ಅಧಿಕಾರವನ್ನು ಪಡೆಯುವ ತಂತ್ರದ ಮುಂದುವರಿದ ಕ್ರಮವಾಗಿದೆ ಸಿಎಎ ಜಾರಿಗೊಳಿಸುವ ಆದೇಶ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿಪ್ರಾಯ ಪಟ್ಟಿದೆ.
ಸಿಎಎ ಜಾರಿಯ ಮೂಲಕ ಸರ್ಕಾರ ಈಗ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಅವಮಾನದ ಸಂಗತಿಗಳಿಂದ ಪ್ರಜೆಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ.
ಇದರ ಜಾರಿಯಿಂದ ಭಾರತವು, ಪ್ರಜಾಪ್ರಭುತ್ವ, ಜಾತ್ಯಾತೀತ ವ್ಯವಸ್ಥೆ ಹೊಂದಿರುವ ವಿಶ್ವದ ಅತೀ ದೊಡ್ಡ ರಾಷ್ಟ್ರವಾಗಿರುವುದರಿಂದ ವಿಶ್ವದ ಇತರ ರಾಷ್ಟ್ರಗಳ ನಡುವೆ ತಲೆ ತಗ್ಗಿಸುವ ಮಟ್ಟಕ್ಕೆ ಇಳಿಯ ಬೇಕಾಗುತ್ತದೆ.
ಸರಕಾರವು ತನ್ನ ಅಧಿಕಾರದ ಸರಣಿಯನ್ನು ಮುಂದುವರಿಸುವ ಸಲುವಾಗಿ ಚುನಾವಣೆಯ ಹೊಸ್ತಿಲಲ್ಲಿ ತರಾತುರಿಯಲ್ಲಿ ಸಿಎಎ ಜಾರಿಗೊಳಿಸುವ ಪ್ರಯತ್ನಪಡುತ್ತಿದ್ದು, ಇದು ಅಪಾಯಕಾರಿ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಅಧ್ಯಕ್ಷರಾದ ಮೌಲಾನ ಮುಹಮ್ಮದ್ ಫಾಝಿಲ್ ರಝ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಇಬ್ರಾಹಿಂ ಮದನಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.