ಹೊಸದಿಲ್ಲಿ: ಭಾರತೀಯರಿಗೆ ಡಿ.1 ರಿಂದ 30 ದಿನಗಳವರೆಗೆ ವೀಸಾ ಮುಕ್ತ ಪ್ರಯಾಣಕ್ಕೆ ಮಲೇಷ್ಯಾ ಸರಕಾರವು ಅವಕಾಶ ನೀಡಿದೆ. ಈ ಅವಕಾಶವನ್ನು ಚೀನಾ ಪ್ರಜೆಗಳಿಗೂ ಒದಗಿಸುತ್ತಿದ್ದೇವೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಘೋಷಿಸಿದ್ದಾರೆ. ಚೀನೀ ಮತ್ತು ಭಾರತೀಯ ನಾಗರಿಕರು ಮಲೇಷ್ಯಾದಲ್ಲಿ 30 ದಿನಗಳವರೆಗೆ ವೀಸಾ ಮುಕ್ತವಾಗಿ ಉಳಿಯಬಹುದು.
ಇತ್ತೀಚೆಗೆ ಥೈಲ್ಯಾಂಡ್ ಹಾಗೂ ಶ್ರೀಲಂಕಾ ಕೂಡ ಭಾರತೀಯ ಪ್ರಯಾಣಿಕರಿಗೆ ವೀಸಾ ಮುಕ್ತ ಭೇಟಿಗೆ ಅವಕಾಶ ನೀಡುವ ಘೋಷಣೆ ಮಾಡಿದ್ದವು. ಇದೇ ಸಾಲಿಗೆ ಇದೀಗ ಮಲೇಷ್ಯಾ ಕೂಡ ಸೇರ್ಪಡೆಯಾಗಿದೆ. “ಭದ್ರತಾ ತಪಾಸಣೆಯನ್ನು ಕಡ್ಡಾಯವಾಗಿ ನಡೆಸಲಾಗುವುದು. ಅಪರಾಧ ಹಿನ್ನೆಲೆಯುಳ್ಳವರಿಗೆ ಮಾತ್ರವೇ ವೀಸಾ ನಿರಾಕರಿಸಲಾಗುವುದು,” ಎಂದು ಮಲೇಷ್ಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚೀನಾದಿಂದಲೂ ಮಲೇಷ್ಯಾ ಪ್ರಜೆಗಳಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ
ಎರಡು ದಿನಗಳ ಮುನ್ನ ಅಂದರೆ ಶುಕ್ರವಾರ ಮಲೇಷ್ಯಾ ಪ್ರಜೆಗಳಿಗೆ 15 ದಿನಗಳ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ನೀಡುವ ಘೋಷಣೆಯನ್ನು ಚೀನಾ ವಿದೇಶಾಂಗ ಸಚಿವಾಲಯ ಮಾಡಿತ್ತು. ಚೀನಾ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಭಯ ದೇಶಗಳು ವೀಸಾ ಮುಕ್ತ ಪ್ರಯಾಣದ ಘೋಷಣೆ ಮಾಡಿವೆ. ಮಲೇಷ್ಯಾ ಅಲ್ಲದೆ ಇತರ ಐದು ದೇಶಗಳ ನಾಗರಿಕರಿಗೂ ವೀಸಾ ಇಲ್ಲದೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವುದಾಗಿ ಚೀನಾ ತಿಳಿಸಿತ್ತು.
ಇನ್ನು 2022ರಲ್ಲಿ ಮಲೇಷ್ಯಾ ಜತೆಗೆ ವ್ಯಾಪಾರ ನಡೆಸಿದ ಪಾಲುದಾರಿಕೆ ರಾಷ್ಟ್ರಗಳ ಪೈಕಿ ಭಾರತಕ್ಕೆ 11ನೇ ಸ್ಥಾನ ಲಭಿಸಿದೆ. 2021ರ ಹೋಲಿಕೆಯಲ್ಲಿ ವ್ಯಾಪಾರ ವಹಿವಾಟು ಶೇ. 23.6ರಷ್ಟು ವ್ಯಾಪಾರ ವೃದ್ಧಿಯಾಗಿದೆ. ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಮಲೇಷ್ಯಾ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.ನೀವು ಭಾರತದಿಂದ ಕೌಲಾಲಂಪುರ್‌ಗೆ ಹೋಗುವುದಾದರೆ ಚೆನ್ನೈ-ಕೋಲ್ಕತ್ತಾದಂತಹ ನಗರಗಳಿಂದ ವಿಮಾನದ ವೆಚ್ಚ ಸುಮಾರು 12,000 ರೂ. ಇದೆ.
ವಿಯೆಟ್ನಾಂ ಕೂಡ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ
ಆರು ದಿನಗಳ ಹಿಂದೆ ವಿಯೆಟ್ನಾಂ ಭಾರತದ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶವನ್ನು ಪ್ರಾರಂಭಿಸಬಹುದು ಎಂಬ ಸುದ್ದಿ ಹೊರಬಿದ್ದಿತ್ತು. ಪ್ರಸ್ತುತ ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಡೆನ್ಮಾರ್ಕ್, ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ನಂತಹ ದೇಶಗಳ ನಾಗರಿಕರು ವೀಸಾ ಇಲ್ಲದೆ ವಿಯೆಟ್ನಾಂಗೆ ಪ್ರವೇಶಿಸಬಹುದಾಗಿದ್ದು, ಇದು ಭಾರತೀಯರಿಗೂ ಲಭ್ಯವಾಗುವ ಸಾಧ್ಯತೆ ಇದೆ.
ವಿಯೆಟ್ನಾಂ ಆಗಸ್ಟ್ ಮಧ್ಯದಿಂದ ಎಲ್ಲಾ ರಾಷ್ಟ್ರಗಳ ಜನರಿಗೆ ಇ-ವೀಸಾಗಳನ್ನು ನೀಡಲು ಪ್ರಾರಂಭಿಸಿದೆ. ಈ ವರ್ಷದ ಮೊದಲ ಹತ್ತು ತಿಂಗಳಲ್ಲಿ ಸುಮಾರು 1 ಕೋಟಿ ಅಂತರಾಷ್ಟ್ರೀಯ ಸಂದರ್ಶಕರು ವಿಯೆಟ್ನಾಂಗೆ ಬಂದಿದ್ದಾರೆ. ಇದು 2022ರಲ್ಲಿ ಇದೇ ಅವಧಿಯಲ್ಲಿ ದೇಶಕ್ಕೆ ಭೇಟಿ ನೀಡಿದ್ದ ಜನರಿಗೆ ಹೋಲಿಸಿದರೆ 4.6 ಪಟ್ಟು ಹೆಚ್ಚು ಎಂಬುದು ಗಮನಾರ್ಹ.
ಥೈಲ್ಯಾಂಡ್‌ಗೆ ಮೇ 10, 2024ರವರೆಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ
ಮಲೇಷ್ಯಾಗೂ ಮೊದಲು ತನ್ನ ಆರ್ಥಿಕತೆ ವೃದ್ಧಿಸಲು ಥೈಲ್ಯಾಂಡ್ ಕೂಡ ಭಾರತ ಹಾಗೂ ತೈವಾನ್ ನಾಗರಿಕರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿತ್ತು. ಭಾರತೀಯರು ನವೆಂಬರ್ 10, 2023 ರಿಂದ ಮೇ 10, 2024 ರವರೆಗೆ ವೀಸಾ ಇಲ್ಲದೆ ಥಾಯ್ಲೆಂಡ್‌ಗೆ ಭೇಟಿ ನೀಡಬಹುದು ಮತ್ತು ಅಲ್ಲಿ 30 ದಿನಗಳವರೆಗೆ ಉಳಿಯಬಹುದು. ಪ್ರವಾಸೋದ್ಯಮ ಋತುವಿನ ಮುಂಚೆಯೇ ತೆಗೆದುಕೊಂಡ ಈ ನಿರ್ಧಾರದಿಂದ ಥೈಲ್ಯಾಂಡ್ ಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಹೆಚ್ಚುವರಿ 14 ಲಕ್ಷ ಪ್ರವಾಸಿಗರು ದೇಶಕ್ಕೆ ಬರುವ ನಿರೀಕ್ಷೆ ಇದೆ ಎಂದು ಅಲ್ಲಿನ ಸರ್ಕಾರದ ವಕ್ತಾರ ಚೈ ವಾಚರೋಂಕೆ ಹೇಳಿದ್ದಾರೆ. ಇದರಿಂದ 1.5 ಬಿಲಿಯನ್ ಡಾಲರ್ ಹೆಚ್ಚುವರಿ ಆದಾಯ ದೇಶಕ್ಕೆ ಬರುವುದಾಗಿ ಅಂದಾಜಿಸಲಾಗಿದೆ.