janadhvani

Kannada Online News Paper

ಕ್ರಿಮಿನಲ್ ಕೇಸ್ ಇರುವ ವ್ಯಕ್ತಿಯ ಪಾಸ್‌ಪೋರ್ಟ್ ನವೀಕರಣಕ್ಕೆ ಅವಕಾಶವಿಲ್ಲ

ಈ ಹಿಂದೆ ಹೈಕೋರ್ಟ್‌ನ ಮೂರು ಪ್ರತ್ಯೇಕ ಏಕಸದಸ್ಯಪೀಠಗಳು, ಕ್ರಿಮಿನಲ್ ಪ್ರಕರಣ ಬಾಕಿ ಇರುವುದು ಪಾಸ್‌ಪೋರ್ಟ್ ನವೀಕರಣಕ್ಕೆ ಅಡ್ಡಿಯಲ್ಲ ಎಂದು ಆದೇಶಿಸಿದ್ದವು.

ಬೆಂಗಳೂರು: ಪಾಸ್‌ಪೋರ್ಟ್ ನವೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಕ್ರಿಮಿನಲ್ ಕೇಸ್ ಬಾಕಿ ಇದ್ದರೆ ಪಾಸ್‌ಪೋರ್ಟ್ ನವೀಕರಣ ಸಾಧ್ಯವಿಲ್ಲ ಎಂದಿದೆ. ತಾಯಿಯ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿದ್ದ ತುಮಕೂರಿನ ವ್ಯಕ್ತಿಯ ಪಾಸ್‌ಪೋರ್ಟ್ ನವೀಕರಣಕ್ಕೆ ಅವಕಾಶ ನೀಡಲಾಗದು ಎಂದು ಕೋರ್ಟ್ ಆದೇಶಿಸಿದೆ.

ಪಾಸ್‌ಪೋರ್ಟ್ ನವೀಕರಣವನ್ನು ನಿರಾಕರಿಸಿ, ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಹಿಂಬರಹವನ್ನು ಕೋರ್ಟ್‌ ಆದೇಶದಲ್ಲಿ ಎತ್ತಿಹಿಡಿದಿದೆ. ಸೆಷನ್ಸ್ ಕೋರ್ಟ್ ಮುಂದೆ ಕ್ರಿಮಿನಲ್ ಪ್ರಕರಣ ಬಾಕಿ ಇರುವ ಸಂತೋಷ್ ಬೀಜಾಡಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

“ಪಾಸ್‌ಪೋರ್ಟ್ ಕಾಯಿದೆಯ ಯಾವುದೇ ನಿಯಮಗಳಲ್ಲಿ ಪಾಸ್‌ಪೋರ್ಟ್ ವಿತರಣೆ/ ನವೀಕರಣಕ್ಕೆ ಬಾಕಿ ಇರುವ ಕ್ರಿಮಿನಲ್ ಕೇಸ್ ಅನ್ನು ಅಲಕ್ಷಿಸುವ ಯಾವುದೇ ಪ್ರತ್ಯೇಕ ಮಾನದಂಡವಿಲ್ಲ”. ಈ ಹಿಂದೆ ಹೈಕೋರ್ಟ್‌ನ ಮೂರು ಪ್ರತ್ಯೇಕ ಏಕಸದಸ್ಯಪೀಠಗಳು, ಕ್ರಿಮಿನಲ್ ಪ್ರಕರಣ ಬಾಕಿ ಇರುವುದು ಪಾಸ್‌ಪೋರ್ಟ್ ನವೀಕರಣಕ್ಕೆ ಅಡ್ಡಿಯಲ್ಲ ಎಂದು ಆದೇಶಿಸಿದ್ದವು. ಆದರೆ ಇದೀಗ ಕೋರ್ಟ್ ಕ್ರಿಮಿನಲ್ ಕೇಸ್ ಇರುವುದು ಅಡ್ಡಿ ಎಂದು ಹೇಳುವ ಮೂಲಕ ಭಿನ್ನವಾದ ತೀರ್ಪು ನೀಡಿದೆ.

error: Content is protected !! Not allowed copy content from janadhvani.com