janadhvani

Kannada Online News Paper

ದಮ್ಮಾಮ್-ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅನಿರ್ದಿಷ್ಟವಾಗಿ ವಿಳಂಬ- ಪ್ರಯಾಣಿಕರಿಗೆ ಸಂಕಷ್ಟ

ಪ್ರಯಾಣಿಕರಿಗೆ ವಸತಿ ಮತ್ತು ಆಹಾರ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲು ಕಂಪನಿ ಸಿದ್ಧವಾಗಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ದಮ್ಮಾಮ್,ಮಾ.7: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತೆ ಮತ್ತೆ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಸುತ್ತಿದೆ. ದಮ್ಮಾಮ್-ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅನಿರ್ದಿಷ್ಟವಾಗಿ ವಿಳಂಬವಾಗಿದೆ. ನಿನ್ನೆ ರಾತ್ರಿ 10.20ಕ್ಕೆ ದಮ್ಮಾಮ್‌ನಿಂದ ಮಂಗಳೂರಿಗೆ ಹೊರಡಬೇಕಿದ್ದ ವಿಮಾನ ಅನಿರ್ದಿಷ್ಟಾವಧಿ ವಿಳಂಬವಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬೋರ್ಡಿಂಗ್ ನೀಡಿದ ನಂತರ, ಸೇವೆಯನ್ನು ರದ್ದುಗೊಳಿಸಲಾಯಿತು. ಇದಾದ ಬಳಿಕ ಎರಡು ಬಾರಿ ವಿಮಾನ ಹಾರಾಟದ ಸಮಯವನ್ನು ಮರು ಕ್ರಮೀಕರಿಸಲಾಯ್ತಾದರೂ ಹಾರಾಟ ನಡೆಸಲಿಲ್ಲ.

ನಿನ್ನೆ ರಾತ್ರಿ 12.45 ಮತ್ತು ಇಂದು ಬೆಳಗ್ಗೆ 11.25ಕ್ಕೆ ಮರುನಿಗದಿ ಮಾಡಲಾಗಿತ್ತು. ಆದರೆ ಈ ಸಮಯದಲ್ಲಿ ಪ್ರಯಾಣ ಹೊರಡಲು ಅಥವಾ ಅದರ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಲು ಸಂಸ್ಥೆಯ ಅಧಿಕಾರಿಗಳು ಇನ್ನೂ ಸಿದ್ಧವಾಗಿಲ್ಲ.

ಅದೂ ಅಲ್ಲದೆ, ಪ್ರಯಾಣಿಕರಿಗೆ ವಸತಿ ಮತ್ತು ಆಹಾರ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲು ಕಂಪನಿ ಸಿದ್ಧವಾಗಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಸೌದಿ ಪೂರ್ವ ಪ್ರಾಂತ್ಯದ ದೂರದ ಭಾಗಗಳಿಂದ ಬಂದ ಪ್ರಯಾಣಿಕರು ಸೇರಿದಂತೆ ನಿನ್ನೆಯಿಂದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಇದರಿಂದಾಗಿ ಬಹಳ ತೊಂದರೆ ಅನುಭವಿಸಿದರು. ಈ ರೀತಿ ಪ್ರಯಾಣಿಕರನ್ನು ನಿರಂತರವಾಗಿ ಸಂಕಷ್ಟಕ್ಕೆ ದೂಡುತ್ತಿರುವ ಏರ್‌ ಇಂಡಿಯಾದ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ.

error: Content is protected !! Not allowed copy content from janadhvani.com