janadhvani

Kannada Online News Paper

ಮುಸ್ಲಿಮರನ್ನು ಕಗ್ಗೊಲೆ ನಡೆಸಿದ ಕ್ರೈಸ್ತರ ಎರಡನೇ ತಲೆಮಾರಿಗೆ ಸಂರಕ್ಷಣೆ ಒದಗಿಸಿದ ಸುಲ್ತಾನ್ ಸ್ವಲಾಹುದ್ದೀನ್

"ಕ್ರೌರ್ಯ, ಅಟ್ಟಹಾಸ ನಿಮ್ಮ ಸಂಸ್ಕೃತಿಯ ಸಂಕೇತ. ದಯೆ, ದಾಕ್ಷಿಣ್ಯ ನಮ್ಮ ಪ್ರವಾದಿಯವರ ಆದರ್ಶ"

ಶಿಲುಬೆ ಯುದ್ದ

✍️ಟಿ ಎಂ ಅನ್ಸಾರ್ ತಂಬಿನಮಕ್ಕಿ

ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬಿಯರ ಸೈನ್ಯ ಜೆರುಸೇಲಂನ ಸರಹದ್ದುಗಳ ಮೇಲೆ ದಾಳಿ ನಡೆಸಿತು. ಐವತ್ತು ಅಡಿ ಎತ್ತರದ ಕೋಟೆಯ ಗೋಡೆ ನೆಲಕ್ಕೆ ಕುಸಿದು ಬಿತ್ತು.
ಶತಮಾನಗಳ ನೆತ್ತರು ಹರಿಸಿದ ಕ್ರೈಸ್ತರ ಶಿಲುಬೆ ಯುದ್ದಕ್ಕೆ ನಿರ್ಣಾಯಕ ಪ್ರತಿರೋಧವಾಗಿತ್ತದು.
ಕೋಟೆ ದಾಟದಂತೆ ಮುಸ್ಲಿಂ ಸೇನೆಗೆ ಆಜ್ಞಾಪಿಸಿದರು ಸ್ವಲಾಹುದ್ದೀನ್.

“ಈಗಾಗಲೇ ಜರುಸಲೇಂನ ಗೋಡೆಗಳು ಕುಸಿದು ಬಿದ್ದಿದೆ. ಕೂಡಲೇ ಕ್ರೈಸ್ತರ ನಾಯಕ, ಮಾತುಕತೆಗೆ ಹಾಜರಾಗಬೇಕೆಂದು ಒಕ್ಕಣೆಯೊಂದನ್ನು ಬರೆದು ಕಳುಹಿಸಿದರು.

ಕ್ರೈಸ್ತರ ನಾಯಕ ಲಿಯಾಂಡರ್‌ ಇಳಿದು ಬಂದು ತನ್ನನ್ನು ಕರೆಸಿದ ಕಾರಣ ಕೇಳಿದ.
“ನಮ್ಮ ಸೈನ್ಯ ಈಗಾಗಲೇ ಜರುಸಲೇಂನ ಕೋಟೆಯ ಮೇಲೆ ದಾಳಿ ನಡೆಸಿದೆ. ಈ ಕೋಟೆಯನ್ನು ಸಂಪೂರ್ಣ ಬೇಧಿಸಿ ಒಳ ನುಗ್ಗಿದರೆ ಅಲ್ಲಿರುವ ಕ್ರೈಸ್ತ ಮಹಿಳೆಯರ, ಅಬಲೆಯರ, ದುರ್ಬಲರ, ಮಕ್ಕಳ ಪ್ರಾಣಕ್ಕೆ ಅಪಾಯ ಉಂಟಾಗಲಿದೆ. ಯುದ್ದ ಸ್ಪೋಟಗೊಂಡರೆ ಅಸಂಖ್ಯ ಅಮಾಯಕರು ಸಾಯುವ ಸಾಧ್ಯತೆಯಿದೆ. ಸೈನಿಕರಲ್ಲದ ಸಾವಿರಾರು ಮಂದಿಗೆ ಗಾಯಗಳಾಗಬಹುದು. ಆದ್ದರಿಂದ ಶಿಲುಬೆ ಯೋಧರನ್ನು ಹೊರತು ಪಡಿಸಿ ಸಾಕು ಪ್ರಾಣಿಗಳ ಸಮೇತ ಎಲ್ಲರನ್ನೂ ಕೋಟೆಯಿಂದ ಹೊರಗೆ ತಂದು ಕ್ರೈಸ್ತ ಬಾಹುಳ್ಯವಿರುವ ಲಬನಾನ್‌ಗೆ ಸ್ಥಳಾಂತರಗೊಳಿಸಿ.
ಯುದ್ದದ ವೇಳೆ ಸ್ತ್ರೀಯರು, ಮಕ್ಕಳು, ಅಬಲರು, ಮೃಗ-ಮರಗಳ ಸಾವು ಉಂಟಾಗಬಾರದೆಂದು ನಮ್ಮ ಪ್ರವಾದಿಯವರು ಕಲಿಸಿದ್ದಾರೆ”

ಸ್ವಲಾಹುದ್ದೀನ್‌ರ ಮಾತು ಕೇಳಿದ ಲಿಯಾಂಡರ್‌‌ನ ಕರ್ಣ ಪಟಲದಲ್ಲಿ ನೂರುವರ್ಷಗಳ ಹಿಂದಿನ ಕ್ರೈಸ್ತರ ಬರ್ಬರ ದಾಳಿ ಕಣ್ಣಮುಂದೆ ಬಂತು.

ಆತ ಸ್ವಲಾಹುದ್ದೀನ್‌ರಲ್ಲಿ ಕೇಳಿದ.
“ನೂರು ವರ್ಷಗಳ ಹಿಂದೆ ಕ್ರೈಸ್ತರು ಈ ಜರುಸಲೇಂ ಮೇಲೆ ದಾಳಿ ನಡೆಸಿದಾಗ ಇಲ್ಲಿ ನಡೆದದ್ದೇನೆಂದು ತಮಗೆ ಗೊತ್ತಿದೆಯೇ..?”
“ಓಹ್ ಸರಿಯಾಗಿ ಗೊತ್ತಿದೆ. ಅಸಂಖ್ಯ ಮುಸ್ಲಿಂ ಮಹಿಳೆಯರ ಮಾನಭಂಗಮಾಡಿ, ಮಕ್ಕಳನ್ನು ಕೊಂದು ಸರ್ವ ಜನರನ್ನೂ ಸುಟ್ಟು ಭಸ್ಮ ಮಾಡಿದ ರೌರವ ರಾಕ್ಷಸೀಯತೆಯ ಬಗ್ಗೆ ನನ್ನ ತಾತ ಚೆನ್ನಾಗಿಯೇ ವಿವರಿಸಿಕೊಟ್ಟಿದ್ದಾರೆ.” ನಿರ್ಲಿಪ್ತವಾಗಿಯೇ ಉತ್ತರಿಸಿದರು ಸ್ವಲಾಹುದ್ದೀನ್.

ಲಿಯಾಂಡರ್‌ ಅಚ್ಚರಿಯಿಂದ ಕೇಳಿದ.
“ಕ್ರೈಸ್ತರು ಅಂದು ಅಷ್ಟೆಲ್ಲಾ ಕ್ರೌರ್ಯ ತೋರಿದ್ದರೂ ಇಂದು ನಿಮಗೆ ಈ ತೆರನಾದ ದಯೆ ತೋರಲು ಹೇಗೆ ಸಾಧ್ಯವಾಯಿತು..?”
“ಕ್ರೌರ್ಯ, ಅಟ್ಟಹಾಸ ನಿಮ್ಮ ಸಂಸ್ಕೃತಿಯ ಸಂಕೇತ.
ದಯೆ, ದಾಕ್ಷಿಣ್ಯ ನಮ್ಮ ಪ್ರವಾದಿಯವರ ಆದರ್ಶ” ಪ್ರವಾದಿಯವರ ಆದೇಶವನ್ನು ನಾವು ದಿಕ್ಕರಿಸಲಾರೆವು. ಆದಷ್ಟು ಬೇಗ ಮಹಿಳೆಯರನ್ನೂ, ಮಕ್ಕಳನ್ನೂ ಕೋಟೆಯೊಳಗಿನಿಂದ ಹೊರತರುವಂತೆ ಅಜ್ಞಾಪಿಸಿದರು ಸುಲ್ತಾನ್ ಸ್ವಲಾಹುದ್ದೀನ್.

ಲಿಯಾಂಡರ್‌ ಅಲ್ಲಿದ್ದ ಸ್ತ್ರೀಯರು, ಮಕ್ಕಳು, ದುರ್ಬಲರು, ಹಾಗೂ ಸಾಕುಪ್ರಾಣಿಗಳೊಂದಿಗೆ‌ ಲಬನಾನ್‌ನ ಸುರಕ್ಷಿತ ಸ್ಥಳಕ್ಕೆ ತೆರಳಿದರು.

ಆ ಬಳಿಕ ಇಂಗ್ಲೆಂಡ್‌ನ ರಾಜಕುಮಾರ್ ರಿಚರ್ಡ್ ಲಯನ್ ಹಾರ್ಟ್ ತನ್ನ ಸೇನೆಯೊಂದಿಗೆ ಯುದ್ದಕ್ಕೆ ಬಂದ. ಕೋಟೆಯನ್ನು ಬೇಧಿಸಿ ಜೆರುಸಲೇಂ ಮೇಲೆ ಪವಡಿಸಿದ ಸ್ವಲಾಹುದ್ದೀನ್ ಸೈನ್ಯಕ್ಕೂ ರಿಚರ್ಡ್‌ನ ಶಿಲುಬೆ ಯೋಧರಿಗೂ ಯುದ್ದ ಘಟಿಸಿಯೇ ಬಿಟ್ಟವು.
ಮೂರು ಗಂಟೆಗಳ ಕಾಲ ಘೋರವಾದ ಯುದ್ದ ನಡೆದಾಗ ರಿಚರ್ಡ್ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟ.
ಸ್ವಲಾಹುದ್ದೀನ್ ಯುದ್ದ ನಿಲ್ಲಿಸಿ ಬಿಟ್ಟರು. ‘ಜ್ವರದ ನಿಮಿತ್ತ ರೋಗಿಯಾಗಿರುವ ರಿಚರ್ಡ್‌ನ ಸೇನೆಯೊಂದಿಗೆ ಯುದ್ದ ನಡೆಸುವುದು ಧರ್ಮ ದ್ರೋಹವಾಗಿದೆ. ರೋಗಿಯಾಗಿರುವ ಸೈನಿಕನನ್ನು ಕೊಲ್ಲಬಾರದೆಂದೂ, ಉಪದ್ರವಿಸಬಾರದೆಂದೂ ಪ್ರವಾದಿಯವರು ನಮಗೆ ತಿಳಿಸಿದ್ದಾರೆಂದೂ,
ರಿಚರ್ಡ್ ಗುಣ‌ಮುಖನಾದ ನಂತರ ಯುದ್ದ ಮುಂದುವರಿಸೋಣವೆಂದು ಹೇಳಿದ ಸ್ವಲಾಹುದ್ದೀನ್ ಅಂದಿಗೆ ಕದನ ವಿರಾಮ ಘೋಷಿಸಿದರು. ಮತ್ತು ರಿಚರ್ಡ್‌ಗೆ ಬೇಕಾದ ಔಷಧಿಗಳನ್ನೂ, ಪರಿಚಾರಕರನ್ನೂ ಕಳುಹಿಸಿದರು.

ಒಂದು ವಾರಗಳ ಬಳಿಕ ಗುಣಮುಖನಾದ ರಿಚರ್ಡ್ ತನ್ನ ಸೇನೆಯೊಂದಿಗೆ ಯುದ್ದಕ್ಕೆ ಬಂದ. ರಿಚರ್ಡ್‌ನನ್ನು ಸ್ವಲಾಹುದ್ದೀನ್‌ನ ಸೇನೆ ಜೀವಂತವಾಗಿ ಬಂಧಿಸಿದರು‌.
“ಈಗ ನಿನ್ನನ್ನು ಶಿರಚ್ಛೇದ ಮಾಡಬಹುದು. ಆದರೆ ಬಂಧಿಸಲ್ಪಟ್ಟ ಖೈದಿಗಳ ಮೈ ಮುಟ್ಟಬಾರದೆಂದೂ ಅವರಿಗೆ ಯಾವುದೇ ಹಿಂಸೆ ನೀಡಬಾರದೆಂದೂ ಪ್ರವಾದಿಯವರು ನಮಗೆ ಕಲಿಸಿದ್ದಾರೆ. ಆದರೆ ನಿಮ್ಮ ಸೇನೆ ಇಲ್ಲಿ ಬಂದು ಹಲವು ನಾಶ-ನಷ್ಟ ಉಂಟು ಮಾಡಿದೆ. ಅದಕ್ಕೆ ಎಪ್ಪತ್ತರಡು ಪೌಂಡ್ ಸಂದಾಯಿಸಿದರೆ ತಮ್ಮನ್ನು ಜೀವಂತ ಬಿಡುಗಡೆ ಮಾಡುತ್ತೇನೆಂದರು ಸ್ವಲಾಹುದ್ದೀನ್.

ಹಾಗೆ ಇಂಗ್ಲೆಂಡ್‌ನ ರಾಯಭಾರಿಗಳು ಎಪ್ಪತ್ತೆರಡು ಪೌಂಡ್ ಶೇಖರಿಸಿ ಸ್ವಲಾಹುದ್ದೀನ್‌ಗೆ ನೀಡಿದಾಗ ರಿಚರ್ಡ್‌ನನ್ನು ಬಂಧ ಮುಕ್ತಗೊಳಿಸಲಾಯಿತು.
ಆ ಬಳಿಕ ಆತ ಇಂಗ್ಲೆಂಡ್‌ನ ಪ್ರಖ್ಯಾತ ಚಕ್ರವರ್ತಿಗಳಲ್ಲೊಬ್ಬನಾಗಿ ಗುರುತಿಸಲ್ಪಟ್ಟ.
•••••
ಹಾಲಿವುಡ್‌ನಲ್ಲಿ ವಿಶ್ವ ಪ್ರಸಿದ್ದ ಸಿನಿಮಾವೊಂದಿದೆ. the city of heaven. ಹೆವೆನ್ ಅಂದರೆ ಜೆರುಸಲೇಂ ಎಂದರ್ಥ. ಶಿಲುಬೆ ಯುದ್ದ ಆಧಾರಿತ ಸಿನಿಮಾ ಅದು. (ಮೇಲಿನ ಘಟನೆ ಸಿನಿಮಾದಿಂದ ಬರೆದಿದ್ದಲ್ಲ) ಅದರಲ್ಲಿ ಮಹಿಳೆಯರನ್ನೂ, ಮಕ್ಕಳನ್ನೂ ಸಾಕು ಪ್ರಾಣಿಗಳನ್ನೂ ಸುರಕ್ಷಿತ ಸ್ಥಳಕ್ಕೆ ತೆರಳಲು ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬಿಯವರು ಅನುವು ಮಾಡುವ ದೃಶ್ಯವನ್ನು ಅತ್ಯಂತ ರೋಚಕವಾಗಿ ಚಿತ್ರೀಕರಿಸಲಾಗಿದೆ.
ತಮ್ಮ ಪೂರ್ವಿಕರನ್ನು ಕಗ್ಗೊಲೆ ನಡೆಸಿದ ಕ್ರೈಸ್ತರ ಎರಡನೇ ತಲೆಮಾರಿಗೆ ಸುರಕ್ಷತೆಯ ಮಾರ್ಗವನ್ನು ತೋರಿಸಿದ ಸ್ವಲಾಹುದ್ದೀನ್ ಎಂಬ ಆಂಬೋಣವನ್ನು ಪ್ರತ್ಯೇಕವಾಗಿ ಆ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ.
•••••
ಅಮೇರಿಕಾ ಸಮೇತ ಜಗತ್ತಿನ ಉಗ್ರ ರಾಷ್ಟ್ರಗಳು ನಡೆಸುವ ದಾಳಿ, ಆಕ್ರಮಣಗಳಲ್ಲಿ ಅಸುನೀಗುವ ಅಸಂಖ್ಯ ಮಹಿಳೆಯರ, ಮಕ್ಕಳ ರೋಧನೆಗಳ ನಡುವೆ ಇಂದಿನ ವರ್ತಮಾನಕ್ಕೆ ಪ್ರವಾದಿಯವರ ಈ ಸಂದೇಶಗಳು ಪ್ರಸಕ್ತವಾಗುತ್ತದೆ.

(‘ಇಸ್ಲಾಮಿಕ್ ವೇ ಕನ್ನಡ ಪೇಜ್’ ಫೇಸ್ಬುಕ್ ಪುಟದಿಂದ)

error: Content is protected !! Not allowed copy content from janadhvani.com