janadhvani

Kannada Online News Paper

“ದುಬೈ ಗಡಿನಾಡ ಉತ್ಸವ-2023”- ಯಶಸ್ವಿ ಸಮಾಪ್ತಿ

ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್ ಹೊರಟ್ಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಉದ್ಯೋಗವನ್ನರಸಿಕೊಂಡು ತಾಯ್ನಾಡಿನ ಕನ್ನಡ ನೆಲದಿಂದ ಬಂದ ಕನ್ನಡಿಗರು ಇಲ್ಲಿ ಸರ್ವರೊಳು ಒಂದಾಗಿ ಕನ್ನಡ ಭಾಷೆ ಸಾಹಿತ್ಯ ಅಭಿಮಾನವನ್ನು ಮೆರೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದರು

ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ವತಿಯಿಂದ ದುಬೈನಲ್ಲಿ ದ್ವಿತೀಯ ಬಾರಿಗೆ “ದುಬೈ ಗಡಿನಾಡ ಉತ್ಸವ-2023” ಅಭೂತಪೂರ್ವವಾಗಿ ಜರಗಿ ಕನ್ನಡ ಭಾಷೆ,ಸಾಹಿತ್ಯ,ಸಾಂಸ್ಕೃತಿಕತೆಯ ಮುಖಗಳು ಅನಾವರಣಗೊಂಡವು. ನಗರದ ಅಲ್ ಗಿಸಾಸ್ ನ ವುಡ್ಲ್ಯಾಮ್ ಪಾರ್ಕ್ (Woodlem park School) ಶಾಲೆಯ ಸಭಾಂಗಣದಲ್ಲಿ ಮಧ್ಯಾಹ್ನ ಬಳಿಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಯುಎಇಯಲ್ಲಿದ್ದ ಕನ್ನಡಿಗರು,ಕನ್ನಡಾಭಿಮಾನಿಗಳು ಸಾಕ್ಷಿಗಳಾದರು.

ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಎಸ್ ಹೊರಟ್ಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಉದ್ಯೋಗವನ್ನರಸಿಕೊಂಡು ತಾಯ್ನಾಡಿನ ಕನ್ನಡ ನೆಲದಿಂದ ಬಂದ ಕನ್ನಡಿಗರು ಇಲ್ಲಿ ಸರ್ವರೊಳು ಒಂದಾಗಿ ಕನ್ನಡ ಭಾಷೆ ಸಾಹಿತ್ಯ ಅಭಿಮಾನವನ್ನು ಮೆರೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯ. ಗಡಿನಾಡ ಉತ್ಸವದಂತಹ ಕಾರ್ಯಕ್ರಮಗಳಿಗೆ ದುಬೈಗೆ ಬಂದರೂ ಇಲ್ಲಿನ ಕನ್ನಡ ಪ್ರೇಮ ಕಂಡಾಗ ಕರ್ನಾಟಕದ ಒಳಗಡೆಯೇ ಎಲ್ಲೋ ಇರುವಂತೆ ಭಾಸವಾಗುತ್ತಿದೆ. ಇಲ್ಲಿನವರ ಕನ್ನಡ ಪ್ರೇಮ ಕರ್ನಾಟಕಕ್ಕೆ ಮಾದರಿಯಾಗಿದೆ. ಭಾಷೆ ,ಸಂಸ್ಕೃತಿ ಪ್ರೋತ್ಸಾಹಕ್ಕಾಗಿ ಮತ್ತು ಅರಬ್ ರಾಷ್ಟ್ರಗಳಿಗೆ ಪ್ರೇರಣೆಯಾಗುವಂತೆ ಇಲ್ಲೊಂದು ಕನ್ನಡ ಭವನ ನಿರ್ಮಾಣಕ್ಕೆ ಮತ್ತು ಕನ್ನಡ ಕಾರ್ಯಕ್ರಮದ ಪ್ರೋತ್ಸಾಹಕ್ಕೆ ಸರಕಾರದೊಡನೆ ಚರ್ಚಿಸಿ ಸೂಕ್ತ ಅನುದಾನಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆಯಿತ್ತರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಭಾಷಾಭಿಮಾನ ದೇಶವನ್ನು ದಾಟಿದಾಗ ಉಂಟಾಗುವ ಅನುಭವ ನಿಜವಾದ ತಾಯ್ನಾಡಿನ ಮಮತೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಸೌಹರ್ದತವಾಗಿ ನಡೆಯುವಲ್ಲಿ ಸರ್ವ ಧರ್ಮದ ಹಾಗೂ ಜನತೆಯ ಸಹಕಾರ ಪ್ರದಾನ ಕಾರಣ. ಇದಕ್ಕಾಗಿಯೇ ಸಾಮರಸ್ಯಕ್ಕೆ ಕೊಲ್ಲಿ ರಾಷ್ಟ್ರದ ಕನ್ನಡಿಗರ ಕೊಡುಗೆ ಗಣನೀಯವಾಗಿದೆ ಎಂದರು.

ರಾಜ್ಯಸಭಾ ಸದಸ್ಯರಾದ ಡಾ, ಎಲ್ ಹನುಮಂತಯ್ಯ ,ಮಂಜೇಶ್ವರಶಾಸಕ ಎ ಕೆ ಎಂ ಅಶ್ರಫ್,ಅಂತಾರಾಷ್ಟ್ರೀಯ ಖ್ಯಾತಿಯ ವಿನ್ಯಾಸಗಾರ ರವೀಂದ್ರ ಕುಮಾರ್ ,ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ
ಸೋಮಶೇಖರ ಜೆ ಎಸ್ , ಪಂ.ಮಾಜಿ ಉಪಾಧ್ಯಕ್ಷೆ ,ವಾಗ್ಮಿ ಎ ಎ ಆಯಿಷಾ ಪೆರ್ಲ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಸಮಾಜ ಸೇವಕರಾದ ಹರೀಶ್ ಬಂಗೇರ, ಸಂದೀಪ್ ಮೂಲ್ಕಿ, ಉದ್ಯಮಿ ಅಬುಲ್ ಸಲಾಂ ಚೇವಾರು, ರಶೀದ್ ಬಾಯಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.

ಸಂಘಟಕರಾದ ಎ.ಆರ್. ಸುಬ್ಬಯ್ಯಕಟ್ಟೆ,
ಝಡ್.ಎ.ಕಯ್ಯಾರ್,ಕೋಶಾಧಿಕಾರಿ ಇಬ್ರಾಹಿಂ ಬಾಜೂರಿ, ನವೀನ ಗೌಡ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಘಟಕ ಯುಎಇಯ ಸರ್ವ ಸದಸ್ಯರ ಸಹಭಾಗಿತ್ವದಲ್ಲಿ ಕಾರ್ಯಕ್ರಮ‌ ಯಶಸ್ವಿಯಾಗಿ ನಡೆಯಿತು. ಘಟಕದ ಪ್ರದಾನ ಕಾರ್ಯದರ್ಶಿ ಅಮರ್ ದೀಪ್ ಕಲ್ಲೂರಾಯ ಪ್ರಾಸ್ತವನೆಗೈದರು.ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ಅಧ್ಯಕ್ಷ
ನ್ಯಾ.ಇಬ್ರಾಹಿಂ ಖಲೀಲ್ ಸ್ವಾಗತಿಸಿ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ ವಂದಿಸಿದರು.

ಗಡಿನಾಡ ರತ್ನ ಪ್ರಶಸ್ತಿ ಪ್ರದಾನ
ಸಮಾಜ ಸೇವೆಯ ಸಾಧನೆಯನ್ನು ಗುರುತಿಸಿ
ಜೋಸೆಫ್. ಮಾತಿಯಾಸ್, ಉದ್ಯಮ ಕ್ಷೇತ್ರದಲ್ಲಿ ಅಶ್ರಫ್ ಮಂತೂರ್, ಆರ್ಥಿಕ ತಜ್ಞ ಸಿ ಎ ರಮಾನಂದ ಪ್ರಭು ಮಸ್ಕತ್ ಅವರಿಗೆ ಗಡಿನಾಡ ರತ್ನ ಪ್ರಶಸ್ತಿ ಮತ್ತು ಸುಧಾಕರ ರಾವ್ ಪೇಜಾವರ, ಡಾ ಮಲ್ಲಿಕಾರ್ಜುನ ಎಸ್ ನಾಸಿ, ಅಶ್ರಫ್ ಕಾರ್ಲೆ ಶಾಹುಲ್ ಹಮೀದ್ ತಂಗಳ್ ಮಾಳಿಗೆ, ಆಸೀಫ್ ಮೇಲ್ಪರಂಭ, ಫಾರೂಕ್ ಚಂದ್ರನಗರ ಉಡುಪಿ,
ಕಲಿಮಾ ಫೌಂಡೇಶನ್ ಉಡುಪಿ ಇದರ ಅಧ್ಯಕ್ಷರಾದ ಡಾ ಸಿಬಗತುಲ್ಲ ಶರೀಫ್ ಅವರಿಗೆ ಸಾಧಕರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಪರಾಹ್ನದಿಂದ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಅಬ್ದುಲ್ಲ ಮಾದುಮೂಲೆ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ ಕಲಾವಿದರಿಂದ “ಮೋಹನ ಮುರಳಿ” ಯಕ್ಷಗಾನ ನೃತ್ಯ ನಾಟಕ,ಯುಎಇಯ ಪ್ರಸಿದ್ಧ ನೃತ್ಯ ಕಲಾವಿದರಿಂದ “ನೃತ್ಯ ವೈಭವ”, ಯುಎಇಯಲ್ಲಿ ಇರುವ ಗಡಿನಾಡಿನ ಪ್ರಸಿದ್ಧ ಗಾಯಕ ಗಾಯಕಿಯರಿಂದ “ಸಂಗೀತ ರಸಸಂಜೆ”,ಹೆಣ್ಣು ಹುಲಿ ನೃತ್ಯ ಹಾಗೂ ದಫ್ ಮುಟ್ಟ್ ಇನ್ನಿತರ ಕಾರ್ಯಕ್ರಮಗಳು ಕನ್ನಡ ಸಂಸ್ಕೃತಿ ವೈಭವವನ್ನು ಬಿಂಬಿಸಿ ಜನ ಮನ ಸೂರೆಗೊಂಡವು. ಶ್ರೀಮತಿ ಆರತಿ ಅಡಿಗ ಮತ್ತು ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com