ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನವನ್ನು ಹೈಜಾಕ್ ಮಾಡುವುದಾಗಿ ಇ- ಮೇಲ್ ಮೂಲಕ ಬೆದರಿಕೆ ಹಾಕಿದ ಕಾರಣ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದ ಪ್ರಕರಣವು ನಿನ್ನೆ ವರದಿಯಾಗಿದೆ.
ವಿಮಾನ ನಿಲ್ದಾಣದ ವ್ಯವಸ್ಥಾಪಕರಿಗೆ, ಭಾನುವಾರ ಸಂಜೆ ‘ದುಬೈಗೆ ಹೊರಟಿರುವ ವಿಮಾನದಲ್ಲಿ ಐಎಸ್‌ಐ ಉಗ್ರರಿಗೆ ಮಾಹಿತಿ ನೀಡುವ ವ್ಯಕ್ತಿಯಿದ್ದಾನೆ, ಆತ ವಿಮಾನವನ್ನು ಹೈಜಾಕ್ ಮಾಡಲಿದ್ದಾನೆ, ಅಲ್ಲದೆ ಆತ ವಿಮಾನ ನಿಲ್ದಾಣದಿಂದಲೇ ಕೆಲವು ಜನರ ಸಹಾಯವನ್ನು ಪಡೆದಿದ್ದಾನೆ’ ಎಂದು ಸುಳ್ಳು ಬೆದರಿಕೆ ಇ- ಮೇಲ್ ಕಳುಹಿಸಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಹಿರಿಯ ಪೊಲೀಸ್ ಕಮಿಷನರ್, ಇದೊಂದು ನಕಲಿ ಇ-ಮೇಲ್ ಬೆದರಿಕೆ ಎಂದು ಪತ್ತೆ ಮಾಡಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಬೆದರಿಕೆ ಕರೆಯಿಂದ ವಿಮಾನ ರದ್ದುಪಡಿಸಿ ಪ್ರಯಾಣಕರಿಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗಿದೆ.
ಅನುಮಾನ ಬಂದ ಹಿನ್ನೆಲೆಯಲ್ಲಿ ತಿರುಪತಿ ಬಾದಿನೇನಿ, ಎಲ್ ವಿನೋದ್ ಕುಮಾರ್ ಮತ್ತು ಆರ್ ರಾಕೇಶ್ ಕುಮಾರ್ ಅವರನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ತಿರುಪತಿ ಬಾದಿನೇನಿ ಅವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯನ್ನು ಸಹ ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.