ಮಂಗಳೂರು :ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ಇಸ್ರೇಲಿ ಸೈನಿಕರು ಗಾಝಾದತ್ತ ಭೂದಾಳಿಗೆ ಮುನ್ನುಗ್ಗುತ್ತಿದೆ. ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಫಲಸ್ತೀನಿನ ಮುಗ್ದ ಮಕ್ಕಳು,ಗರ್ಭಿಣಿಗಳು ಸಹಿತ ಎರಡು ಸಾವಿರಕ್ಕೂ ಮಿಕ್ಕ ನಾಗರಿಕರು ಮೃತಪಟ್ಟಿದ್ದಾರೆ.
ಏತನ್ಮಧ್ಯೆ, ಇಸ್ರೇಲ್‌ನಲ್ಲಿ ಸಂಘರ್ಷಕ್ಕಿಳಿದಿರುವ ಹಮಾಸ್‌ನ ಗೆಲುವಿಗೆ ವಿಶೇಷ ಪ್ರಾರ್ಥನೆಗೆ ಕರೆ ನೀಡಿದ ಆರೋಪದಲ್ಲಿ ನಗರದ ಬಂದರ್‌ನ ನಿವಾಸಿ ಝಾಕಿರ್ ಯಾನೆ ಝಾಕಿ(54) ಎಂಬವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಹಮಾಸ್‌ನ ಗೆಲುವಿಗಾಗಿ ವಿಶೇಷ ಪ್ರಾರ್ಥನೆಗೆ ಕರೆ ನೀಡಿದ್ದ ಝಾಕಿರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎನ್ನಲಾಗಿದೆ.
30 ಸೆಕೆಂಡುಗಳ ವಿಡಿಯೊದಲ್ಲಿ ತನ್ನನ್ನು ಮಂಗಳೂರಿನ ಖಬರಸ್ಥಾನ ಪ್ರೇಮಿ ಸಂಘದ ಸದಸ್ಯ ಎಂದು ಗುರುತಿಸಿ ಕೊಂಡಿದ್ದ ಝಾಕೀರ್, ಫಲಸ್ತೀನ್, ಗಾಝಾ ನಿವಾಸಿಗಳು ಮತ್ತು ಹಮಾಸ್ ಪರ ತನ್ನ ಗುಂಪಿನ ಸದಸ್ಯರು ‘ದುಆ’ (ವಿಶೇಷ ಪ್ರಾರ್ಥನೆ) ನಡೆಸುವಂತೆ ಮನವಿ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಇದೀಗ, ಝಾಕಿರ್ ಬಂಧನದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಹಲವಾರು ಕಡೆಗಳಿಂದ ಖಂಡನೆಗಳು ಕೇಳಿಬರುತ್ತಿದೆ. ಝಾಕಿರ್ ಬಗ್ಗೆ ಅಸಮಾಧಾನ ಹೊಂದಿರುವ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಪ್ತರಾಗಿರುವ, ಮಂಗಳೂರಿನ ಉನ್ನತ ಮುಸ್ಲಿಮ್ ನಾಯಕರೊಬ್ಬರ ಕುಮ್ಮಕ್ಕಿನಿಂದಾಗಿ ಝಾಕಿರ್ ಬಂಧನವಾಗಿದೆ ಎನ್ನಲಾಗುತ್ತಿದ್ದು, ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಆದರೆ, ಈ ಕೃತ್ಯದಿಂದ ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಾಯಕ ತೋರಗಲ್ ಎಂಬವರು ಸ್ವಯಂ ದೂರು ದಾಖಲಿಸಿ ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂಲತಃ ಜೋಕಟ್ಟೆಯ ನಿವಾಸಿಯಾಗಿದ್ದ ಆರೋಪಿ ಝಾಕಿರ್ ವಿರುದ್ಧ ಈ ಹಿಂದೆ 7 ಪ್ರಕರಣಗಳು ದಾಖಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.