ಪ್ರಚೋದನಾಕಾರಿ ಭಾಷಣದ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸಿದ ಮಾಜಿ ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಠಾಣೆ ಪೊಲೀಸರು ಸ್ವಯಂ ಪ್ರೇರಿತ(ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆ, ಸಾಮಾಜದ ಅಶಾಂತಿಗೆ ಕಾರಣವಾಗುವ ಹೇಳಿಕೆ ಹಿನ್ನೆಲೆಯಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ಸೆಕ್ಷನ್ 153ಎ, 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಅವರು ಪ್ರತಿಕ್ರಿಯಿಸಿದ್ದು, ಅನಂತಕುಮಾರ್ ಹೆಗಡೆ ಕುಮಟಾದಲ್ಲಿ ನಡೆದ ಸಭೆಯಲ್ಲಿ ಮಾಡಿರುವ ಭಾಷಣ ಆಕ್ಷೇಪಾರ್ಹವಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಶನಿವಾರ ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ್ದ ಅನಂತಕುಮಾರ್ ಹೆಗಡೆ, ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ದೇವಾಲಯಗಳಾಗಿದ್ದವು. ಅವುಗಳನ್ನು ಬಾಬ್ರಿ ಮಸೀದಿ ರೀತಿಯಲ್ಲಿ ಹೊಡೆದುರುಳಿಸಬೇಕು ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಕೆ.ಶಂಭು ಶೆಟ್ಟಿ, ಸಂಸದ ಅನಂತಕುಮಾರ್ ಹೆಗಡೆ ಶಾಂತವಾಗಿರುವ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಚುನಾವಣೆ ಸಮೀಪಿಸಿದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಸಂಸದ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅನಂತಕುಮಾರ್ ತಮ್ಮ ಭಾಷಣದಲ್ಲಿ ಮಾತ್ರ ದ್ವೇಷಿಸುವ ಸಮುದಾಯದ ಜತೆಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ. ಆದರೆ ಜನರನ್ನು ಮಾತ್ರ ತಪ್ಪು ದಾರಿಗೆ ಎಳೆದು ಸಮಾಜದಲ್ಲಿ ದ್ವೇಷ ವಾತಾವರಣ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಅನಂತಕುಮಾರ್ ಹೆಗಡೆ ಕೆಲವು ದಶಕದಿಂದ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಜನರು ಅವರನ್ನು ಸಹಿಸಿಕೊಂಡಿದ್ದಾರೆ. ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದರು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಕಾರಣಕ್ಕೆ ಹತ್ತಾರು ಜನರು ಅಪಘಾತದಲ್ಲಿ ಮೃತಪಟ್ಟರೂ ಸಂಸದರು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಸಂಸದರಿಗೆ ಅನಾರೋಗ್ಯ ಕಾಡಿದೆ ಎಂದು ಗುಲ್ಲೆಬ್ಬಿಸಲಾಗಿತ್ತು. ಜನರು ಇದನ್ನು ನಂಬಿ ಸುಮ್ಮನಿದ್ದರು. ಆದರೆ ಈಗ ಅವರು ಸಮಾಜದಲ್ಲಿ ಅಶಾಂತಿ ಕದಡುವ ಹೇಳಿಕೆ ನೀಡುತ್ತ ಮುನ್ನೆಲೆಗೆ ಬರುವ ಯತ್ನ ನಡೆಸಿದ್ದಾರೆ ಎಂದು ಹೇಳಿದ್ದರು.
ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಾರಣ ಕುಖ್ಯಾತಿಯನ್ನೂ ಗಳಿಸಿದ್ದ ಅನಂತಕುಮಾರ್ ಹೆಗಡೆ ತನ್ನ ತಾಯಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣದಿಂದ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು.