janadhvani

Kannada Online News Paper

ಹಮಾಸ್- ಇಸ್ರೇಲ್ ಯುದ್ಧ: ಇಸ್ರೇಲ್‌ ಜೊತೆಗೆ ನಾವಿದ್ದೇವೆ- ಪ್ರಧಾನಿ ನರೇಂದ್ರ ಮೋದಿ

ಇದೊಂದು ಅಲ್‌ ಅಕ್ಸಾ ಪ್ರವಾಹ ಕಾರ್ಯಾಚರಣೆಯಾಗಿದೆ ಎಂದು ಹಮಾಸ್‌ ಘೋಷಿಸಿದೆ.

ಪ್ಯಾಲೆಸ್ತೇನ್:‌ ಪ್ಯಾಲೆಸ್ತೇನ್‌ ನ ಹಮಾಸ್‌ ಗಾಜಾಪಟ್ಟಿಯಿಂದ ಸಾವಿರಾರು ರಾಕೆಟ್‌ ದಾಳಿ ನಡೆಸಿದ್ದು, ಇದರ ಪರಿಣಾಮ 22 ಮಂದಿ ಇಸ್ರೇಲಿಗರು ಸಾವನ್ನಪ್ಪಿದ್ದಾರೆ. ಇದರಿಂದ ಕೆರಳಿರುವ ಇಸ್ರೇಲ್‌ ಪ್ರತೀಕಾರ ತೆಗೆದುಕೊಳ್ಳುವುದಾಗಿ ಶಪಥಗೈದಿದ್ದು ಯುದ್ಧ ಘೋಷಿಸಿದೆ.‌

ನಾವು ದೇವರ ನೆರವಿನೊಂದಿಗೆ ಈ ಎಲ್ಲಾ ಸಂಘರ್ಷವನ್ನು ಕೊನೆಗೊಳಿಸಲು ಮುಂದಾಗಿದ್ದೇವೆ. 20 ನಿಮಿಷಗಳ ಅವಧಿಯಲ್ಲಿ 5,000 ಸಾವಿರಕ್ಕೂ ಅಧಿಕ ರಾಕೆಟ್‌ ದಾಳಿ ನಡೆಸಿದ್ದು, ಇದೊಂದು ಅಲ್‌ ಅಕ್ಸಾ ಪ್ರವಾಹ ಕಾರ್ಯಾಚರಣೆಯಾಗಿದೆ ಎಂದು ಹಮಾಸ್‌ ಘೋಷಿಸಿದೆ.

ಇಸ್ರೇಲ್‌ ನಿವಾಸಿಗಳೇ, ನಾವು ಯುದ್ಧವನ್ನು ಘೋಷಿಸಿದ್ದೇವೆ. ಹಮಾಸ್‌ ಉಗ್ರರು ರಾಕೆಟ್‌ ದಾಳಿ ನಡೆಸಿದ್ದು, ಇದಕ್ಕೆ ತಕ್ಕ ಬೆಲೆ ತೆರಲಿದ್ದಾರೆ. ಇದೊಂದು ಕಾರ್ಯಾಚರಣೆಯಲ್ಲ, ಇದು ಯುದ್ಧವಾಗಿದೆ. ನಾವು ಈ ಯುದ್ಧದಲ್ಲಿ ಜಯಗಳಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಹಮಾಸ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಮೂಲಕ ಬಹುದೊಡ್ಡ ಪ್ರಮಾದ ಎಸಗಿದೆ. ದೇಶದ ಪ್ರತಿಯೊಂದು ಭಾಗದಲ್ಲಿಯೂ ಇಸ್ರೇಲ್‌ ಸೇನೆ ನಮ್ಮ ಶತ್ರುಗಳ ವಿರುದ್ಧ ಹೋರಾಡಲಿದೆ ಎಂದು ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌ ತಿಳಿಸಿದ್ದಾರೆ

ಭಾರತೀಯ ನಿವಾಸಿಗಳಿಗೆ ಮನವಿ:

ಇಸ್ರೇಲ್‌ ನಲ್ಲಿ ವಾಸವಾಗಿರುವ ಭಾರತೀಯ ನಾಗರಿಕರು ಜಾಗರೂಕರಾಗಿದ್ದು, ಸೇನೆಯ ಸಲಹೆಯನ್ನು ಗಮನಿಸುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಅನಾವಶ್ಯಕ ತಿರುಗಾಟ ನಡೆಸದಂತೆ ಸುರಕ್ಷಿತಾ ಸ್ಥಳದಲ್ಲಿ ಆಶ್ರಯ ಪಡೆದುಕೊಳ್ಳುವಂತೆ ಭಾರತ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಇಸ್ರೇಲ್‌ ಜೊತೆಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ- ನರೇಂದ್ರ ಮೋದಿ

ನವದೆಹಲಿ/ಟೆಲ್‌ ಅವಿವ್‌: ಕಷ್ಟದ ಸಮಯದಲ್ಲಿ ಇಸ್ರೇಲ್‌ ಜೊತೆಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎಕ್ಸ್‌ನಲ್ಲಿ ಮೋದಿ ಅವರು, ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಲಿಯಾದ ಮುಗ್ಧ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ.