janadhvani

Kannada Online News Paper

ಸಾರಿಗೆ ಉದ್ಯಮಿ ಮಹೇಶ್‌ ಮೋಟರ್ರ್ಸ್‌ ನ ಮಾಲಕ ಪ್ರಕಾಶ್‌ ಶೇಖ ಆತ್ಮಹತ್ಯೆ

ತನ್ನ ರೂಮಿನಲ್ಲಿ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ

ಮಂಗಳೂರು: ಮಂಗಳೂರಿನ ಮಹೇಶ್‌ ಮೋಟರ್ರ್ಸ್‌ ನ ಮಾಲಕ ಪ್ರಕಾಶ್‌ ಶೇಖ(48) ಅವರು ಕದ್ರಿಕಂಬಳದ ತಮ್ಮ ಫ್ಲ್ಯಾಟ್‌ನಲ್ಲಿ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖ್ಯಾತ ಸಾರಿಗೆ ಉದ್ಯಮಿ, ಬಸ್‌ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ ಅವರ ಪುತ್ರರಾಗಿರುವ ಪ್ರಕಾಶ್‌ ಅವರು, ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ‘ಮಹೇಶ್ ಮೋಟಾರ್ಸ್‌’ಗೆ ಸೇರಿದ ಅನೇಕ ಸಿಟಿ ಬಸ್ ಮತ್ತು ಜಿಲ್ಲಾ ಬಸ್‌ಗಳು ಪ್ರತಿದಿನವೂ ಸಂಚರಿಸುತ್ತಿದ್ದು, ಜನಪ್ರಿಯವಾಗಿದೆ.

ಫ್ಲ್ಯಾಟ್‌ನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ವಾಸವಾಗಿದ್ದ ಅವರು ರವಿವಾರ ಬೆಳಗ್ಗೆ ತನ್ನ ರೂಮ್‌ಗೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೂ ಹೊರಗೆ ಬಂದಿರಲಿಲ್ಲ. ಪತ್ನಿ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಪ್ರಕಾಶ್‌ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಘಟನೆ ಸಂಬಂಧ ಕದ್ರಿ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತಾಪ

ಪ್ರಕಾಶ್‌ ಶೇಖ ಅವರ ನಿಧನಕ್ಕೆ ಸಿಟಿಬಸ್‌ ಮಾಲಕರ ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪಾಡಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್‌, ಮಾಜಿ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ, ದಿಲ್‌ರಾಜ್‌ ಆಳ್ವ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com