janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣ- ಕಾಸರಗೋಡು ಮಧ್ಯೆ ಎಲೆಕ್ಟ್ರಿಕ್‌ ಬಸ್- ಶೀಘ್ರದಲ್ಲೇ ಸಂಚಾರ ಆರಂಭ

ವಿಮಾನಯಾನ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲೂ ಎಲೆಕ್ಟ್ರಿಕ್‌ ಬಸ್‌ ಓಡಾಟ ಹಾಗೂ ಮುಂಗಡ ಬುಕ್ಕಿಂಗ್‌ ಬಗ್ಗೆ ಮಾಹಿತಿ ನೀಡಿದರೆ, ಇದು ಇನ್ನಷ್ಟು ಪರಿಣಾಮಕಾರಿಯಾಗಲಿದೆ.

ಮಂಗಳೂರು:ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಲವೇ ತಿಂಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು ಓಡಾಟ ನಡೆಸಲಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ, ಕಾಸರಗೋಡು, ಭಟ್ಕಳ ಹಾಗೂ ಮಣಿಪಾಲದಿಂದ ಎಲೆಕ್ಟ್ರಿಕ್‌ ಬಸ್‌ಗಳ ಓಡಾಟ ನಡೆಸಲು ಚಿಂತನೆ ನಡೆಸಿದೆ.

ಇದರಿಂದಾಗಿ ಈ ದೂರದ ಊರುಗಳಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನಕ್ಕೆ ಸುಲಭವಾಗಲಿದೆ. ಜತೆಗೆ ಪ್ರಯಾಣಿಕರ ಆಕರ್ಷಣೆಗೂ ಕಾರಣವಾಗಲಿದೆ. ಈ ಹಿಂದೆ ವಿಮಾನ ನಿಲ್ದಾಣಕ್ಕೆ ಸಿಟಿ ವೋಲ್ವೋ ಸಂಚಾರ ಏರ್ಪಡಿಸಿದರೂ ಪ್ರಯಾಣಿಕರ ಕೊರತೆ ತಲೆದೋರಿತ್ತು.

ಒಟ್ಟು ನಾಲ್ಕು ಎಲೆಕ್ಟ್ರಿಕ್ ಬಸ್‌ಗಳು ವಿಮಾನ ನಿಲ್ದಾಣಕ್ಕೆ ಓಡಾಟ ನಡೆಸುವ ಸಂಭವ ಇದ್ದು, ಈ ಬಸ್‌ಗಳಿಗೆ ಪ್ರತ್ಯೇಕ ಪರವಾನಗಿಯ ಅಗತ್ಯ ಇರುವುದಿಲ್ಲ. ಕೇವಲ ನೋಂದಣಿ ಮಾಡಿಸಿದರೆ ಸಾಕು, ಅಂತಾರಾಜ್ಯ ಓಡಾಟವನ್ನೂ ನಡೆಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿವೆ.

ವಿಮಾನಯಾನ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲೂ ಎಲೆಕ್ಟ್ರಿಕ್‌ ಬಸ್‌ ಓಡಾಟ ಹಾಗೂ ಮುಂಗಡ ಬುಕ್ಕಿಂಗ್‌ ಬಗ್ಗೆ ಮಾಹಿತಿ ನೀಡಿದರೆ, ಇದು ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಈ ಕುರಿತಂತೆ ವಿವಿಧ ವಿಮಾನಯಾನ ಕಂಪನಿಗಳ ಜತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪತ್ರವ್ಯವಹಾರಕ್ಕೆ ನಡೆಸಿದ್ದಾರೆ. ಮಾತ್ರವಲ್ಲ ಇತರೆ ಪ್ರಯಾಣಿಕರಿಗೂ ಈ ಬಸ್‌ ಸಂಚಾರ ಅನುಕೂಲವಾಗಲಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಇದಕ್ಕೆ ಅವಶ್ಯಕವಾದ ಚಾರ್ಜಿಂಗ್‌ ಪಾಯಿಂಟ್‌ ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದಿಂದ ಬಸ್‌ಗಳು ಬಂದ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತವಾಗಲಿದ್ದೇವೆ ಎಂದು ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ ತಿಳಿಸಿದ್ದಾರೆ

ಮಂಗಳೂರು ವಿಭಾಗಕ್ಕೆ 45 ಎಲೆಕ್ಟ್ರಿಕ್‌ ಬಸ್‌ಗಳು ಬರಲಿದೆ. ಇದರಲ್ಲಿ 4 ಎಲೆಕ್ಟ್ರಿಕ್‌ ಬಸ್‌ ವಿಮಾನ ನಿಲ್ದಾಣಕ್ಕೆ, ಉಳಿದ ಬಸ್‌ಗಳನ್ನು ಮಂಗಳೂರಿನಿಂದ ಧರ್ಮಸ್ಥಳ, ಉಡುಪಿ, ಕಾಸರಗೋಡು, ಕುಂದಾಪುರ-ಭಟ್ಕಳ ನಡುವೆ ಸಂಚಾರಕ್ಕೆ ಇಳಿಸುವ ಸಾಧ್ಯತೆ ಇದೆ. ಇದಕ್ಕಾಗಿ ಮಂಗಳೂರು, ಉಡುಪಿ, ಕುಂದಾಪುರ, ಧರ್ಮಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್‌ ಮಾಡಲಾಗುತ್ತದೆ. ಒಂದು ಬಸ್‌ ಒಮ್ಮೆ ಚಾರ್ಜ್‌ ಮಾಡಿದರೆ 200 ಕಿ.ಮೀ. ವರೆಗೆ ಸಂಚರಿಸಬಹುದು. ಪೂರ್ತಿ ಚಾರ್ಜಿಂಗ್‌ಗೆ ನಾಲ್ಕು ತಾಸು ಬೇಕು. ಹಾಗಾಗಿ ದೂರದ ಊರುಗಳಿಗೆ ಎಲೆಕ್ಟ್ರಿಕ್‌ ಬಸ್‌ ಓಡಾಟ ಸುಲಭವಲ್ಲ ಎನ್ನುತ್ತಾರೆ ಅಧಿಕಾರಿಗಳು.

error: Content is protected !! Not allowed copy content from janadhvani.com