ದಮ್ಮಾಮ್: ಸೌದಿ ಆಂತರಿಕ ಸಚಿವಾಲಯದ ಅಬ್ಶಿರ್ ಸೇವಾ ವೇದಿಕೆಗೆ ಹೆಚ್ಚಿನ ಸೇವೆಗಳ ಸೇರ್ಪಡೆ. ಕುಟುಂಬಗಳ ನಡುವೆ ವಾಹನ ಮಾಲೀಕತ್ವದ ವರ್ಗಾವಣೆ ಮತ್ತು ನೋಂದಣಿ ಸೇರಿದಂತೆ ಎಂಟು ಹೊಸ ಸೇವೆಗಳನ್ನು ಸೇರಿಸಲಾಗಿದೆ.
ಹೊಸ ಸೇವೆಗಳ ಪ್ರಕಟಣೆಯನ್ನು ಸಾರ್ವಜನಿಕ ಭದ್ರತಾ ವಿಭಾಗದ ಮುಖ್ಯಸ್ಥ ಜನರಲ್ ಮುಹಮ್ಮದ್ ಅಲ್- ಬಸ್ಸಾಮಿ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ಉಸಾಮ್ ಅಲ್ವಕೀತ್ ಉದ್ಘಾಟಿಸಿದರು.
ಕುಟುಂಬದ ಸದಸ್ಯರ ನಡುವೆ ವಾಹನ ಮಾಲೀಕತ್ವದ ವರ್ಗಾವಣೆ, ಕಂಪನಿ ಮಾಲೀಕತ್ವದ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ, ಶೋರೂಮ್‌ಗಳಿಂದ ವಾಹನ ನೋಂದಣಿಗೆ ಅನುಮತಿ, ಬೈಕ್ ಮಾಲೀಕತ್ವ ಮತ್ತು ನೋಂದಣಿ ವರ್ಗಾವಣೆ, ಮುಂಗಡ ಚಾಲನಾ ಪರವಾನಗಿ, ವಾಹನ ನೋಂದಣಿ ನವೀಕರಣದಂತಹ ಸೇವೆಗಳನ್ನು ಹೊಸದಾಗಿ ಲಭ್ಯಗೊಳಿಸಲಾಗಿದೆ.
ಸ್ಥಳೀಯರು ಮತ್ತು ವಿದೇಶಿಯರಿಗೆ ಅಬ್ಶಿರ್ ಮೂಲಕ 350 ಕ್ಕೂ ಹೆಚ್ಚು ಸೇವೆಗಳನ್ನು ಲಭ್ಯಗೊಳಿಸಲಾಗುತ್ತದೆ. ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡದೆ, ಆನ್ಲೈನ್ ಮೂಲಕ ಅದನ್ನು ಪೂರ್ಣಗೊಳಿಸಬಹುದು ಎಂಬುದಾಗಿದೆ ಅಬ್ಶಿರ್ ವೇದಿಕೆಯ ವಿಶೇಷತೆ.