janadhvani

Kannada Online News Paper

ಗಾಯಗೊಂಡಿರುವ ಪ್ಯಾಲೆಸ್ತೀನ್ ಪ್ರಜೆಗಳನ್ನು ಹೊತ್ತ ಮೊದಲ ವಿಮಾನ ಯುಎಇಗೆ ಆಗಮನ

ಮೊದಲ ವಿಮಾನದಲ್ಲಿ 9 ಮಕ್ಕಳು, ಅವರ ಕುಟುಂಬಗಳು, ಗರ್ಭಿಣಿ ಮಹಿಳೆ ಮತ್ತು ಹಿರಿಯ ನಾಗರಿಕರು ಸೇರಿದಂತೆ 52 ಪ್ರಯಾಣಿಕರಿದ್ದರು.

ಅಬುಧಾಬಿ: ಇಸ್ರೇಲ್ ದಾಳಿಯಲ್ಲಿ ಗಾಯಗೊಂಡಿರುವ ಪ್ಯಾಲೆಸ್ತೀನ್ ಪ್ರಜೆಗಳನ್ನು ಹೊತ್ತ ಮೊದಲ ವಿಮಾನ ಯುಎಇಗೆ ಆಗಮಿಸಿದೆ. ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ವಿಮಾನ ನಿಲ್ದಾಣದಿಂದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು,ಚಿಕಿತ್ಸೆ ಆರಂಭವಾಗಿದೆ.

ಮೊದಲ ವಿಮಾನದಲ್ಲಿ 9 ಮಕ್ಕಳು, ಅವರ ಕುಟುಂಬಗಳು, ಗರ್ಭಿಣಿ ಮಹಿಳೆ ಮತ್ತು ಹಿರಿಯ ನಾಗರಿಕರು ಸೇರಿದಂತೆ 52 ಪ್ರಯಾಣಿಕರಿದ್ದರು. ಆರೋಗ್ಯ ಕಾರ್ಯಕರ್ತರು ಮತ್ತು ಯುಎಇಯ ಹಿರಿಯ ಅಧಿಕಾರಿಗಳು ವಿಮಾನದಲ್ಲಿ ಅವರ ಜೊತೆಗಿದ್ದರು. ಫಲಸ್ತೀನ್ ನಲ್ಲಿ ಗಾಯಗೊಂಡ ಮಕ್ಕಳು ಸೇರಿದಂತೆ ಸಾವಿರ ಜನರಿಗೆ ಯುಎಇಯಲ್ಲಿ ಚಿಕಿತ್ಸೆ ನೀಡುವ ನಿರ್ಧಾರದ ಭಾಗವಾಗಿ ಮೊದಲ ವಿಮಾನ ಆಗಮಿಸಿದೆ. ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು ಯುಎಇಯಲ್ಲಿ ಒಂದು ಸಾವಿರ ಕ್ಯಾನ್ಸರ್ ರೋಗಿಗಳಿಗೂ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಏತನ್ಮಧ್ಯೆ, ಇಸ್ರೇಲಿ ಸೇನೆಯು ಹಮಾಸ್ ಅಡಗುತಾಣವನ್ನು ಪತ್ತೆಹಚ್ಚುವ ನೆಪವೊಡ್ಡಿ ದಾಳಿ ನಡೆಸಿದ ಗಾಝಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಎರಡು ದಿನಗಳಲ್ಲಿ 24 ರೋಗಿಗಳು ಮೃತಪಟ್ಟಿದ್ದಾರೆ, ಗಾಝಾ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಯ ಪರಿಸ್ಥಿತಿಯನ್ನು ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್ ಖುದ್ರಾ ಬಹಿರಂಗಪಡಿಸಿದ್ದಾರೆ. ವಿದ್ಯುತ್ ನಿಲುಗಡೆಯಿಂದಾಗಿ ಪ್ರಮುಖ ವೈದ್ಯಕೀಯ ಉಪಕರಣಗಳು ಕಾರ್ಯನಿರ್ವಹಿಸದೆ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಲವಾರು ರೋಗಿಗಳ ಮರಣಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.

ಗಾಝಾದ ಅತಿ ದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ವಯಸ್ಕರು ಮತ್ತು ಏಳು ಮಕ್ಕಳು ಮೃತಪಟ್ಟಿದ್ದಾಗಿ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಿಸಿತ್ತು. ಜನರೇಟರ್‌ಗಳಲ್ಲಿ ಇಂಧನ ಖಾಲಿಯಾದಂತೆ, ಜೀವ ಸಂರಕ್ಷಕ ಉಪಕರಣಗಳು ನಿಷ್ಕ್ರಿಯಗೊಳ್ಳುವ ಕಾರಣ ಸಾಮೂಹಿಕವಾಗಿ ರೋಗಿಗಳು ಮರಣ ಹೊಂದುತ್ತಿದ್ದಾರೆ.

error: Content is protected !! Not allowed copy content from janadhvani.com