ದುಡಿಮೆಗಾಗಿ ಮೀಸಲಿಟ್ಟ ತ್ಯಾಗದ ಸಮಯವದು,ಸುಖ ನಿದ್ರೆಯಲ್ಲಿರುವ ಸಮಯವನ್ನು ಹೊಟ್ಟೆಪಾಡಿಗಾಗಿ ವ್ಯಯಿಸಿ,ಸವಾರನಾಗಿ ದಕ್ಕೆ,ಹಾಗೂ ಮಾರುಕಟ್ಟೆಗೆ ಹೋಗುವ ನನ್ನ ಆತ್ಮೀಯ ರೊಂದಿಗೆ… —————————————————
ಕುಟುಂಬದ ಜವಾಬ್ದಾರಿ,ಹೊಟ್ಟೆಪಾಡು,ಮಕ್ಕಳ ವಿಧ್ಯಾಭ್ಯಾಸ, ಹೀಗೆ ಹತ್ತು ಹಲವು ಚಿಂತನೆ,ಜವಾಬ್ದಾರಿಯನ್ನು ಹೊತ್ತು ಬೆಳ್ಳಂಬೆಳಗ್ಗೆ ಅಥವಾ ರಾತ್ರಿ 2:30 ಮೂರರ ಹೊತ್ತು ಅಂದರೆ ಜಗತ್ತು ಆರೋಗ್ಯಕರ ಸುಖನಿದ್ರೆಯಲ್ಲಿರುವ ಸಮಯದಲ್ಲಿ ಎದ್ದು ತನ್ನವರಿಗಾಗಿ ಮೀನು ವ್ಯಾಪಾರಕ್ಕೋ, ತರಕಾರಿ, ಹಣ್ಣು ಹಂಪಲು ವ್ಯಾಪಾರಕ್ಕೋ ಅಥವಾ ತಲೆ ಹೊರೆ ಕೂಲಿ ಕೆಲಸಕ್ಕೋ ಹೋಗುವ ನನ್ನ ಆತ್ಮೀಯರೊಂದಿಗೆ ನನ್ನ ಬರಹದ ಮೂಲಕ ವಿನಂತಿಸುವುದೇನೆಂದರೆ, ಇತ್ತೀಚಿಗೆ ಹಲವು ರಸ್ತೆ ಅಪಘಾತಗಳು ಸಂಭವಿಸಿದೆ. ನನ್ನ ಗಮನದಲ್ಲಿ ಒಂದೇ ವಾರದಲ್ಲಿ ಮೂರು ನಾಲ್ಕು ಅಪಘಾತಗಳು ಸಂಭವಿಸಿದೆ. ಅದರಲ್ಲಿ ಹೆಚ್ಚಿನವರು ಬೈಕ್ ಸವಾರರು,ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಈ ಅಪಘಾತದಲ್ಲಿ ಅತೀ ಹೆಚ್ಚು ನಿದ್ರೆಗೆ ಜಾರಿ, ಅತೀ ವೇಗದ ಸಂಚಾರಕ್ಕೆ ಪ್ರಾಣಿಗಳು ಅಡ್ಡ ಬಂದಿರುವುದು ಮತ್ತು ಕೆಲವು ಎರಡು ವಾಹನಗಳ ಮಧ್ಯೆ ಸಂಭವಿಸಿರುವುದಾಗಿದೆ.
ನಿದ್ರೆಗೆ ಜಾರಿ ನಡೆದ ಅಪಘಾತಗಳ ಬಗ್ಗೆ ಇಲ್ಲಿ ನಾನು ಕಳಕಳಿಯೊಂದಿಗೆ ಕೆಲವು ವಿಷಯಗಳನ್ನು ತಿಳಿಸಲು ಬಯಸುವೆನು. ರಾತ್ರಿ 2 ,3 ಗಂಟೆಗೆ ಎದ್ದು ತನ್ನ ಕೆಲಸದ ಸ್ಥಳಕ್ಕೆ ಆಗಮಿಸುವವರು ರಾತ್ರಿ ಸ್ವಲ್ಪ ಬೇಗನೇ ಮಲಗಿ,ಅದು ಬಿಟ್ಟು ಮಲಗುವ ಹೊತ್ತಿನಲ್ಲಿ ಕ್ರಿಕೆಟ್,ಮಂದಿ ಸವಾರಿ,ಕಟ್ಟೆಯಲ್ಲಿ ಕೂತು ಸಮಯ ವ್ಯರ್ಥ ಮಾಡುವುದು,ಅದು ಇದೂ ಅಂತ ಕೆಲವು ಕಾರಣಗಳನ್ನು ದಿನಂಪ್ರತಿ ಮಾಡುವ ಅಭ್ಯಾಸ ಮಾಡಿ,ರಾತ್ರಿಯ ಹೊತ್ತು ಅರ್ಧಂಭರ್ದ ನಿದ್ರೆಯೊಂದಿಗೆ ವಾಹನ ಚಲಾಯಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ.ಇಂಥಹ ಅಪಘಾತದಲ್ಲಿ ಅದೆಷ್ಟೋ ಮಂದಿಗೆ ಗಂಭೀರ ಗಾಯವಾಗಿದೆ.ಇನ್ನೂ ಕೆಲವರ ಪ್ರಾಣ ಪಕ್ಷಿ ಹಾರಿ ಹೋಗಿವೆ.ಇದೆಲ್ಲವೂ ಯಾರಿಗೆ ನಷ್ಟ? ಆಲೋಚಿಸಿ. ನೀವು ಮನೆಯ ಆಧಾರವಾಗಿದ್ದರೆ ನಿಮ್ಮನ್ನು ನಂಬಿದ ಕುಟುಂಬದ ಹೊಣೆ ಯಾರಿಗೆ? ನೀವು ಜಾಗ್ರತರಾದರೆ ನಿಮ್ಮ ಮನೆಯ ಹಲವು ಹೊಟ್ಟೆ ತುಂಬುತ್ತದೆ.ಸುಖ ಜೀವನ ಸಾಗಿಸುತ್ತಾರೆ,ಅದೇ ನೀವು ಅಪಘಾತಕ್ಕೊಳಗಾದರೆ ನಿಮ್ಮಆರೋಗ್ಯವು ಹಾಳಾಗುತ್ತದೆ.ಅದಲ್ಲದೇ ಕುಟುಂಬವು ಆರ್ಥಿಕವಾಗಿ ಕಷ್ಟದಲ್ಲಾಗುತ್ತೆ.ಅತಿಯಾದ ವೇಗದ ಸವಾರನಿಗೆ ರಾತ್ರಿಯ ಹೊತ್ತು ರಸ್ತೆಗೆ ಅಡ್ಡಬರುವ ಪ್ರಾಣಿಯಿಂದ ಅಪಘಾತ ಸಂಭವಿಸುತ್ತೆ.ಇದರಲ್ಲಿ ಅದೆಷ್ಟೊ ಮಂದಿ ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ ಕೆಲವರು ಕೈ ಕಾಲು ದೇಹದ ಹಲವು ಪ್ರಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿ ಕೆಲಸ ನಿರ್ವಹಿಸಲಾಗದೆ ಇಂದೂ ಕೂಡ ಕಷ್ಟಕರವಾದ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಆರೋಗ್ಯ ನಮ್ಮ ಉತ್ತಮ ಜೀವನಕ್ಕೆ ನಾವೇ ಹೊಣೆ.
ಇನ್ನಾದರೂ ನನ್ನ ಆತ್ಮೀಯ ಶ್ರಮಿಕ ವರ್ಗವು ರಾತ್ರಿ ಉಪಹಾರ ಸೇವಿಸಿ ಆದಷ್ಟು ಬೇಗ ನಿದ್ರಿಸುವುದು ಉತ್ತಮ. ಹಾಗೂ ಓವರ್ಸ್ಪೀಡ್ ಕಡಿಮೆ ಮಾಡಿ ನಮ್ಮ ಹಾಗೂ ಎದುರು ಬರುವ ಸವಾರನ ಹಿತ ಕಾಪಾಡುವುದು ಸಹ ನಮ್ಮ ಹೊಣೆಯಾಗಿದೆ.
ದಕ್ಕೆ ಹಾಗೂ ಮಾರುಕಟ್ಟೆಯ ಸಂಘಟನೆಗಳು,ಅದರ ಪದಾಧಿಕಾರಿ ಬಳಗದೊಂದಿಗೆ ವಿನಂತಿಸುವುದೇನೆಂದರೆ ಮೇಲೆ ತಿಳಿಸಿದ ವಿಷಯಗಳ ಆಧಾರಿಸಿ ಇಂಥಹ ಅಪಘಾತಕ್ಕೊಳಗಾದ ಶ್ರಮಿಕ ದುಡಿಮೆಯ ವರ್ಗದ ಕಷ್ಟಕಾರ್ಪಣ್ಯಗಳಿಗೆ ಅವರ ಆರೋಗ್ಯ ಸಂಬಂಧಿಸಿದ ಆಸ್ಪತ್ರೆಯ ಖರ್ಚುವೆಚ್ಚಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಸ್ಪಂದಿಸುವುದು ಹಾಗೂ ಕುಟುಂಬಕ್ಕೆ ಆಧಾರವಾಗುವ ಮಾರ್ಗೋಪಾಯಗಳನ್ನು ಕಂಡುಹಿಡಿದು ಸ್ಪಂದಿಸುವ ಉದಾತ್ತವಾದ ತೀರ್ಮಾನಗಳನ್ನು ಕೈಗೆತ್ತಿಗೊಳ್ಳಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
ಘಟನೆಗಳು ಅಚಾನಕ್ಕಾಗಿರಬಹುದು,ಆದರೆ ಮುಂಜಾಗೃತೆ ನಮ್ಮ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ನೀಡುತ್ತಿದ್ದೇನೆ…ಲೋಕ ಸಂರಕ್ಷಕನಾದ ದೇವನು ನಮ್ಮೆಲ್ಲರನ್ನು ಆಪತ್ತು ವಿಪತ್ತುಗಳಿಂದ ಅಪಘಾತಗಳಿಂದ ಸಂರಕ್ಷಿಸಲಿ.
✍️ಶಮೀರ್ ಟಿಪ್ಪುನಗರ