ಕೋಝಿಕ್ಕೋಡ್|ಮುಸ್ಲಿಮರನ್ನು ಪ್ರಚೋದಿಸಬಹುದು ಅಥವಾ ನಿರಾಶೆಗೊಳಿಸಬಹುದು ಎಂದು ಯಾರೂ ಭಾವಿಸಬಾರದು ಮತ್ತು ಈ ದೇಶದ ಎಲ್ಲ ಜಾತ್ಯತೀತ ಪ್ರಜಾಪ್ರಭುತ್ವವಾದಿಗಳು ಮುಸ್ಲಿಮರ ನ್ಯಾಯಯುತ ಹಕ್ಕುಗಳ ಪರವಾಗಿ ನಿಲ್ಲಲು ಸಿದ್ಧರಾಗಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅವರು ಕೋಝಿಕ್ಕೋಡ್ ಕಾರಂದೂರಿನಲ್ಲಿರುವ ವಿಶ್ವ ವಿಖ್ಯಾತ ಸುನ್ನೀ ವಿದ್ಯಾ ಸಂಸ್ಥೆಯಾಗಿರುವ ಮರ್ಕಝುಸ್ಸಖಾಫತಿ ಸುನ್ನಿಯ್ಯಾದಲ್ಲಿ ಖತ್ಮುಲ್ ಬುಖಾರಿ ಹಾಗೂ 38ನೇ ಸನದುದಾನ ಮಹಾ ಸಮ್ಮೇಳನದಲ್ಲಿ ಸನದುದಾನ ಭಾಷಣ ಮಾಡುತ್ತಿದ್ದರು.
ಮಸೀದಿ ಪರಿಸರಗಳನ್ನು ಅಗೆದು ಅಲ್ಲಿ ಹಿಂದೂಗಳು ಪೂಜಿಸುವ ವಿಗ್ರಹಗಳಿತ್ತು , ಹಿಂದೂ ದೇವಾಲಯಗಳನ್ನು ಹೊಡೆದುರುಳಿಸಿ ಮಸೀದಿ ನಿರ್ಮಿಸಲಾಗಿದೆ ಆದ್ದರಿಂದ ಮಸೀದಿಯನ್ನು ಧ್ವಂಸಗೊಳಿಸಬೇಕು ಎಂಬಿತ್ಯಾದಿ ಉದ್ರೇಕಕಾರಿ ಹೇಳಿಕೆಗಳು ಶಾಂತಿಪ್ರಿಯ ಮುಸ್ಲಿಮರನ್ನು ಕೆರಳಿಸುವ ತಂತ್ರವಾಗಿದೆ.
ಆ ಮೂಲಕ ದೇಶದಲ್ಲಿ ಗಲಭೆಯೆಬ್ಬಿಸಬಹುದೆಂಬ ಭಾವನೆಯಾಗಿದೆ. ಆದರೆ ಭಾರತೀಯ ಮುಸ್ಲಿಮರು ಗಲಭೆಗೆ ಮುಂದಾಗುವವರಲ್ಲ. ನಾವು ಅತ್ಯಂತ ತಾಳ್ಮೆವಹಿಸುವವರಾಗಿದ್ದೇವೆ. ಅದರರ್ಥ ಹೇಡಿಗಳೆಂದಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಾಂತಪುರಂ ಉಸ್ತಾದ್ ಹೇಳಿದರು.
ಮುಸ್ಲಿಮರು ಪ್ರಪಂಚದ ವಿವಿಧ ಭಾಗಗಳಲ್ಲಿ, ವಿವಿಧ ಸಮಯಗಳಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದ್ದಾರೆ. ಇವೆಲ್ಲವನ್ನೂ ಮುಸ್ಲಿಮರು ಆಧ್ಯಾತ್ಮಿಕ ಶಕ್ತಿಯ ಮೂಲಕ ಜಯಿಸಿದ್ದಾರೆ.ಪ್ರಸ್ತುತ ಬಿಕ್ಕಟ್ಟುಗಳಿಂದಲೂ ಅದೇ ರೀತಿಯಲ್ಲಿ ಜಯಿಸುವರು. ಇಸ್ಲಾಂ ಧರ್ಮವು ಬಿಕ್ಕಟ್ಟುಗಳು ಮತ್ತು ತೊಂದರೆಗಳನ್ನು ಆಧ್ಯಾತ್ಮಿಕ ಅನುಭವಗಳಾಗಿ ಅರ್ಥಮಾಡಿಕೊಳ್ಳಲು ಕಲಿಸುತ್ತದೆ.
ಸಮಸ್ಯೆಗಳು ಆರ್ಥಿಕ ಮತ್ತು ರಾಜಕೀಯದಂತಹ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಅವು ಅಂತಿಮವಾಗಿ ಆಧ್ಯಾತ್ಮಿಕ ಸಮಸ್ಯೆಗಳಾಗಿವೆ. ಪ್ರಾರ್ಥನೆ ಮತ್ತು ದೃಢ ನಂಬಿಕೆಯಿಂದ ತೊಂದರೆಗಳನ್ನು ಜಯಿಸಬೇಕು. ಸೃಷ್ಟಿಕರ್ತನ ಕರುಣೆಯನ್ನು ನಿರೀಕ್ಷಿಸುವ ವಿಶ್ವಾಸಿಗಳನ್ನು ಯಾರಿಂದಲೂ ನಿರಾಶೆಗೊಳಿಸಲಾಗದು. ಮಿತ, ಶಾಂತಿ, ತಾಳ್ಮೆ ಮತ್ತು ಸಹಬಾಳ್ವೆಯಾಗಿದೆ ಇಸ್ಲಾಮಿನ ಭಾಷೆ.
ಅತಿಕ್ರಮಿತ ಪ್ರದೇಶದಲ್ಲಿ ಆರಾಧನೆ ಮಾಡುವುದು ಸ್ವೀಕಾರಾರ್ಹವಲ್ಲ ಎಂಬುದಾಗಿದೆ ಮುಸ್ಲಿಮರ ನಂಬಿಕೆ. ಆದ್ದರಿಂದ, ಮುಸ್ಲಿಮರು ಯಾವಾಗಲೂ ಆರಾಧನಾ ಸ್ಥಳಗಳನ್ನು ಅತ್ಯಂತ ಕಾಳಜಿಯಿಂದ ನಿರ್ಮಿಸಿದ್ದಾರೆ. ಯಾಕಂದರೆ ಆರಾಧನೆಯನ್ನು ಅಂಗೀಕರಿಸಬೇಕಾದರೆ, ಅದನ್ನು ನಡೆಸುವ ಸ್ಥಳವು ಎಲ್ಲಾ ರೀತಿಯ ಅನ್ಯಾಯಗಳಿಂದ ಮುಕ್ತವಾಗಿರಬೇಕು. ಆ ಷರತ್ತನ್ನು ಅನುಸರಿಸುವ ಮೂಲಕವೇ ಮುಸ್ಲಿಮರು ಆರಾಧನಾ ಸ್ಥಳಗಳನ್ನು ನಿರ್ಮಿಸಿದ್ದಾರೆ. ಹೀಗೆ ನಿರ್ಧರಿಸಿದ ಸ್ಥಳವು ಯಾವಾಗಲೂ ಆರಾಧನಾ ಸ್ಥಳವಾಗಿಯೇ ಇರುತ್ತದೆ.ಅದು ಒಂದಲ್ಲ ಒಂದು ದಿನ ಮುಸಲ್ಮಾನರ ಕೈಸೇರುತ್ತದೆ. ಕಅಬಾ ಮತ್ತು ಅಕ್ಸಾ ಮಸೀದಿಯ ಇತಿಹಾಸವು ಅದನ್ನೇ ಕಲಿಸುತ್ತದೆ. ಮುಸ್ಲಿಮರೊಂದಿಗೆ ನಿಂತಿದ್ದಕ್ಕಾಗಿ ಹಲ್ಲೆ ಮತ್ತು ಅವಮಾನಕ್ಕೊಳಗಾದವರಿಗೆ ಈ ಸಮುದಾಯದ ಬೆಂಬಲವನ್ನು ಗ್ರಾಂಡ್ ಮುಪ್ತಿ ವ್ಯಕ್ತಪಡಿಸಿದರು.