ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಅರ್ಧ ವಾರ್ಷಿಕ ದಾಟಿದೆ. ಇದು ವರೆಗೂ ಬಿಜೆಪಿಗೆ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿ ಉಳಿದಿತ್ತು. ಇದೀಗ ವಿಪಕ್ಷ ನಾಯಕನ ಆಯ್ಕೆಯಾಗಿದೆ. ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿದೆ. ಮಾಜಿ ಸಚಿವ ಆರ್ ಅಶೋಕ್‌ಗೆ ವಿಪಕ್ಷ ನಾಯಕನ ಜವಾಬ್ದಾರಿ ನೀಡಲಾಗಿದೆ.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಆಗಮಿಸಿದ್ದರು.
ಶಾಸಕರ ಅಭಿಪ್ರಾಯಗಳನ್ನು ಆಲಿಸಿದ ವೀಕ್ಷಕರು ವಿರೋಧದ ನಡುವೆಯೂ ವಿಪಕ್ಷ ನಾಯಕನಾಗಿ ಆರ್ ಅಶೋಕ್ ಅವರನ್ನು ನೇಮಿಸಿದ್ದಾರೆ. ಇನ್ನು ಇದೇ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆರ್ ಅಶೋಕ್ ಅವರು, ಪಕ್ಷ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಅದನ್ನು ಸರಿಯಾಗಿ ನಿಭಾಯಿಸುತ್ತೇನೆ.
ಪಕ್ಷದಲ್ಲಿ ಭಿನ್ನಮತ ಸ್ಫೋಟ!
ಯೋಧನಾದವನು ಓಡಿ ಹೋಗಲ್ಲ ಎನ್ನುವ ಮೂಲಕ ಯತ್ನಾಳ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮೊದಲಿನಿಂದ ಕೂಡ ಯತ್ನಾಳ್ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು, ಈಗ ಅದು ಕೈತಪ್ಪಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನ ದೈನ್ಯಂ, ನ ಪಲಾಯನಂ, ಒಬ್ಬ ಯೋಧ ಯಾವುದನ್ನೂ ದೂರಲು ಅಥವಾ ವಿಷಾದಿಸಲು ಸಾಧ್ಯವಿಲ್ಲ. ಅವನ ಜೀವನವು ಅಂತ್ಯವಿಲ್ಲದ ಸವಾಲು, ಮತ್ತು ಸವಾಲುಗಳು ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದಾಗಿರಲು ಸಾಧ್ಯವಿಲ್ಲ. ಸವಾಲುಗಳು ಸರಳವಾಗಿ ಸವಾಲುಗಳಾಗಿರುತ್ತವೆ” ಎಂದು ಹೇಳಿದ್ದಾರೆ.
ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆಯ ಸಂದರ್ಭದಲ್ಲೇ ಬಿಜೆಪಿಯ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಮತ್ತು ಅರವಿಂದ್ ಬೆಲ್ಲದ್ ಸಭೆಯಿಂದ ಹೊರ ನಡೆದಿದ್ದರು ಎಂದು ವರದಿಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾನತೆ ವ್ಯಕ್ತಪಡಿಸಿರುವ ಯತ್ನಾಳ್, ಕುಟುಂಬ ರಾಜಕಾರಣಕ್ಕೆ ತಲೆಬಾಗಲ್ಲ, ಪಕ್ಷ ಪ್ರಾದೇಶಿಕ ಸಮಾನತೆ ಕಡೆ ಗಮನಕೊಡಬೇಕು, ಉತ್ತರ ಕರ್ನಾಟಕ ನಾಯಕರಿಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಡಬೇಕು ಎಂದು ಹೇಳಿದ್ದರು. ಇದು ಮುಂದಿನ ದಿನಗಳಲ್ಲಿ ಪಕ್ಷದ ಒಗ್ಗಟ್ಟಿನಲ್ಲಿ ಬಿರುಕು ಹೆಚ್ಚಾಗುವ ಸಾಧ್ಯತೆ ಇದೆ.
ವಿಪಕ್ಷ ನಾಯಕನಾಗಿ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ ಬಿಜೆಪಿಯಲ್ಲಿನ ಆಂತರಿಕ ಬೇಗುದಿಯನ್ನು ಹೇಗೆ ಶಮನ ಮಾಡುತ್ತಾರೆ ಎನ್ನುವುದನ್ನು ನೋಡಬೇಕಿದೆ.
ಕಾಂಗ್ರೆಸ್ ವ್ಯಂಗ್ಯ
ಇದೀಗ ನೂತನ ವಿಪಕ್ಷ ನಾಯಕನ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಅಶೋಕ್ ಅವರ ಕಾಲೆಳೆದಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, “ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ!” ಅಂತ ಟೀಕಿಸಿದೆ.
ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನ ಅಂತ ಕಾಂಗ್ರೆಸ್ ಟೀಕಿಸಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ತಂದು ಕೂರಿಸಿದೆ ಬಿಜೆಪಿ! ಅಂತ ಟ್ವೀಟ್ ಮಾಡಿದೆ.
ವಿಪಕ್ಷ ನಾಯಕನ ಆಯ್ಕೆ ಹಿಂದೆ ಕುಮಾರಸ್ವಾಮಿ ನಿರ್ದೇಶನವಿದೆಯೇ?
ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ? ಅಂತ ಕಾಂಗ್ರೆಸ್ ಪ್ರಶ್ನಿಸಿದೆ. ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ ಅಂತ ಟ್ವೀಟ್‌ನಲ್ಲಿ ಕಾಂಗ್ರೆಸ್ ಬಿಜೆಪಿ ಕಾಲೆಳೆದಿದೆ.