janadhvani

Kannada Online News Paper

ರಿಯಾದ್: ಈ ವರ್ಷದ ದೇಶೀಯ ಹಜ್ ಪ್ಯಾಕೇಜ್ ದರಗಳನ್ನು ಪ್ರಕಟಿಸಲಾಗಿದೆ. ಸೇವಾ ಗುಣಮಟ್ಟವನ್ನು ಆಧರಿಸಿ ಪ್ಯಾಕೇಜುಗಳನ್ನು ವಿವಿಧವಾಗಿ ವರ್ಗೀಕರಿಸಲಾಗಿದೆ.

ಹಜ್ ಸಚಿವಾಲಯವು 10,000 ಯಾತ್ರಿಗಳಿಗೆ ಕಡಿಮೆ ವೆಚ್ಚದ ಹಜ್ ಪ್ಯಾಕೇಜ್(ಅಲ್ ಮುಐಸರ್) ನೀಡಲಾಗುವುದು ಎಂದು ಘೋಷಿಸಿದೆ.

ದೇಶೀಯ ಯಾತ್ರಾರ್ಥಿಗಳಿಗೆ ಪ್ಯಾಕೇಜ್ 3,465 ರಿಯಾಲ್ ನಿಂದ 11,905 ರಿಯಾಲ್ ವರೆಗೆ ಇರುತ್ತದೆ. ಪ್ಯಾಕೇಜನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ, ಜಂರಾದಿಂದ ಡೇರೆಗೆ ಇರುವ ದೂರ, ಹಜ್ಜ್ ನಲ್ಲಿ ಸೇವಾ ಏಜನ್ಸಿ ನೀಡುವ ಸೇವೆಗಳನ್ನು ಅವಲಂಬಿಸಿ ದರ ನಿಗದಿಪಡಿಸಲಾಗಿದೆ.

ಜಂರಾದ ಹತ್ತಿರದ ಮಿನಾ ಟವರ್‌ನಲ್ಲಿ ಉಳಿದುಕೊಳ್ಳುವ ಪ್ಯಾಕೇಜ್ ನ ಬೆಲೆಯು ಅತ್ಯಧಿಕವಾಗಿರುವುದು.

ಹಜ್ ಪ್ಯಾಕೇಜ್ ನ ಕಡಿಮೆ ವೆಚ್ಚವೆಂದರೆ ‘ಹಜ್ ಅಲ್ ಮುಐಸರ್’. ಈ ಪ್ಯಾಕೇಜ್ 10,000 ಯಾತ್ರಿಕರಿಗೆ ಲಭ್ಯವಾಗಲಿದೆ.ಮೊದಲು ನೋಂದಾಯಿಸಿ ಹಣ ಪಾವತಿಸಿದವರಿಗೆ ಈ ಪ್ಯಾಕೇಜ್‌ನ ಅವಕಾಶ ಲಭಿಸುವುದು.ಅವರು ಮಿನಾದ ಗಡಿಯ ಹೊರಗಿನ ಕಟ್ಟಡಗಳಲ್ಲಿ ವಾಸವಿರಬೇಕಾಗುತ್ತದೆ.ಪ್ರಮುಖ ದಿನಗಳಲ್ಲಿ ಬಸ್ ಗಳಲ್ಲಿ ಪ್ರಯಾಣಿಸಬೇಕಾಗುತ್ತದೆ. ಆದರೆ ದುಲ್ಹಜ್ 11 ರಿಂದ 13 ರವರೆಗೆ ರೈಲು ಗಾಡಿಯ ಸೌಕರ್ಯ ಲಭ್ಯವಾಗಲಿದೆ.

ದೇಶೀಯ ಯಾತ್ರಿಗಳಿಗೆ ನೋಂದಣಿ ಪ್ರಕ್ರಿಯೆಯು ಜುಲೈ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ಆನ್ ಲೈನ್ ನೋಂದಣಿ ಮೂಲಕ ಹಣ ಪಾವತಿಸ ಬೇಕಾಗುವುದು.

ಹಣ ಪಾವತಿಸಿ ಪರವಾನಗಿ ಲಭಿಸುವ ಮೊದಲು ಬುಕಿಂಗ್ ನ್ನು ರದ್ದುಗೊಳಿಸಿದರೆ, 68.25 ರಿಯಾಲ್ ದಂಡ ವಿಧಿಸಲಾಗುವುದು.ದುಲ್ಹಜ್ ಮೂರು, ನಾಲ್ಕು, ಐದು ಮತ್ತು ಆರು ದಿನಗಳಲ್ಲಿ ರದ್ದುಗೊಳಿಸಿದರೆ 30 ಶೇಕಡಾದಿಂದ 70 ಶೇಕಡಾ ವರೆಗೆ ದಂಡ ಇರುತ್ತದೆ.

ಹಜ್ ಯಾತ್ರೆಗೆ ತೆರಳುವ ದುಲ್ ಹಜ್ ಏಳಕ್ಕೆ ರದ್ದು ಪಡಿಸಿದರೆ ಪಾವತಿಸಿದ ಹಣ ಹಿಂದಿರುಗಿಸಲಾಗುವುದಿಲ್ಲ. ಇದರ ಹೊರತಾಗಿ ಸರ್ವೀಸ್ ಚಾರ್ಜಾಗಿ 68.25 ರಿಯಾಲ್ ಮತ್ತು ಬ್ಯಾಂಕ್ ಚಾರ್ಜ್ 6.35 ರಿಯಾಲ್ ಪಾವತಿಸಬೇಕಾಗುತ್ತದೆ.

ಡೇರೆಗಳಲ್ಲಿ ಯಾತ್ರಿಗಳಿಗೆ ಕನಿಷ್ಠ 1.6 ಚದರ ಮೀಟರ್ ಜಾಗವನ್ನು ಅನುಮತಿಸಬೇಕು ಎಂದು ಹಜ್ ಸಚಿವಾಲಯ ಶಿಫಾರಸು ಮಾಡಿದೆ.

error: Content is protected !! Not allowed copy content from janadhvani.com