janadhvani

Kannada Online News Paper

ಪ್ರಜಾಪ್ರಭುತ್ವ ವಿರುದ್ಧ ನಡವಳಿಕೆ : ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಲೇರಿದ ಕೇರಳ ಸರ್ಕಾರ

ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರಾಕರಿಸಿರುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋದ ಮೂರನೇ ರಾಜ್ಯವಾಗಿದೆ.

ನವದೆಹಲಿ: ಮಸೂದೆಗಳ ಮೂಲಕ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿರುವ ಕಲ್ಯಾಣ ಕ್ರಮಗಳಿಗೆ ಅಡ್ಡಿಯಾಗುವ ರೀತಿಯಲ್ಲಿ ವರ್ತಿಸುತ್ತಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ.

ರಾಜ್ಯ ಸರಕಾರವು ಅಂಗೀಕರಿಸಿದ ಎಂಟು ಮಸೂದೆಗಳ ಪೈಕಿ ಮೂರು ವಿಧೇಯಕಗಳು ಎರಡು ವರ್ಷಗಳಿಂದ ರಾಜ್ಯಪಾಲರ ಮುಂದೆ ಬಾಕಿ ಉಳಿದಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಯಲ್ಲಿ ರಾಜ್ಯಪಾಲರ ನಡವಳಿಕೆಯು ಕಾನೂನು ಮತ್ತು ಪ್ರಜಾಪ್ರಭುತ್ವಕ್ಕೆ ಮತ್ತು ನಮ್ಮ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಈ ನಡವಳಿಕೆಯು ಜನರ ಹಕ್ಕುಗಳ ಉಲ್ಲಂಘನೆಯಾಗಿದೆ.

ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಅನುಮೋದನೆಗಾಗಿ ಎಂಟು ಬಾಕಿ ಇರುವ ಮಸೂದೆಗಳಲ್ಲಿ ಎರಡು 2021ರ ವಿಶ್ವವಿದ್ಯಾಲಯ ಕಾನೂನುಗಳ ತಿದ್ದುಪಡಿ ಮಸೂದೆಗಳು (1 ನೇ ತಿದ್ದುಪಡಿ) ಮತ್ತು ವಿಶ್ವವಿದ್ಯಾಲಯ ಕಾನೂನುಗಳ ತಿದ್ದುಪಡಿ ಮಸೂದೆ (2 ನೇ ತಿದ್ದುಪಡಿ) ಇದೆ. ಇದಲ್ಲದೆ ಕೇರಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ 2022, 2022ರ ವಿಶ್ವವಿದ್ಯಾನಿಲಯ ಕಾನೂನುಗಳ ತಿದ್ದುಪಡಿ ಮಸೂದೆ, 2022ರ ಕೇರಳ ಲೋಕಾಯುಕ್ತ ತಿದ್ದುಪಡಿ ಮಸೂದೆ, 2022ರ ವಿಶ್ವವಿದ್ಯಾನಿಲಯ ಕಾನೂನುಗಳ ತಿದ್ದುಪಡಿ ಮಸೂದೆ ಮತ್ತು 2021ರ ಸಾರ್ವಜನಿಕ ಆರೋಗ್ಯ ಮಸೂದೆ ಸೇರಿದೆ.

ಕೇರಳ, ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡಲು ನಿರಾಕರಿಸಿರುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋದ ಮೂರನೇ ರಾಜ್ಯವಾಗಿದೆ. ಈ ಮೊದಲು ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳು ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು.

ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲ ಆರಿಫ್ ಖಾನ್ ನಿರಾಕರಿಸಿದ್ದರಿಂದ ಸುಪ್ರೀಂಕೋರ್ಟ್‌ ಮೊರೆ ಹೋಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಇದೀಗ ಕೇರಳ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಮಯಕ್ಕೆ ಸರಿಯಾಗಿ ಅನುಮೋದನೆ ನೀಡುವಂತೆ ರಾಜ್ಯಪಾಲ ಆರಿಫ್‌ ಮುಹಮ್ಮದ್‌ ಖಾನ್‌ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿದೆ.

ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಮಯ ಮಿತಿಯೊಳಗೆ ಅಂಕಿತ ನೀಡುವುದು ರಾಜ್ಯಪಾಲರ ಕರ್ತವ್ಯ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಜನರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿ ಅವರು ಅಂಕಿತ ನೀಡಬೇಕಿದ್ದರೂ ರಾಜ್ಯಪಾಲರು ತಮ್ಮ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಕೇರಳ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com