ಅಬುಧಾಬಿ: ಯುಎಇಯ ನೆಚ್ಚಿನ ತಾರೆ ಸುಹೈಲ್ ಉದಿಸಿದ್ದು, ಬೇಸಿಗೆಯ ಬಿಸಿಯ ಅಂತ್ಯದ ಸಂಕೇತವಾಗಿದೆ. ಸುಹೈಲ್ ನಕ್ಷತ್ರದ ಆಗಮನವು 53 ದಿನಗಳ ಕಾಲ ನಡೆಯುವ ಸುಹೈಲ್ ಋತುವಿನ ಆರಂಭವೆಂದು ಪರಿಗಣಿಸಲಾಗಿದೆ. ಪೂರ್ವ-ಪಶ್ಚಿಮ ದಿಗಂತದಲ್ಲಿ ಸುಹೈಲ್ ಕಾಣಿಸಿಕೊಂಡಿದೆ.
ಆದಾಗ್ಯೂ, ಖಾಸಗಿ ಖಗೋಳ ವೀಕ್ಷಣಾಲಯವು ನಿಮ್ಮ ಚಳಿಗಾಲದ ಬಟ್ಟೆಗಳನ್ನು ಹೊರತೆಗೆಯಲು ಇನ್ನೂ ಸಮಯವಾಗಿಲ್ಲ ಎಂದು ಹೇಳಿದೆ.
ಅಬುಧಾಬಿ ಮೂಲದ ಅಂತರಾಷ್ಟ್ರೀಯ ಖಗೋಳ ಕೇಂದ್ರದ ಪ್ರಕಾರ,ಆಕಾಶದಲ್ಲಿ ರಾತ್ರಿ ಸಿರಿಯಸ್ ನಂತರ ಎರಡನೇ ಪ್ರಕಾಶಮಾನವಾದ ನಕ್ಷತ್ರವಾಗಿದೆ ಸುಹೈಲ್. ಇದು ಭೂಮಿಯಿಂದ 313 ಜ್ಯೋತಿರ್ವರ್ಷ ದೂರದಲ್ಲಿದೆ.ಯುಎಇ ಯಲ್ಲಿ, ಮೀನುಗಾರಿಕೆ ಮತ್ತು ಕೃಷಿಗೆ ಸರಿಯಾದ ಸಮಯವನ್ನು ಸುಹೈಲ್ ನಕ್ಷತ್ರ ನಿರ್ಧರಿಸುತ್ತದೆ.
ಬಿರುಬೇಸಿಗೆಯಲ್ಲಿ ಬೇಯುತ್ತಿದ್ದ ಜನತೆಗೆ ಸುಹೈಲ್ ನಕ್ಷತ್ರ ಪರಿಹಾರವಾಗಿ ಕಾಣಿಸಿಕೊಂಡಿದೆ. ಸುಹೈಲ್ ಅರಬರ ನಂಬಿಕೆಯೊಂದಿಗೆ ಹೆಚ್ಚು ಸಂಬಂಧ ಹೊಂದಿರುವ ನಕ್ಷತ್ರ. ಸುಹೈಲ್ ನಕ್ಷತ್ರದ ಉದಯವನ್ನು ಸಾಂಪ್ರದಾಯಿಕವಾಗಿ ಅರಬರು ಶಾಖದ ಇಳಿಕೆಯ ಸಂಕೇತವಾಗಿ ನೋಡುತ್ತಾರೆ. ಮುಂದಿನ ಎರಡು ತಿಂಗಳುಗಳಲ್ಲಿ ಹಗಲಿನ ಅವಧಿ 13 ಗಂಟೆಗಳಿಗಿಂತ ಕಡಿಮೆಯಿರಲಿದೆ.