janadhvani

Kannada Online News Paper

ತಡೆಯಾಜ್ಞೆ ತೆರವು- 5,8,9 ಮತ್ತು 11ನೇ ತರಗತಿಗೆ ನಿಗದಿಯಂತೆ ಪಬ್ಲಿಕ್ ಪರೀಕ್ಷೆ

ಮಾರ್ಚ್‌ 11ರ ಸೋಮವಾರದಿಂದ ಆರಂಭವಾಗಬೇಕಾಗಿದ್ದ ಬೋರ್ಡ್‌ ಎಕ್ಸಾಂಗಳು ಎಂದಿನಂತೆ ನಡೆಯಲಿವೆ.

ಬೆಂಗಳೂರು: 5,8,9 ಮತ್ತು 11ನೇ ತರಗತಿಗಳಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಪಬ್ಲಿಕ್‌ ಪರೀಕ್ಷೆಗೆ ಸಂಬಂಧಿಸಿ ಬಿಗ್‌ ಅಪ್ಡೇಟ್‌ ಬಂದಿದೆ. ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠವು ಪಬ್ಲಿಕ್‌ ಪರೀಕ್ಷೆಗೆ ವಿಧಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ತೆರವುಗೊಳಿಸಿದೆ. ಹೀಗಾಗಿ ಮಾರ್ಚ್‌ 11ರ ಸೋಮವಾರದಿಂದ ಆರಂಭವಾಗಬೇಕಾಗಿದ್ದ ಬೋರ್ಡ್‌ ಎಕ್ಸಾಂಗಳು ಎಂದಿನಂತೆ ನಡೆಯಲಿವೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ್ದ ಬೋರ್ಡ್‌ ಎಕ್ಸಾಂ ಸುತ್ತೋಲೆಯನ್ನು ಕಳೆದ ಬುಧವಾರ ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಗಳು ಮೇಲ್ಮನವಿ ಸಲ್ಲಿಸಿದ್ದವು. ಇದೀಗ ವಿಭಾಗೀಯರ ಪೀಠವು ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಪರೀಕ್ಷೆಗಳು‌ ಪಬ್ಲಿಕ್‌ ಎಕ್ಸಾಂ ಮಾದರಿಯಲ್ಲೇ ಯಥಾವತ್ತಾಗಿ ನಡೆಯಲಿದೆ.

ಮೇಲ್ಮನವಿಯಲ್ಲಿ ಸರ್ಕಾರದ ವಾದ ಏನಾಗಿತ್ತು?
ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಸರ್ಕಾರ ಸಲ್ಲಿಸಿದ ಮೇಲ್ಮನವಿಯಲ್ಲಿ, 53,680 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಖಾಸಗಿ ಶಾಲೆಗಳಷ್ಟೇ ಬೋರ್ಡ್ ಪರೀಕ್ಷೆಗೆ ತಕರಾರು ಎತ್ತಿವೆ. ಸ್ವಹಿತಾಸಕ್ತಿಗಾಗಿ ಖಾಸಗಿ ಶಾಲೆಗಳು ರಿಟ್ ಸಲ್ಲಿಸಿವೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆಗೆ ಆಕ್ಷೇಪಿಸಿಲ್ಲ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗಲಿದೆ ಎಂದು ತಿಳಿಸಿತ್ತು.

ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ್‌ ಅವರು ವಾದಿಸಿದರು. ಸರ್ಕಾರದ ಮನವಿಗೆ ಖಾಸಗಿ ಶಾಲೆಗಳ ಸಂಘವೂ ಆಕ್ಷೇಪ ವ್ಯಕ್ತಪಡಿಸಿತು. ಅಂತಿಮವಾಗಿ ಕೋರ್ಟ್‌ ಪಬ್ಲಿಕ್‌ ಪರೀಕ್ಷೆಗೆ ಅವಕಾಶ ಒದಗಿಸಿದೆ.