ಹೊಸದಿಲ್ಲಿ: ಅರಬ್ಬಿ ಸಮುದ್ರದಲ್ಲಿ ಸರಕು ಸಾಗಣೆ ಹಡಗೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದು ಸ್ಫೋಟ ಹಾಗೂ ಬೆಂಕಿ ಅವಘಡಕ್ಕೆ ಕಾರಣವಾಗಿದೆ. ಶನಿವಾರ ಈ ಘಟನೆ ನಡೆದಿದ್ದು, ಯಾವುದೇ ಜೀವ ಹಾನಿ ವರದಿಯಾಗಿಲ್ಲ ಎಂದು ಸಮುದ್ರಯಾನ ಸಂಸ್ಥೆ ತಿಳಿಸಿದೆ. ಲಿಬೇರಿಯಾ ಧ್ವಜವುಳ್ಳ ಟ್ಯಾಂಕರ್, ಇಸ್ರೇಲ್‌ಗೆ ಸಂಬಂಧಿಸಿದ್ದಾಗಿದೆ ಎಂದು ಮತ್ತೊಂದು ಸಮುದ್ರಯಾನ ಸಂಸ್ಥೆ ಹೇಳಿದೆ.
ಭಾರತದ ಕರಾವಳಿ ಭಾಗದಲ್ಲಿ ನಡೆದ ಈ ದಾಳಿಯಿಂದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಗೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಲಿಬೇರಿಯಾ ಧ್ವಜ ಹೊತ್ತಿರುವ ಈ ರಾಸಾಯನಿಕ ಉತ್ಪನ್ನಗಳ ಟ್ಯಾಂಕರ್ ಇಸ್ರೇಲ್ ಜತೆ ನಂಟು ಹೊಂದಿದೆ ಎಂದು ಬ್ರಿಟಿಷ್ ಸೇನೆಯ ಯುನೈಟೆಡ್ ಕಿಂಗ್‌ಡಮ್ ಸಾಗರ ವ್ಯಾಪಾರ ಕಾರ್ಯಾಚರಣೆಗಳು ಮತ್ತು ಸಾಗರ ಭದ್ರತಾ ಸಂಸ್ಥೆ ಆಂಬ್ರೆ ಮಾಹಿತಿ ನೀಡಿದೆ.ಸಿಬ್ಬಂದಿರಹಿತ ವೈಮಾನಿಕ ವ್ಯವಸ್ಥೆಯಿಂದ ದಾಳಿ ನಡೆಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಆಪರೇಷನ್ಸ್ ತಿಳಿಸಿದೆ.
ಹಡಗಿನಲ್ಲಿರುವ ಸಿಬ್ಬಂದಿಯಲ್ಲಿ 20 ಭಾರತೀಯರು ಕೂಡ ಸೇರಿದ್ದಾರೆ. ಗುಜರಾತ್‌ನ ಪೋರಬಂದರ್ ಕರಾವಳಿಯಿಂದ ಸುಮಾರು 217 ನಾಟಿಕಲ್ ಮೈಲು ದೂರದಲ್ಲಿರುವ ಎಂವಿ ಚೆಮ್ ಪ್ಲುಟೊ ವ್ಯಾಪಾರಿ ಹಡಗಿನ ಕಡೆಗೆ ಭಾರತೀಯ ಕರಾವಳಿ ಕಾವಲು ಹಡಗು ತೆರಳುತ್ತಿದೆ.
ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ಹಡಗು, ಕಚ್ಚಾ ತೈಲವನ್ನು ರವಾನಿಸುತ್ತಿತ್ತು. ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಪಹರೆ ನಡೆಸುತ್ತಿದ್ದ ಕರಾವಳಿ ಕಾವಲು ಹಡಗು ಐಸಿಜಿಎಸ್ ವಿಕ್ರಮ್, ಆಪತ್ತಿನಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ದೌಡಾಯಿಸಿದೆ. ಅದಕ್ಕೆ ಸಹಾಯ ಒದಗಿಸುವಂತೆ ಈ ಭಾಗದಲ್ಲಿನ ಎಲ್ಲಾ ಹಡುಗಳಿಗೂ ಕರಾವಳಿ ಕಾವಲು ಪಡೆ ವಿಭಾಗ ಸೂಚನೆ ನೀಡಿದೆ.
ಬೆಂಕಿಯನ್ನು ನಂದಿಸಲಾಗಿದೆ. ಆದರೆ ಅದು ಹಡಗಿನ ಕಾರ್ಯಾಚರಣೆಗೆ ತೊಡಕು ಉಂಟುಮಾಡಿದೆ. ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.