janadhvani

Kannada Online News Paper

ಭಾರತದ ಅತ್ಯಂತ ಸುರಕ್ಷಿತ ನಗರ ಎಂಬ ಖ್ಯಾತಿ ಕೊಲ್ಕತ್ತಾಕ್ಕೆ- ಸೈಬರ್ ಕ್ರೈಂನಲ್ಲಿ ಬೆಂಗಳೂರು ಟಾಪ್‌

20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 19 ನಗರಗಳಲ್ಲಿನ ಅಪರಾಧ ಪ್ರಕರಣಗಳನ್ನು ಪರಿಗಣಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಹೊಸದಿಲ್ಲಿ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತ ನಗರವು ಸತತ ಮೂರನೇ ವರ್ಷವೂ ಭಾರತದ ಅತ್ಯಂತ ಸುರಕ್ಷಿತ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಮಹಾನಗರಗಳಲ್ಲಿನ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ವರದಿಯಾಗುವ ಸರಾಸರಿ ಅಪರಾಧ ಪ್ರಕರಣಗಳನ್ನು ಪರಿಗಣಿಸಿ ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (ಎನ್‌ಸಿಆರ್‌ಬಿ) ಈ ವರದಿ ಪ್ರಕಟಿಸಿದೆ.

20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 19 ನಗರಗಳಲ್ಲಿನ ಅಪರಾಧ ಪ್ರಕರಣಗಳನ್ನು ಪರಿಗಣಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಂತೆ, ಸುರಕ್ಷಿತ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ ಕೋಲ್ಕತ್ತದಲ್ಲಿ 2022ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 86.5 ಪ್ರಕರಣಗಳು ವರದಿಯಾಗಿವೆ. ಪುಣೆ (280.7) ಮತ್ತು ಹೈದರಾಬಾದ್ (299.2) ನಗರಗಳು ನಂತರದ ಸ್ಥಾನಗಳಲ್ಲಿವೆ.

ಎನ್‌ಸಿಆರ್‌ಬಿ ವರದಿ ಪ್ರಕಾರ, ಕೋಲ್ಕತ್ತದಲ್ಲಿ ವರದಿಯಾಗುವ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿವೆ. ಇಲ್ಲಿ 2021ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಸರಾಸರಿ 103.4 ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ ಸರಾಸರಿ 129.5 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಪುಣೆ ಹಾಗೂ ಹೈದರಾಬಾದ್ ನಗರಗಳಲ್ಲಿ ಕ್ರಮವಾಗಿ 256.8 ಮತ್ತು 259.9 ಪ್ರಕರಣಗಳು ವರದಿಯಾಗಿದ್ದವು.

ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲಾ ಮೆಟ್ರೋ ನಗರಗಳ ನಡುವೆ ಅತ್ಯಧಿಕ ಸೈಬರ್ ಅಪರಾಧ ಪ್ರಕರಣಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ಸೈಬರ್ ಕ್ರೈಂನಲ್ಲಿ ಬೆಂಗಳೂರು ಟಾಪ್‌ನಲ್ಲಿದೆ. ಆದರೆ ಈ ಬಾರಿ 19 ಮೆಟ್ರೋ ನಗರಗಳ ಒಟ್ಟಾರೆ ಪ್ರಕರಣಗಳಲ್ಲಿ ನಾಲ್ಕನೇ ಮೂರರಷ್ಟು ಬೆಂಗಳೂರಿನಲ್ಲಿಯೇ ವರದಿಯಾಗಿದೆ.1,729 ಪ್ರಕರಣಗಳೊಂದಿಗೆ ಕೊಚ್ಚಿ ಎರಡನೇ ಸ್ಥಾನದಲ್ಲಿದೆ. ಮುಂಬಯಿ ಹಾಗೂ ದಿಲ್ಲಿ ನಂತರದ ಸ್ಥಾನಗಳಲ್ಲಿವೆ.ದಕ್ಷಿಣ ಭಾರತದ ಮತ್ತೊಂದು ಐಟಿ ಹಬ್ ಹೈದರಾಬಾದ್‌ನಲ್ಲಿ ಕೇವಲ 282 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ.

20 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ 19 ನಗರಗಳ ನಡುವಿನ ಹೋಲಿಕೆ ಬಳಿಕ ಈ ಶ್ರೇಯಾಂಕ ನೀಡಲಾಗಿದೆ. ಆದರೆ ಕೋಲ್ಕತಾದಲ್ಲಿ ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ಏರಿಕೆಯಾಗಿದೆ. 2021ರಲ್ಲಿ 1783 ಪ್ರಕರಣಗಳಿದ್ದರೆ, 2022ರಲ್ಲಿ 1890 ಪ್ರಕರಣಗಳು ದಾಖಲಾಗಿದ್ದವು.

error: Content is protected !! Not allowed copy content from janadhvani.com