janadhvani

Kannada Online News Paper

ಕರ್ನಾಟಕ SSF ನ ಮೊದಲ ಅಧ್ಯಕ್ಷ: ಎ.ಬಿ. ಹಸನುಲ್ ಪೈಝಿ ಅಜ್ಜಾವರ

✍️ ಎಂ ಹೆಚ್ ಹಸನ್ ಝುಹ್‌ರಿ,ಮಂಗಳಪೇಟೆ

ಕರ್ನಾಟಕದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ SSF ಎಂಬ ಸಂಘಟನೆಗೆ ರೂಪು ನೀಡುವ ಮೂಲಕ ದ‌ಅ್‌ವಾ ರಂಗಕ್ಕೆ ಮುನ್ನುಡಿ ಬರೆದವರು ಎಬಿ ಹಸನುಲ್ ಫೈಝಿ ಉಸ್ತಾದರು. ಉಸ್ತಾದರ ದೀರ್ಘ ದೃಷ್ಟಿಯ ಫಲ. SSF ಇಂದು ಬೆಳೆದು ಹೆಮ್ಮರವಾಗಿ ನಿಂತಿದೆ.

ಕರ್ನಾಟಕದ ಮೂವತ್ತೊಂದು ಜಿಲ್ಲೆಯಲ್ಲಿಯೂ SSF ತನ್ನ ಅಸ್ತಿತ್ವವನ್ನು ಭದ್ರವಾಗಿ ಕಟ್ಟಿಕೊಂಡಿದೆ. ಲಕ್ಷಾಂತರ ಕಾರ್ಯಕರ್ತರ ಪಡೆಯನ್ನೂ SSF ಹೊಂದಿದೆ.

ಅಬ್ದುಲ್ ಖಾದರ್ ಆಸಿಯಮ್ಮ ದಂಪತಿಗಳ ಹನ್ನೊಂದು ಮಕ್ಕಳಲ್ಲಿ ಏಳನೇಯವರಾದ ಹಸನುಲ್ ಫೈಝಿಯವರು 1953 ರಲ್ಲಿ ಸುಳ್ಯಾ ತಾಲೂಕಿನ ಅಜ್ಜಾವರದಲ್ಲಿ ಜನಿಸಿದರು.ತನ್ನ ಪ್ರಾಥಮಿಕ ಶಿಕ್ಷಣ ಐದನೇ ತರಗತಿಯಲ್ಲಿ ಮೊಟಕುಗೊಂಡಾಗ 1965 ರಲ್ಲಿ ಕಕ್ಕಿಂಜೆ ಮೂಸ ಮುಸ್ಲಿಯಾರ್ ರವರ ದೇಲಂಪಾಡಿ ದರ್ಸ್‌ಗೆ ಸೇರಿಕೊಂಡರು.

ಆ ಬಳಿಕ ಉದ್ದಾಮ ವಿದ್ವಾಂಸರಾದ ಪಿಎ ಅಬ್ದುಲ್ಲ ಮುಸ್ಲಿಯಾರ್ ಮಟ್ಟಕಾರ್, ಅಬ್ದುರ್ರಹ್‌ಮಾನ್ ಜಮಾಲುಲೈಲ್ ತಂಙಳ್ ಕರುಂದೂರ್,ಶಂಸುಲ್ ಉಲಮಾ ಈಕೆ ಉಸ್ತಾದ್,ಕೋಟುಮಲ ಉಸ್ತಾದ್, ಕೆಕೆ ಅಬೂಬಕ್ಕರ್ ಮುಸ್ಲಿಯಾರ್ ಕಕ್ಕಡಿಪುರಮ್ ಮುಂತಾದವರ ಬಳಿ ವಿದ್ಯಾರ್ಜನೆಗೈದು 1978 ರಲ್ಲಿ ಪಟ್ಟಿಕ್ಕಾಡ್ ಜಾಮಿಅ: ನೂರಿಯ್ಯಾ ದಿಂದ ಪೈಝಿ ಬಿರುದು ಪಡೆದರು. ಕುಂಬ್ರದ ಶೇಖ್‌ಮಲೆಯಲ್ಲಿ ದೀರ್ಘಾವಾದ ಹತ್ತು ವರ್ಷ ದರ್ಸ್ ನಡೆಸಿದ ಅವರು ಬಳಿಕ ಉಳ್ಳಾಲ ಸಮೀಪದ ಉಚ್ಚಿಲ ಮಸೀದಿಯಲ್ಲಿ ಏಳು ವರ್ಷ ಸೇವೆ ಗೈದರು. ಉಚ್ಚಿಲ ಮಸೀದಿಯಿಂದ ಸೇವೆ ಮುಕ್ತರಾದ ಬಳಿಕ ವಿದೇಶಕ್ಕೆ ತೆರಳಿ ಅಲ್ಲಿ ಹತ್ತು ವರ್ಷಗಳ ಕಾಲ ದುಡಿದಿದ್ದರು.

ಆಕಸ್ಮಿಕವಾಗಿ ರೋಗವೊಂದರ ಬಲೆಗೆ ತುತ್ತಾದ ಅವರು ಇದೀಗ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದಾರೆ. ಕೇರಳದ ಪಟ್ಟಕ್ಕಾಡ್‌ನಲ್ಲಿ ಕಲಿಯುವ ಸಮಯದಲ್ಲೇ SSF ನಲ್ಲಿ ಗುರುತಿಸಿಕೊಂಡಿದ್ದರು.

ಸಕ್ರೀಯವಾಗಿ ಸಂಘಟನಾ ರಂಗದಲ್ಲಿ ಗುರುತಿಸಿ ಕೊಂಡಿದ್ದ ಉಸ್ತಾದರನ್ನು ಕೇರಳದಲ್ಲಿಯೇ ಸೇವೆಗೆ ನಿಂತು ಸಂಘಟನೆಗಾಗಿ ದುಡಿಯಲು ಅಂದಿನ ಮಲಪ್ಪುರಮ್‌ ಸಂಘಟನಾ ನಾಯಕರು ಒತ್ತಾಯಿಸಿದ್ದರೆಂದು ಉಸ್ತಾದರು ನೆನಪಿಸುತ್ತಾರೆ.

ಆದರೆ, ಅವರ ಬೇಡಿಕೆಯನ್ನು ತಿರಸ್ಕರಿಸಿದ ಉಸ್ತಾದರು ಪುತ್ತೂರು ಸಮೀಪದ ಶೇಖ್‌ಮಲೆ ಯನ್ನು ಕರ್ಮಭೂಮಿಯಾಗಿ ಆಯ್ಕೆ ಮಾಡಿಕೊಂಡರು. ಬೋಧನೆಗಾಗಿ ಹೊಸ ಹೆಜ್ಜೆಗಳನ್ನು ಇರಿಸುವ ಸಮಯದಲ್ಲಿ ಪುತ್ತೂರು ಕೇಂದ್ರೀಕರಿಸಿ SSFಗೆ ಜನ್ಮ ನೀಡಿದ್ದರು.1980 ರಲ್ಲಿ ಪುತ್ತೂರು ಕೇಂದ್ರವಾಗಿ ರೂಪಿತವಾದ‌ SSF ನ ಮೊದಲ ಅಧ್ಯಕ್ಷರೂ ಉಸ್ತಾದರೇ ಆಗಿದ್ದರು. 1989 ರಲ್ಲಿ SSF ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬಂದಾಗ ಅದರ ಪ್ರಥಮ ಅಧ್ಯಕ್ಷರಾಗಿ ಆಯ್ಕೆ ಗೊಂಡರು. 1989 ರಲ್ಲಿ SSF ರಾಜ್ಯ ಸಮಿತಿಗೆ ಬುನಾದಿ ಹಾಕಲು ಹೊರಟು ಅದಕ್ಕಾಗಿ ಮಂಗಳೂರಿನ ರಾಜಧಾನಿ ಹೋಟೆಲ್ ನಲ್ಲಿ ಸಭೆ ಸೇರಲಾಗಿತ್ತು. ಮರುದಿನ ಬಾಡಿಗೆ ನೀಡಲು ಹರಸಾಹಸ ಪಟ್ಟಿದ್ದರಂತೆ.

ಎಲ್ಲರೂ ತಮ್ಮಲ್ಲಿದ್ದ ಹಣ ವನ್ನು ಹೊಂದಿಸಿ ಬಾಡಿಗೆ ನೀಡಿದ್ದರು‌‌. ಊಟ ಮಾಡಲು ಕೂಡ ಯಾರ ಬಳಿಯೂ ನಯಾಪೈಸೆಯೂ ಇರಲಿಲ್ಲವಂತೆ! ಹೀಗೆ ತ್ಯಾಗ ದೊಂದಿಗೆ ಕಟ್ಟಿ ಬೆಳೆಸಿದ SSF ನ ಮೊದಲ ಅಧ್ಯಕ್ಷರಾದ ಉಸ್ತಾದರು ನಾಲ್ಕು ವರ್ಷಗಳ ಕಾಲ ಆ ಗಾದಿಯಲ್ಲಿದ್ದರು.‌1994 ವಿದೇಶಕ್ಕೆ ತೆರಳಿ,ಅಲ್ಲಿ ಅಲ್ ಕೋಬರ್ ಕೇಂದ್ರ ವಾಗಿಟ್ಟು ದಕ್ಷಿಣ ಕನ್ನಡ ಸುನ್ನೀ ಸೆಂಟರ್‌ಗೆ ರೂಪು ನೀಡಿ ಕಾರ್ಯಾಚರಣೆಗಿಳಿದರು.

ಸೌದಿ ಅರೇಬಿಯಾದ ವಿವಿಧ ಕಡೆ DKSC ಸ್ಥಾಪಿಸಿದರು. DKSC ಭದ್ರವಾಗುವುದರೊಂದಿಗೆ ಮೂಳೂರು ಸುನ್ನೀ ಸೆಂಟರ್ ಜನ್ಮ ತಾಳಿತು. ಮತ,ಲೌಕಿಕ ಸಮನ್ವಯ ಕೇಂದ್ರ ವಾಗಿ ಮೂಳೂರು ಸುನ್ನೀ ಸೆಂಟರ್ ಮುನ್ನಡೆಯುತ್ತಿದೆ. ಸಾವಿರಾರು ಸಂತತಿಗಳನ್ನು ಸಮುದಾಯಕ್ಕರ್ಪಿಸಿದ ಸಮರ್ಥ ಸೇವೆಯೊಂದಿಗೆ ಬೆಳ್ಳಿಹಬ್ಬವನ್ನು ದಾಟಿ ಮುನ್ನುಗ್ಗುತ್ತಿದೆ. ಸಂಘಟನೆಗಾಗಿ ದುಡಿದ ಉಸ್ತಾದರು ಜೀವನದ ಹಾದಿಯಲ್ಲಿ ಏನನ್ನೂ ಸಂಪಾದಿಸಿರಲಿಲ್ಲ. ವಿದೇಶದಲ್ಲಿ ಹತ್ತು ವರ್ಷ ದುಡಿದರೂ ಸ್ವಂತ ಮನೆಯನ್ನೂ ಕೂಡ ಉಸ್ತಾದರು ಕಟ್ಟಿರಲಿಲ್ಲ. ಉಸ್ತಾದರ ವಿಷಯ ತಿಳಿದ ಕೇರಳದ ನಾಸಿರ್ ಎಂಬಾತ ಮನೆ ನಿರ್ಮಿಸಲು ಮೊತ್ತವೊಂದನ್ನು ನೀಡಿದ್ದನ್ನು ಉಸ್ತಾದರು ಸ್ಮರಿಸುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ಪಿತ್ರಾರ್ಜಿತವಾಗಿ ಲಭಿಸಿದ ಜಾಗವನ್ನು ಮಾರಾಟ ಮಾಡಿ ಸುಳ್ಯಾ ಸಮೀಪದ ಮಾಂಬಿಳ ಎಂಬಲ್ಲಿ ಜಾಗ ಖರೀದಿಸಿ ಮನೆ ಕಟ್ಟೀದೇನೆಂದು ಉಸ್ತಾದರು ಹೇಳುತ್ತಾರೆ. ಮೂರು ಗಂಡು ಮತ್ತು ಒಂದು ಹೆಣ್ಣು ಮಗಳ ಸುಂದರವಾದ ಸಂಸಾರ ಉಸ್ತಾದರದ್ದು. ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿರುವ ಉಸ್ತಾದರಿಗೆ ಎಪ್ಪತ್ತು ವರ್ಷ ತುಂಬಿದೆ.ಉಸ್ತಾದರಿಗೆ ಅಲ್ಲಾಹನು ಪೂರ್ಣ ಆಫಿಯತ್ ನೀಡಲಿ. ಆರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ.

error: Content is protected !! Not allowed copy content from janadhvani.com