janadhvani

Kannada Online News Paper

ಯುಪಿ ಮಾದರಿ ಸ್ವಂತಿಕೆರಹಿತರಿಗೆ ಝಮೀರ್ ಬಗ್ಗೆ ಪ್ರಸ್ತಾಪಿಸುವ ನೈತಿಕತೆ ಇಲ್ಲ- ಬಿಜೆಪಿ ಅಧ್ಯಕ್ಷರಿಗೆ ತಿರುಗೇಟು

ರಾಜಕೀಯದ ' ಅಲ್ಪ ' ಮೈಲೇಜ್ ಗಾಗಿ ದ.ಕ.ಜಿಲ್ಲೆಯಲ್ಲಿ ಆಡಿದ ಬೀದಿ ಮಾತನ್ನು ಸಾದ್ಯವಾದರೆ ಬೆಳಗಾವಿಯಲ್ಲಿ ಹೇಳಿ ನೋಡಲಿ

ಮಂಗಳೂರು: ರಾಜ್ಯದ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ಸಂದರ್ಬದಲ್ಲಿ ವಕ್ಫ್ ಸಚಿವ ಝಮೀರ್ ಅಹಮದ್ ಖಾನ್ ವಿರುದ್ಧ ಹೇಳಿಕೆ ನೀಡಿ,ಬೆಳಗಾವಿ ಅಧಿವೇಶನದಲ್ಲಿ ಝಮೀರ್ ಅವರನ್ನು ಸಭೆಗೆ ಪ್ರವೇಶಿಸಲು ಬಿಡುವುದಿಲ್ಲ,ಅವರನ್ನು ರಸ್ತೆಯಲ್ಲಿ ಓಡಾಡಲು ಬಿಟ್ಟಿರುವುದೇ ನಮ್ಮ ಅಪರಾಧ ಎಂಬಿತ್ಯಾದಿಯಾಗಿ ಬೀದಿ ಭಾಷೆ ನುಡಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು, ಕರಾವಳಿ ಜಿಲ್ಲೆಗೆ ಭೇಟಿ ನೀಡುವ ಇಂತಹ ನಾಯಕರಿಗೆ ಈ ಜಿಲ್ಲೆಗೆ ತಲುಪಿದ ತಕ್ಷಣ ಮುಸ್ಲಿಮ್ ವಿರೋಧಿ ಸಂಕೇತ,ವ್ಯಕ್ತಿ ಗಳ ನೆನಪು ಸೃಷ್ಟಿಯಾಗಿ ಮತೀಯ ವಿದ್ವೇಶವನ್ನು ಕರಾವಳಿ ಪ್ರದೇಶದಿಂದಲೇ ಇಡೀ ರಾಜ್ಯ ದೇಶಕ್ಕೆ ಹರಿಯ ಬಿಡುವುದು ರಕ್ತ ಗತವಾಗಿದೆ!.
ಸರಕಾರ ರಚನೆಯ ನಂತರ, ಈ ರಾಜ್ಯದ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದೆ,ಜನರ ಪ್ರಶ್ನಿತ ಹಕ್ಕನ್ನು ಕಸಿದು ಪ್ರಜಾ ಪ್ರಭುತ್ವ ವಿರೋಧಿ ನಿಲುವು ಹೊಂದಿದ, ಈ ರಾಜ್ಯವನ್ನು ಬುಲ್ಡೋಝರ್ ಯುಪಿ ಮಾದರಿ ಮಾಡುತ್ತೇವೆ ಎಂದ ,ರಾಜ್ಯದ ಅಲ್ಪ ಸಂಖ್ಯಾತರ ಮೀಸಲಾತಿಯನ್ನು ತೆಗೆದು ಇತರರಿಗೆ ನೀಡುತ್ತೇವೆ ಎಂದ , ಉರಿಗೌಡ ನಂಜೇಗೌಡ ಎಂಬ ಕಪೋಲ ಕಲ್ಪಿತ ಪಾತ್ರಗಳನ್ನು ಬಳಸಿ ದಕ್ಷಿಣ ಕರ್ನಾಟಕದಲ್ಲಿ ಮತೀಯ ವಿದ್ವೇಶ ಸೃಷ್ಟಿಸಿ ಒಕ್ಕಲಿಗ ಅಲ್ಪ ಸಂಖ್ಯಾತರ ಮದ್ಯೆ ಹಗೆತನ ಸಾಧಿಸಲು ಹೊರಟ, ಕರ್ನಾಟಕ ರಾಜ್ಯದ ರೈತರ ನೈಜ ಸಮಸ್ಯೆ ಯನ್ನು ಅರಿಯದ ಮತ್ತು ಯಾವುದೇ ಸ್ವಂತಿಕೆ ಇಲ್ಲದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರರಿಗೆ , ತನ್ನ ಸ್ವಂತ ಶ್ರಮದಲ್ಲಿ ರಾಜಕೀಯವಾಗಿ ಬೆಳೆದು ಬಂದ ಕರ್ನಾಟಕ ರಾಜ್ಯದ ಅಪ್ಪಟ ಮತೇತರ ನಾಯಕ, ರಾಜ್ಯದ ವಕ್ಫ್ ಸಚಿವ ಝಮೀರ್ ಅಹಮದ್ ಖಾನ್ ಬಗ್ಗೆ ಪ್ರಸ್ತಾಪಿಸುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿ ಅಧಿವೇಶನ ಈ ರಾಜ್ಯದ ಏಳು ಕೋಟಿ ಜನರ ಶಾಸನ ಹಕ್ಕು, ಈ ರಾಜ್ಯದ ಚುನಾಯಿತ ಪ್ರತಿನಿಧಿ, ವಕ್ಫ್ ಮತ್ತು ವಸತಿ ಸಚಿವರನ್ನು ಅಧಿವೇಶನದಲ್ಲಿ ಭಾಗವಹಿಸಲು ಈ ರಾಜ್ಯದ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತರು ಬೆಳಗಾವಿಗೆ ಮೆರವಣಿಗೆಯಲ್ಲಿ ತರಲಿದ್ದೇವೆ, ವಿಜಯೇಂದ್ರರು ತಾನು ರಾಜಕೀಯದ ‘ ಅಲ್ಪ ‘ ಮೈಲೇಜ್ ಗಾಗಿ ದ.ಕ.ಜಿಲ್ಲೆಯಲ್ಲಿ ಆಡಿದ ಬೀದಿ ಮಾತನ್ನು ಸಾದ್ಯವಾದರೆ ಬೆಳಗಾವಿಯಲ್ಲಿ ಹೇಳಿ ನೋಡಲಿ, ಆಗ ಬೆಳಗಾವಿ ಅಧಿವೇಶನಕ್ಕೆ ಪ್ರವೇಶಿಸಲು ಯಾರಿಗೆ ಕಷ್ಟವಾಗಬಹುದೆಂದು ಬೆಳಗಾವಿಯ ಜನರು ಬಿ.ವೈ. ವಿಜಯೇಂದ್ರರಿಗೆ ತೋರಿಸಿ ಕೊಡಲಿದ್ದಾರೆ ಎಂದು ಕೆ.ಅಶ್ರಫ್ (ಮಾಜಿ ಮೇಯರ್) ಎಚ್ಚರಿಕೆ ನೀಡಿದ್ದಾರೆ.

error: Content is protected !! Not allowed copy content from janadhvani.com