janadhvani

Kannada Online News Paper

ಜೆಡಿಎಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾನು ಆಯ್ಕೆ

ನಿಜವಾದ ಜೆಡಿಎಸ್ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಕೆ.ನಾನು, ‘ಗಾಂಧೀಜಿಯವರ ತತ್ವಗಳನ್ನು ಬಿಟ್ಟುಕೊಡದೇ ಅದೇ ಜಾತ್ಯಾತೀತ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ನಮ್ಮ ನೇತೃತ್ವದ ಪಕ್ಷವೇ ನಿಜವಾದ ಜನತಾದಳ.

ಬೆಂಗಳೂರು: ಜೆಡಿಎಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾನು ಆಯ್ಕೆಯಾಗಿದ್ದಾರೆ. ಕಾಡುಗೊಂಡನಹಳ್ಳಿಯ ಖಾಸಗಿ ಸಭಾಭವನದಲ್ಲಿ ನಡೆದ ಜೆಡಿಎಸ್‌ ರಾಷ್ಟ್ರೀಯ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದು ಉಚ್ಛಾಟಿತ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಇಬ್ರಾಹಿಂ, ‘ಜಾತ್ಯತೀತ ಸಿದ್ಧಾಂತದ ಮೇಲೆ ನಿಂತಿರುವ ಜೆಡಿಎಸ್‌, ಮಹಾತ್ಮಾ ಗಾಂಧೀಜಿ ಅವರ ತತ್ವಗಳನ್ನು ಪಾಲಿಸುವ ಪಕ್ಷವಾಗಿದೆ. ಆದರೆ ಗಾಂಧೀಜಿ ಅವರನ್ನು ವಿರೋಧಿಸುವವರೊಂದಿಗೆ ಜೆಡಿಎಸ್‌ ಸಖ್ಯ ಬೆಳೆಸುವುದು ಸರಿಯೇ’ ಎಂದು ಉಚ್ಚಾಟಿತ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ‍ಪ್ರಶ್ನಿಸಿದ್ದಾರೆ.

‘ನಾನು ಕಳೆದ ಅನೇಕ ವರ್ಷಗಳಿಂದ ಜನತಾದಳದಲ್ಲಿ ಇದ್ದೇನೆ. ಹಿಂದಿನ ಸಭೆಗಳಲ್ಲಿ ಪಕ್ಷದ ವರಿಷ್ಠ ದೇವೇಗೌಡ ಅವರೊಂದಿಗೆ ನಾನು ಭಾಗಿಯಾಗಿದ್ದೇನೆ. ನನ್ನನ್ನು ಜನತಾದಳದಿಂದ ಉಚ್ಚಾಟಿಸಿದ ದೇವೇಗೌಡರೇ ಜೆಡಿಎಸ್‌ ಸದ್ಯ ಸಖ್ಯ ಬೆಳೆಸಿರುವ ಕ್ರಮ ಸರಿಯೇ ಎಂಬುದಕ್ಕೆ ಉತ್ತರಿಸಬೇಕು’ ಎಂದಿದ್ದಾರೆ.

‘ನೀವು ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದರೆ ಇದನ್ನು ಪ್ರಶ್ನಿಸುವ ಅಧಿಕಾರ ಪಕ್ಷದಲ್ಲಿರುವ ನಾನೂ ಸೇರಿದಂತೆ ಇತರರಿಗೂ ಇದೆ. ಗಾಂಧೀಜಿಯವರ ತತ್ವಗಳನ್ನು ಬಲಿಕೊಟ್ಟು ಬರೀ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಎಚ್.ಡಿ.ದೇವೇಗೌಡರ ವರ್ತನೆಯನ್ನು ಇಂದಿನ ಸಭೆಯಲ್ಲಿ ನಾವು ಖಂಡಿಸುತ್ತೇವೆ’ ಎಂದು ಇಬ್ರಾಹಿಂ ಗುಡುಗಿದ್ದಾರೆ.

ನಿಜವಾದ ಜೆಡಿಎಸ್ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿದ ಸಿ.ಕೆ.ನಾನು, ‘ಗಾಂಧೀಜಿಯವರ ತತ್ವಗಳನ್ನು ಬಿಟ್ಟುಕೊಡದೇ ಅದೇ ಜಾತ್ಯಾತೀತ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ನಮ್ಮ ನೇತೃತ್ವದ ಪಕ್ಷವೇ ನಿಜವಾದ ಜನತಾದಳ. ಜಾತ್ಯಾತೀತ ಗುಣವೇ ನಮ್ಮ‌ ಪಕ್ಷದ ಆತ್ಮವಿದ್ದಂತೆ. ಹೀಗಾಗಿ ಯಾರು ಏನೇ ಹೇಳಲಿ ನಾವು ಪಕ್ಷವನ್ನು ಬೇರೆಯವರಿಗೆ ಅಡ ಇಡುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ’ ಎಂದಿದ್ದಾರೆ.

error: Content is protected !! Not allowed copy content from janadhvani.com