janadhvani

Kannada Online News Paper

ವಿಸಿಟ್ ವೀಸಾದಲ್ಲಿ ಮನೆಕೆಲಸಕ್ಕೆ ಆಗಮಿಸಿ,ಸಂಕಷ್ಟ- ಕರ್ನಾಟಕದ ಸಬೀಹಾ ಸ್ವದೇಶಕ್ಕೆ ವಾಪಸ್

ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ ಫಹದ್ ರಾಜರ ಅತಿಥಿಯಾಗಿ ಭಾರತದಿಂದ ಹಜ್ ಯಾತ್ರೆಗೆ ಬರುವ ಅದೃಷ್ಟ ಅವರಿಗೆ ಒಲಿದಿತ್ತು.

ರಿಯಾದ್: ಎರಡು ದಶಕಗಳ ಹಿಂದೆ, ಸೌದಿ ದೊರೆಯ ಅತಿಥಿಯಾಗಿ ಹಜ್ ನಿರ್ವಹಿಸುವ ಅದೃಷ್ಟ ಒದಗಿ ಬಂದಿದ್ದು ಮತ್ತು ಆ ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಉತ್ತಮ ಅನುಭವಗಳನ್ನು ಹೊಂದಿದ್ದ ಕಾರಣಕ್ಕಾಗಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಲು ಬಯಸಿದ ಕರ್ನಾಟಕದ ಸಬೀಹಾ ಎಂಬ ಯುವತಿಯು ಭೇಟಿ ವೀಸಾದಲ್ಲಿ ಮನೆಕೆಲಸಕ್ಕೆ ಆಗಮಿಸಿ ಸಂಕಷ್ಟಕ್ಕೆ ಸಿಲುಕಿದರು. ಅಂತಿಮವಾಗಿ, ಸಾಮಾಜಿಕ ಕಾರ್ಯಕರ್ತರು ಮತ್ತು ದೂತಾವಾಸದ ಸಹಾಯದಿಂದ ಅವರು ಪಾರಾಗಿ ಸ್ವದೇಶಕ್ಕೆ ಮರಳಿದ್ದಾರೆ.

ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ ಫಹದ್ ರಾಜರ ಅತಿಥಿಯಾಗಿ ಭಾರತದಿಂದ ಹಜ್ ಯಾತ್ರೆಗೆ ಬರುವ ಅದೃಷ್ಟ ಅವರಿಗೆ ಒಲಿದಿತ್ತು. ಯತೀಂಖಾನ ಒಂದರಲ್ಲಿ ಚೀಟಿ ಎತ್ತುವ ಮೂಲಕ 10 ಮಂದಿಯಲ್ಲಿ ಒಬ್ಬರಾಗಿ ಆಯ್ಕೆಯಾಗುವ ಮೂಲಕ ಸಬೀಹಾ ಅವರಿಗೆ ಈ ಅವಕಾಶ ಲಭಿಸಿತ್ತು. ಕರ್ನಾಟಕದವರೇ ಆದ ಸಮೀವುಲ್ಲಾ ಮತ್ತು ಶಮೀನ್ ದಂಪತಿಯ ಪುತ್ರಿಯಾಗಿದ್ದಾರೆ ಸಬೀಹಾ.

ಅಂದು ತನಗೆ ಸಿಕ್ಕ ಪಂಚತಾರಾ ಹೋಟೆಲ್ ನ ವಸತಿ, ಊಟ, ಸೌಕರ್ಯಗಳಿಗೆ ಮರುಳಾಗಿದ್ದ ಸಬೀಹಾ ಸೌದಿಯಲ್ಲಿ ಎಲ್ಲೆಲ್ಲೂ, ಸದಾ ಇದೇ ಪರಿಸ್ಥಿತಿ ಎಂದುಕೊಂಡಿದ್ದರು. ಅದಕ್ಕೇ ಮನೆಯ ಕೆಲಸ ಎಂದು ಕೇಳಿದ ಕೂಡಲೇ ಸೌದಿಗೆ ಹೊರಟಿದ್ದಾರೆ. ಮುಂಬೈ ಮೂಲದ ಸಲೀಂ ಎಂಬ ಏಜೆಂಟ್ ಅವರನ್ನು ಪ್ರವಾಸಿ ವೀಸಾದಲ್ಲಿ ದುಬೈಗೆ ಕರೆತಂದು ಹಲವು ದಿನಗಳ ಕಾಲ ಅಲ್ಲಿಯೇ ತಂಗಿದ ಬಳಿಕ ಸೌದಿ ಅರೇಬಿಯಾಕ್ಕೆ ಖಾಸಗಿ ವಿಸಿಟ್ ವೀಸಾದಲ್ಲಿ ದುಬೈನಿಂದ ರಿಯಾದ್ ಮೂಲಕ ಖಮೀಜ್ ಮುಷೈತ್‌ಗೆ ಆಗಮಿಸಿದ್ದರು.

“ನಾನು ಸೌದಿಗೆ ಆಗಮಿಸಿದಾಗ, ಎಲ್ಲಾ ಊಹೆಗಳು ತಪ್ಪಾಗಿದೆ ಮತ್ತು ನಾನು ಮೋಸ ಹೋಗಿದ್ದೇನೆ ಎಂದು ನಾನು ಅರಿತುಕೊಂಡೆ. ಸ್ಥಳೀಯರ ಮನೆಯಲ್ಲಿ ಸಂಕಷ್ಟದ ಕಾರಣ ಏಜೆಂಟ್ ಮತ್ತು ಸ್ಥಳೀಯ ಕುಟುಂಬಕ್ಕೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ತಪ್ಪಿಸಿಕೊಂಡು ಪೊಲೀಸರ ಸಹಾಯ ಕೇಳಿದ್ದೇನೆ” ಎಂದು ಸಬೀಹಾ ಮಾಹಿತಿ ನೀಡಿದರು. ಪೋಲೀಸರು ಗೃಹ ಕಾರ್ಮಿಕರ ವಸತಿಗೃಹಕ್ಕೆ ಮತ್ತು ನಂತರ ಗಡೀಪಾರು (ತರ್ಹೀಲ್) ಕೇಂದ್ರಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಿದರು ಆದರೆ ಅವರು ಕಾನೂನುಬದ್ಧವಾಗಿ ವಿಸಿಟ್ ವೀಸಾದಲ್ಲಿದ್ದು ಮತ್ತು ಗೃಹ ಕಾರ್ಮಿಕರ ಇಖಾಮಾದಲ್ಲಿಲ್ಲದ ಕಾರಣ ಅದಕ್ಕೆ ಸಾಧ್ಯವಾಗಲಿಲ್ಲ.

ನಂತರ ಖಮೀಸ್ ಮುಷೈತ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಸಮುದಾಯ ಕಲ್ಯಾಣ ಸಮಿತಿಯ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಚ್ಚಿಕಲ್ ಅವರಿಗೆ ಮಾಹಿತಿ ನೀಡಲಾಯಿತು. ಅವರ ಪ್ರಯತ್ನದ ಫಲವಾಗಿ ಪೊಲೀಸ್ ಮುಖ್ಯಸ್ಥರ ನೆರವಿನಿಂದ ದೇಶಕ್ಕೆ ಮರಳುವ ದಾಖಲೆಗಳನ್ನು ಸರಿಪಡಿಸಲಾಯಿತು. ಖಮೀಸ್ ಮುಷೈತ್‌ನಲ್ಲಿರುವ ಲನಾ ಶಾಲೆಯಿಂದ ವಿಮಾನ ಟಿಕೆಟ್‌ಗಳನ್ನು ಒದಗಿಸಲಾಯಿತು. ಒಐಸಿಸಿ ಮುಖಂಡರಾದ ಪ್ರಸಾದ್, ಮನಾಫ್, ಅನ್ಸಾರಿ, ರಾಯ್, ಹಬೀಬ್ ಸಹಕರಿಸಿದ್ದರು. ಸಬೀಹಾ ಕಳೆದ ದಿನ ಅಬಹಾದಿಂದ ಏರ್ ಅರೇಬಿಯಾ ವಿಮಾನದಲ್ಲಿ ಬೆಂಗಳೂರಿಗೆ ಮರಳಿದರು.

error: Content is protected !! Not allowed copy content from janadhvani.com